ಬಗಲಲ್ಲಿ ದೊಣ್ಣೆ ಹಿಡಿದಿರುವ ಬಿಜೆಪಿ ಗೂಂಡಾಗಳಿಗೆ ಕಾಂಗ್ರೆಸಿಗರು ಹೆದರಲ್ಲ: ಡಿ ಕೆ ಶಿವಕುಮಾರ್
ಬೆಂಗಳೂರು, ಜನವರಿ 23:ಬಿಜೆಪಿ ಗೂಂಡಾಗಳು ಕೈಯಲ್ಲಿ ಮಂತ್ರಾಕ್ಷತೆ ಹಿಡಿದಿದ್ದರೆ, ಬಗಲಲ್ಲಿ ದೊಣ್ಣೆ ಹಿಡಿದಿದ್ದಾರೆ. ಈ ಗೂಂಡಾಗಳ ಗೊಡ್ಡು ಬೆದರಿಕೆಗೆ ಯಾವುದೇ ಕಾಂಗ್ರೆಸಿಗ ಹೆದರುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈ ಶ್ರೀರಾಮ್ ಎಂದು ಕೂಗಿರುವುದಕ್ಕೆ ಬಿಜೆಪಿ ನಾಯಕರು ಟೀಕೆಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಿಡಿಕಾರಿದ್ದು, ಶ್ರೀರಾಮ ಬಿಜೆಪಿಯವರ ಮನೆಯ ಆಸ್ತಿಯೇ? ರಾಮ ಯಾರ ಮನೆ ಆಸ್ತಿಯೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಗಾಂಧೀಜಿ ಅವರು ರಘುಪತಿ ರಾಘವ ರಾಜಾರಾಂ ಪತಿತಪಾವನ ಸೀತಾರಾಮ್ ಎಂದು ಹೇಳಿದ್ದು, ಅಲ್ಲಿ ರಾಮ ಹಾಗೂ ಸೀತೆ ಇಬ್ಬರೂ ಇದ್ದಾರೆ. ಅವರು ನಮ್ಮನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಈ ರೀತಿ ಟೀಕೆ ಮಾಡುತ್ತಾರೆ. ಸುಳ್ಳು ಹೇಳುತ್ತಾರೆ ಎಂದು ತಿಳಿಸಿದರು.
ಅಸ್ಸಾಂನಲ್ಲಿ ಕಳೆದೆರಡು ದಿನಗಳಿಂದ ಈ ಯಾತ್ರೆಯನ್ನು ತಡೆಯಲಾಗಿದೆ. ಇಂದು ಗುವಾಹಟಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಆಮೂಲಕ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಿದೆಯೋ ಸತ್ತಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಅಸ್ಸಾಂ ಸರ್ಕಾರದ ಈ ನಡೆಯನ್ನು ನಾವೆಲ್ಲರೂ ಖಂಡಿಸುತ್ತೇವೆ.

ರಾಹುಲ್ ಗಾಂಧಿ ಅವರು ದೇಶದ ಮನಸ್ಸುಗಳನ್ನು ಒಗ್ಗೂಡಿಸಲು, ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಅವರಿಗೆ ನ್ಯಾಯ ಒದಗಿಸಲು ಮಣಿಪುರದಿಂದ ಮುಂಬೈವರೆಗೂ ಎರಡನೇ ಹಂತದ ಭಾರತ ಜೋಡೋ ನ್ಯಾಯ ಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಯಾತ್ರೆಯಿಂದ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟಿದೆ. ಹೀಗಾಗಿ ಅವರ ಯಾತ್ರೆಯನ್ನು ತಡೆಯುತ್ತಿದ್ದಾರೆ.
ಭಾರತ ಜೋಡೋ ನ್ಯಾಯ ಯಾತ್ರೆ ಕುರಿತು ಪಕ್ಷದ ಮುಖಂಡರು ಚರ್ಚೆ ಮಾಡುವಾಗ ನಾನು ಸಿದ್ದರಾಮಯ್ಯ ಅವರು ಇದ್ದೆವು. ಈ ಚಳಿ, ಬಿಸಿಲಿನಲ್ಲಿ ಹೆಜ್ಜೆ ಹಾಕಿ ಈ ದೇಶದ ಹೃದಯಗಳನ್ನು ಒಗ್ಗೂಡಿಸಬೇಕು, ಜನರ ಧ್ವನಿಯಾಗಿ, ಅವರ ಸಮಸ್ಯೆ ಬಗೆಹರಿಸಬೇಕು. ಆ ಮೂಲಕ ನ್ಯಾಯ ಒದಗಿಸಬೇಕು ಎಂಬ ನಿರ್ಣಯಕ್ಕೆ ರಾಹುಲ್ ಗಾಂಧಿ ಅವರು ಬದ್ಧರಾಗಿದ್ದಾರೆ. ಈ ಯಾತ್ರೆ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ. ಎಲ್ಲಾ ವಿರೋಧ ಪಕ್ಷಗಳಿಗೆ ಮಾದರಿ.
ದೇಶದ ಐಕ್ಯತೆ, ಸಮಗ್ರತೆ ಶಾಂತಿಗೆ ಸಾವಿರಾರು ಕಾಂಗ್ರೆಸ್ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ತನ್ನ ಅಜ್ಜಿಗೆ ಗುಂಡು ಹಾರಿಸಿ ಕೊಂದಿದ್ದನ್ನು, ಅವರ ಚಿಕ್ಕಪ್ಪ ಸಂಜಯ್ ಗಾಂಧಿ ಹತ್ಯೆಯನ್ನು, ತನ್ನ ತಂದೆ ರಾಜೀವ್ ಗಾಂಧಿ ಮೇಲೆ ಬಾಂಬ್ ದಾಳಿ ಮಾಡಿ, ಹತ್ಯೆ ಮಾಡಿದ್ದನ್ನು ಚಿಕ್ಕ ವಯಸ್ಸಿನಲ್ಲೇ ಕಂಡಿದ್ದಾರೆ. ಇಷ್ಟು ದುಖಃ ಅನುಭವಿಸಿದ್ದರೂ ಅವರು ದೇಶದ ಒಗ್ಗಟ್ಟಿಗಾಗಿ ಯಾತ್ರೆ ಮಾಡುತ್ತಿದ್ದಾರೆ. ಅದನ್ನು ನೋಡಿ ಬಿಜೆಪಿಯವರಿಂದ ಸಹಿಸಲು ಆಗುತ್ತಿಲ್ಲ. ಬಿಜೆಪಿಯ ಯಾವುದಾದರೂ ಒಬ್ಬ ನಾಯಕ ಇಂತಹ ತ್ಯಾಗ ಮಾಡಿದ್ದಾರಾ? ಕಾಂಗ್ರೆಸ್ ಪಕ್ಷ ಮಾತ್ರ ಇಂತಹ ಯಾತ್ರೆ ಮಾಡಲು ಸಾಧ್ಯ. ಬೇರೆ ಯಾರಿಂದಲೂ ಸಾಧ್ಯವಿಲ್ಲ.
ಕೆಲವೇ ಗಂಟೆಗಳ ಸೂಚನೆಗೆ ಸ್ಪಂದಿಸಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬಂದು ಭಾಗವಹಿಸಿದ್ದೀರಿ. ನೀವು ರಾಹುಲ್ ಗಾಂಧಿ ಅವರ ಬೆಂಬಲವಾಗಿ ನಿಂತಿರುವುದಕ್ಕೆ ಧನ್ಯವಾದಗಳು. ಯಾತ್ರೆ ನಿಲ್ಲಿಸಲು ಬಿಜೆಪಿ ಮಾಡುತ್ತಿರುವ ಯಾವುದೇ ಷಡ್ಯಂತ್ರಕ್ಕೂ ನಾವು ಜಗ್ಗುವುದಿಲ್ಲ. ದೇಶದ ಒಗ್ಗಟ್ಟು, ಐಕ್ಯತೆ, ಸಮಗ್ರತೆ, ಶಾಂತಿಗಾಗಿ ಹೋರಾಟ ಮುಂದುವರಿಸುತ್ತೇವೆ.












Click it and Unblock the Notifications