DK Shivakumar: ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ - ಇಡೀ ದೇಶದ ಕಾರ್ಯಕ್ರಮ: ಡಿಸಿಎಂ ಡಿ.ಕೆ ಶಿವಕುಮಾರ್
ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ - ಇಡೀ ದೇಶದ ಕಾರ್ಯಕ್ರಮ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ವಿಬಿ-ಜಿರಾಮ್-ಜಿ ಯೋಜನೆ ಅನುಷ್ಠಾನ ಖಂಡಿಸಿ ಹಾಗೂ ಮನರೇಗಾ ಯೋಜನೆ ಪುನರ್ ಸ್ಥಾಪನೆಗೆ ಆಗ್ರಹಿಸಿ ಚಿಕ್ಕಬಳ್ಳಾಪುರದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ ನರೇಗಾ ಬಚಾವ್ ಆಂದೋಲನ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಭಾಗವಹಿಸಿ ಅವರು ಮಾತನಾಡಿದ್ದಾರೆ.
ಈ ದೇಶವನ್ನು ಉಳಿಸುವುದಕ್ಕಾಗಿ ನರೇಗಾ ಬಚಾವೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾನು ಯಾವಾಗಲೂ ಹೇಳುತ್ತೇನೆ, ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ. ಕಾಂಗ್ರೆಸ್ ಯಾವಾಗಲೂ ಎಲ್ಲ ವರ್ಗದ ಜನರಿಗೆ ನಾವು ಕಾರ್ಯಕ್ರಮ ಕೊಟ್ಟು, ಬದುಕಿನಲ್ಲಿ ಬದಲಾವಣೆ ತರುವಂತ ಕೆಲಸ ನಾವು ಮಾಡಿಕೊಂಡು ಬರುತ್ತಿದ್ದೇವೆ ಎಂದಿದ್ದಾರೆ.

20 ವರ್ಷದ ಹಿಂದೆ ಬಡವರಿಗೆ ಉದ್ಯೋಗವನ್ನು ಕಲ್ಪಿಸುವ, ಅವರ ಕೈಗಳಿಗೆ ಕೆಲಸ ಕೊಡುವ ಮನರೇಗಾ ಇಡೀ ದೇಶದಲ್ಲೇ ಕ್ರಾಂತಿಕಾರಕ ಕಾರ್ಯಕ್ರಮವಾಗಿತ್ತು. ಉದ್ಯೋಗ ಖಾತರಿ ಯೋಜನೆ ಕಾಂಗ್ರೆಸ್ ಕಾರ್ಯಕ್ರಮ ಮಾತ್ರವಲ್ಲ. ಇಡೀ ದೇಶದ ಕಾರ್ಯಕ್ರಮ. ದೇಶದ ಬಡ ಜನರ ಕಾರ್ಯಕ್ರಮ. ಬಡವರಿಗೆ ಕೂಲಿ ಕೆಲಸಗಳನ್ನು ಕೊಟ್ಟು ಅವರಿಗೆ ಆತ್ಮಸ್ಥೈರ್ಯವನ್ನು ತುಂಬುವಂತ ಕಾರ್ಯಕ್ರಮ. ಮನರೇಗಾ ಯೋಜನೆಯನ್ನು ಉಳಿಸಿ, ಉದ್ಯೋಗ ಹಕ್ಕನ್ನು ಉಳಿಸಿ, ಗ್ರಾಮಗಳ ಸ್ವಯಂ ಆಡಳಿತದ ಹಕ್ಕನ್ನ ಮರು ಸ್ಥಾಪನೆ ಮಾಡುವ ಉದ್ದೇಶದಿಂದ ನಾವು ಇಂದು ಈ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು ?
ಇನ್ನು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಜನ ಬೆಂಬಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ. ವಿಬಿ ಜಿ ರಾಮ್ ಜಿ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸಿ, ಮನರೇಗಾವನ್ನು ಮರು ಜಾರಿಗೊಳಿಸಬೇಕು. ಜನರ ಉದ್ಯೋಗದ ಹಕ್ಕನ್ನು ಮರುಸ್ಥಾಪಿಸಬೇಕು. ಪಂಚಾಯತ್ ಸ್ವಯಂ ಆಡಳಿತದ ಹಕ್ಕು ಮರುಸ್ಥಾಪನೆಯಾಗಬೇಕು, ದಿನಕ್ಕೆ 400 ರೂ.ಗಳ ಕನಿಷ್ಠ ವೇತನವನ್ನು ದೇಶಾದ್ಯಂತ ನೀಡಬೇಕು. ಈ ಬೇಡಿಕೆಗಳು ಈಡೇರುವವರೆಗೆ ನಮ್ಮ ಆಂದೋಲನ ನಿಲ್ಲುವುದಿಲ್ಲ.
ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದುಪಡಿಸಿ, ಮನರೇಗಾ ಮರುಸ್ಥಾಪನೆಯಾಗುವವರೆಗೆ ದೇಶಾದ್ಯಂತ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಚಿವರಾದ ಕೆ.ಹೆಚ್.ಮುನಿಯಪ್ಪ, ಬೈರತಿ ಸುರೇಶ್, ಎನ್.ಎಸ್.ಬೋಸರಾಜು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications