ಬಾವ ಶರತ್ ಚಂದ್ರ ಸ್ಪರ್ಧೆ ಬಗ್ಗೆ ಡಿಕೆಶಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 12: ಚನ್ನಪಟ್ಟಣದಿಂದ ತಮ್ಮ ಸ್ವಂತ ಬಾವ ಶರತ್ ಚಂದ್ರ ಕಾಂಗ್ರೆಸ್ ಅಭ್ಯರ್ಥಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ರಾಮನಗರದಲ್ಲಿಂದು ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ನಲ್ಲಿ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ. ಚುನಾವಣೆಗೆ ಸ್ಪರ್ಧೆ ಬಯಸಿ, ಅರ್ಹರಾದ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ಆದರೆ, ಆಯ್ಕೆ ಮಾಡುವುದು, ಬಿಡುವುದು ಪರಿಶೀಲನಾ ಸಮಿತಿಗೆ ಬಿಟ್ಟದ್ದು, ಈ ವಿಷಯದಲ್ಲಿ ಯಾರೊಬ್ಬರ ಪ್ರಭಾವ,ಲಾಬಿ ನಡೆಯುವುದಿಲ್ಲ ಎಂದಿದ್ದಾರೆ.

'ಇಲ್ಲಿ ವ್ಯಕ್ತಿ ಮುಖ್ಯ ಅಲ್ಲ, ಪಕ್ಷ ಮುಖ್ಯ. ಪಕ್ಷದ ಟಿಕೆಟ್‌ಗಾಗಿ ಯಾರೂ ಬೇಕಾದರೂ ಅರ್ಜಿ ಹಾಕಬಹುದು. ಅರ್ಜಿ ಹಾಕದಿರುವವರಿಗೂ ಪಕ್ಷ ಅವಕಾಶ ಕೊಡಬಹುದು. ಕೊನೆಯದಾಗಿ ಪಕ್ಷ ಅಭ್ಯರ್ಥಿ ಯಾರೆಂದು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದಿದ್ದಾರೆ.
ಚನ್ನಪಟ್ಟಣ ಟಿಕೆಟ್ ಬಯಸಿರುವ ಡಿಕೆಶಿ ಬಾವ ಶರತ್ ಚಂದ್ರ
ಮಾರ್ಚ್ 03ರಂದೇ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಚುನಾವಣಾ ವೀಕ್ಷಕರಾದ ಶಫಿ ಅಹಮ್ಮದ್ ಹಾಗೂ ಟಿ.ವಿಮಾರುತಿ ಅವರಿಗೆ ಶರತ್ ಚಂದ್ರ ಅವರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ನಲ್ಲಿ ಈ ಬಾರಿ ಟಿಕೆಟ್ ಬಯಸಿ ಸಾವಿರರು ಅರ್ಜಿಗಳು ಬಂದಿದ್ದು, ಎಲ್ಲವನ್ನು ಪರಿಶೀಲಿಸಿ, ಅಳೆದು ತೂಗಿ, ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಏಪ್ರಿಲ್ ಅಂತ್ಯಕ್ಕೆ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಚನ್ನಪಟ್ಟಣ ನಿವಾಸಿಯಾರುವ ಶರತ್ ಚಂದ್ರ ಅವರು ಈ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ಕಾಂಗ್ರೆಸ್ಸಿನ ಏಕೈಕ ಅಭ್ಯರ್ಥಿಯಾಗಿದ್ದು, ಟಿಕೆಟ್ ಪಡೆಯುವುದು ಖಚಿತ ಎನ್ನಲಾಗಿದೆ.












Click it and Unblock the Notifications