ನಾನು ಸಿಎಂ ಆಗಬೇಕು ಅನ್ನೋ ಕನಸು ಜನರಿಗೆ, ಶಾಸಕರಿಗೂ ಇದೆ: ಡಿ.ಕೆ.ಶಿವಕುಮಾರ್
ಬೆಂಗಳೂರು: "ನಾನು ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ. ನಿಮಗೂ (ಮಾಧ್ಯಮಗಳಿಗೆ) ಇದೆ. ಆದರೆ ಪಕ್ಷ ಏನು ತೀರ್ಮಾನ ಮಾಡುತ್ತದೆ, ಅದನ್ನೇ ನಾವು ಕೇಳಬೇಕು" ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಮುಖ್ಯಮಂತ್ರಿ ಕನಸಿನ ಕುರಿತು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
"ಇದು ವೈಯಕ್ತಿಕ ಆಸೆ-ಆಕಾಂಕ್ಷೆಗಳ ವಿಷಯವಲ್ಲ. ಪಕ್ಷದ ನಿರ್ಣಯವೇ ಅಂತಿಮ" ಎಂದು ಹೇಳಿದರು. ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ, "ಸಮಯವೇ ಉತ್ತರ ನೀಡಲಿದೆ" ಎಂದರು. ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಮತ್ತೆ ಮುಖ್ಯಮಂತ್ರಿ ಹುದ್ದೆಯ ಚರ್ಚೆಗೆ ಜೀವ ತುಂಬಿದ್ದು, ಕುತೂಹಲ ಹೆಚ್ಚಿಸಿದೆ. ದಲಿತ ಸಂಘಟನೆಗಳು ಗೃಹ ಸಚಿವ ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿರುವ ಕುರಿತು ಪ್ರಶ್ನಿಸಿದಾಗ, "ಅವರವರ ಅಭಿಮಾನಿಗಳಿಗೆ ಅವರವರ ನಾಯಕರು ಇಷ್ಟ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ" ಎಂದರು.

ಮೆಟ್ರೋ ದರ ಏರಿಕೆ ಬಗ್ಗೆ ನಮ್ಮ ಅಭಿಪ್ರಾಯವೇ ಕೇಳಿಲ್ಲ
ಇನ್ನು ಬೆಂಗಳೂರು ಮೆಟ್ರೋ ದರ ಏರಿಕೆ ವಿಚಾರದಲ್ಲಿ ರಾಜ್ಯ ಸರ್ಕಾರವೇ ಹೊಣೆ ಎಂಬ ಬಿಜೆಪಿಯ ಆರೋಪವನ್ನು ಡಿಕೆ ಶಿವಕುಮಾರ್ ತಳ್ಳಿಹಾಕಿದರು. "ಮೆಟ್ರೋ ದರ ನಿಗದಿಗೆ ಪ್ರತ್ಯೇಕ ಸಮಿತಿ ಇದೆ. ಆ ಸಮಿತಿಯ ಅಧ್ಯಕ್ಷರು ಕೇಂದ್ರ ಸರ್ಕಾರದ ಕಾರ್ಯದರ್ಶಿ. ಈ ವಿಚಾರದಲ್ಲಿ ನಮ್ಮ ಅಭಿಪ್ರಾಯವನ್ನೇ ಕೇಳಿಲ್ಲ" ಎಂದು ಹೇಳಿದರು. "ನನ್ನ ಬಳಿ ದರ ಏರಿಕೆಯ ಯಾವುದೇ ಫೈಲ್ ಬಂದಿಲ್ಲ. ನಾನು ಸಹಿ ಹಾಕಿಲ್ಲ. ಹಾಗಿದ್ದರೆ ನಾನು ಹೇಗೆ ಹೊಣೆ ಆಗುತ್ತೇನೆ?" ಎಂದು ಪ್ರಶ್ನಿಸಿದರು. "ಜನರಿಗೆ ತೊಂದರೆ ನೀಡುವುದು ನಮಗೆ ಇಷ್ಟವಿಲ್ಲ. ಸೋಮವಾರ ಬಿಎಂಆರ್‌ಸಿಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮೆಟ್ರೋ ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ" ಎಂದು ಡಿಕೆಶಿ ಭರವಸೆ ನೀಡಿದರು.
ಪಾಪಾ, ಆತನಿಗೆ ಅನುಭವ ಕಡಿಮೆ
ರಾಜ್ಯ ಸರ್ಕಾರ ಮೆಟ್ರೋಗೆ ಹಣ ನೀಡದ ಕಾರಣ ದರ ಏರಿಕೆ ಆಗುತ್ತಿದೆ ಎಂಬ ಬಿಜೆಪಿಯ ಆರೋಪಕ್ಕೆ, "ಬಿಜೆಪಿಯವರು ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ನಮ್ಮ ರಾಜ್ಯಕ್ಕೆ ಯಾವ ಸಹಾಯ ಮಾಡಿದ್ದಾರೆ? ಜನರಿಗೆ ಸತ್ಯ ಹೇಳಲಿ" ಎಂದರು. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು "ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ದರ ಏರಿಕೆ ಸಾಧ್ಯವಿಲ್ಲ" ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿ, "ಪಾಪಾ, ಆತನಿಗೆ ಅನುಭವ ಕಡಿಮೆ. ಟ್ವೀಟ್ ಮಾಡೋದು, ಮಾಧ್ಯಮದ ಮುಂದೆ ಮಾತನಾಡುವುದಕ್ಕಷ್ಟೇ ಸೀಮಿತ. ಒಂದು ದಿನವಾದರೂ ರಾಜ್ಯಕ್ಕೆ ಅನುದಾನ ತಂದಿದ್ದಾರಾ? ಖಾಲಿ ಮಾತು ಬೇಡ. ಖಾಲಿ ಟ್ರಂಕ್ ವಿಚಾರ ಮಾತನಾಡಬೇಡಿ" ಎಂದು ಕಟುವಾಗಿ ವಾಗ್ದಾಳಿ ನಡೆಸಿದರು.
---------
ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್' ವೆಬ್‌ಸೈಟ್‌ನಲ್ಲಿದೆ
ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್, 'ಮೈಖೇಲ್' ವೆಬ್‌ಸೈಟ್ ಬೆಸ್ಟ್.
ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್ ಫಾಲೊ ಮಾಡಿ.












Click it and Unblock the Notifications