2029ರ ಏಪ್ರಿಲ್‌ನಲ್ಲಿ ಭೂಮಿಗೆ ಅಪ್ಪಳಿಸಲಿದೆಯಾ ಅಪೋಫಿಸ್ ಕ್ಷುದ್ರಗ್ರಹ? ಯಾಕೆ ಈ ಭಯ?
ಸಾಮಾನ್ಯವಾಗಿ ಕ್ಷುದ್ರಗ್ರಹಗಳು (Asteroids) ಎಂದರೆ ದೂರದ ಬಾಹ್ಯಾಕಾಶದಲ್ಲಿ ಸೂರ್ಯನ ಸುತ್ತ ಸುತ್ತುವ ಬಂಡೆಗಳಂತಿರುವ ಆಕಾಶಕಾಯಗಳು. ಇವುಗಳನ್ನು ನೋಡಬೇಕಾದರೆ ದೊಡ್ಡ ದೂರದರ್ಶಕ (ಟೆಲಿಸ್ಕೋಪ್) ಅಥವಾ ವಿಶೇಷ ವೈಜ್ಞಾನಿಕ ಸಾಧನಗಳ ಅಗತ್ಯವಿರುತ್ತದೆ. ಆದರೆ 2029ರ ಏಪ್ರಿಲ್‌ನಲ್ಲಿ ಈ ಪರಿಸ್ಥಿತಿ ಸ್ವಲ್ಪ ಸಮಯದ ಮಟ್ಟಿಗೆ ಬದಲಾಗಲಿದೆ.
'99942 ಅಪೋಫಿಸ್ (Apophis)' ಎಂಬ ಪ್ರಸಿದ್ಧ ಕ್ಷುದ್ರಗ್ರಹವು ಭೂಮಿಯ ಅತ್ಯಂತ ಸಮೀಪದಿಂದ ಹಾದು ಹೋಗಲಿದ್ದು, ಜಗತ್ತಿನ ಬಹುತೇಕ ಜನರು ಇದನ್ನು ಬರಿಗಣ್ಣಿನಿಂದಲೇ ನೋಡಬಹುದಾಗಿದೆ. ವಿಜ್ಞಾನಿಗಳ ಪ್ರಕಾರ ಇದು ಮಾನವ ಇತಿಹಾಸದಲ್ಲೇ ಅಪರೂಪದ ಖಗೋಳ ಘಟನೆಯಾಗಲಿದೆ.

ಅಪೋಫಿಸ್ ಎಂದರೇನು?
ಅಪೋಫಿಸ್ ಒಂದು ಭೂಮಿಯ ಸಮೀಪದ ಕ್ಷುದ್ರಗ್ರಹ (Near-Earth Asteroid). ಇದನ್ನು 2004ರಲ್ಲಿ ಖಗೋಳಶಾಸ್ತ್ರಜ್ಞರು ಪತ್ತೆಹಚ್ಚಿದರು. ಇದರ ಗಾತ್ರ ಸುಮಾರು 370 ಮೀಟರ್. ಅಂದರೆ ಸುಮಾರು 100 ಅಂತಸ್ತಿನ ಕಟ್ಟಡದ ಎತ್ತರಕ್ಕೆ ಸಮಾನವಾದ ಬೃಹತ್ ಬಂಡೆ ಎಂದು ಊಹಿಸಬಹುದು.
ಮೊದಲ ಬಾರಿಗೆ ಇದರ ಕಕ್ಷೆಯನ್ನು ಲೆಕ್ಕ ಹಾಕಿದಾಗ, 2029ರಲ್ಲಿ ಇದು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ ಎಂಬ ಆತಂಕ ಮೂಡಿತ್ತು. ಇದೇ ಕಾರಣಕ್ಕೆ ಅಪೋಫಿಸ್ ವಿಶ್ವದಾದ್ಯಂತ ಸುದ್ದಿಯಾಗಿತ್ತು.
ಆದರೆ ನಂತರ ಹಲವು ವರ್ಷಗಳ ಕಾಲ ನಡೆದ ನಿಖರವಾದ ಅಧ್ಯಯನಗಳು ಮತ್ತು ಸಾವಿರಾರು ವೀಕ್ಷಣೆಗಳ ನಂತರ ವಿಜ್ಞಾನಿಗಳು ಒಂದು ಮಹತ್ವದ ತೀರ್ಮಾನಕ್ಕೆ ಬಂದರು. 2029ರಲ್ಲಿ ಅಪೋಫಿಸ್ ಭೂಮಿಗೆ ಡಿಕ್ಕಿ ಹೊಡೆಯುವುದಿಲ್ಲ. ಮುಂದಿನ ಕನಿಷ್ಠ 100 ವರ್ಷಗಳಿಗೂ ಇದರಿಂದ ಯಾವುದೇ ಅಪಾಯವಿಲ್ಲ ಎಂದು ಈಗ ಖಚಿತಪಡಿಸಲಾಗಿದೆ.
2029ರ ಏಪ್ರಿಲ್ 13ರಂದು ಏನಾಗಲಿದೆ?
2029ರ ಏಪ್ರಿಲ್ 13ರಂದು ಅಪೋಫಿಸ್ ಭೂಮಿಯಿಂದ ಸುಮಾರು 31,600 ಕಿಲೋಮೀಟರ್ ದೂರದಲ್ಲಿ ಹಾದು ಹೋಗಲಿದೆ. ಇದು ಕೇಳಲು ದೊಡ್ಡ ದೂರವೆನಿಸಿದರೂ, ಖಗೋಳ ವಿಜ್ಞಾನದ ದೃಷ್ಟಿಯಿಂದ ಇದು ಅತ್ಯಂತ ಸಮೀಪದ ಅಂತರ. ಆಸಕ್ತಿದಾಯಕ ವಿಷಯವೆಂದರೆ, ಭೂಮಿಯ ಸುತ್ತ ಸುತ್ತುವ ಜಿಯೋಸ್ಟೇಷನರಿ ಉಪಗ್ರಹಗಳಿಗಿಂತಲೂ ಅಪೋಫಿಸ್ ಭೂಮಿಗೆ ಹೆಚ್ಚು ಸಮೀಪದಲ್ಲಿ ಸಾಗಲಿದೆ. ಆದರೂ ಭೂಮಿಗೆ ಯಾವುದೇ ಅಪಾಯವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.
ಅಪೋಫಿಸ್ ಹೇಗೆ ಕಾಣಿಸಲಿದೆ? ಹಲವರು ಸಿನಿಮಾಗಳಲ್ಲಿ ತೋರಿಸುವಂತೆ ಬೆಂಕಿ ಉಗುಳುತ್ತಾ, ಉದ್ದನೆಯ ಬಾಲವನ್ನು ಎಳೆದುಕೊಂಡು ಬರುವ ವಸ್ತುವನ್ನು ಊಹಿಸಬಹುದು. ಆದರೆ ವಾಸ್ತವದಲ್ಲಿ ಹಾಗಿರುವುದಿಲ್ಲ. ಅಪೋಫಿಸ್ ಆಕಾಶದಲ್ಲಿ ತುಂಬಾ ಪ್ರಕಾಶಮಾನವಾದ ಒಂದು ನಕ್ಷತ್ರದಂತೆ ಕಾಣಿಸಲಿದೆ.
ಆದರೆ ಸಾಮಾನ್ಯ ನಕ್ಷತ್ರಗಳಂತೆ ಸ್ಥಿರವಾಗಿ ಇರುವುದಿಲ್ಲ. ಕೆಲವು ಗಂಟೆಗಳ ಅವಧಿಯಲ್ಲಿ ಅದು ನಿಧಾನವಾಗಿ ತನ್ನ ಸ್ಥಾನವನ್ನು ಬದಲಾಯಿಸುತ್ತಾ ಸಾಗುತ್ತದೆ. ಅತ್ಯಂತ ವೇಗದ ಕ್ಷಣದಲ್ಲಿ ಅದು ಪ್ರತಿ ನಿಮಿಷಕ್ಕೂ ಹುಣ್ಣಿಮೆಯ ಚಂದ್ರನ ಅಗಲದಷ್ಟು ದೂರವನ್ನು ಆಕಾಶದಲ್ಲಿ ಕ್ರಮಿಸಲಿದೆ. ಈ ಚಲನವಲನವನ್ನು ಬರಿಗಣ್ಣಿನಿಂದಲೇ ಗಮನಿಸಬಹುದು.
ಎಷ್ಟು ಜನರಿಗೆ ಇದು ಕಾಣಬಹುದು?
ಇಟಲಿಯಲ್ಲಿ ನಡೆದ ವೈಜ್ಞಾನಿಕ ಕಾರ್ಯಾಗಾರದಲ್ಲಿ ಮಂಡಿಸಲಾದ ಅಧ್ಯಯನದ ಪ್ರಕಾರ, ಜಗತ್ತಿನ ಸುಮಾರು 90% ಜನರು ವಾಸಿಸುವ ಪ್ರದೇಶಗಳಿಂದ ಅಪೋಫಿಸ್‌ನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಾಗುವ ಸಾಧ್ಯತೆ ಇದೆ. ಆದರೆ ಎಲ್ಲರೂ ನೋಡಬಹುದು ಎಂಬ ಖಾತರಿ ಇಲ್ಲ.
ಇದಕ್ಕೆ ಕೆಲವು ಅಂಶಗಳು ಪ್ರಮುಖವಾಗಿವೆ. ಆ ದಿನ ಮೋಡ ಕವಿದಿದ್ದರೆ ಕಾಣುವುದಿಲ್ಲ. ಮಳೆ ಅಥವಾ ಕೆಟ್ಟ ಹವಾಮಾನ ಇದ್ದರೆ ವೀಕ್ಷಣೆ ಕಷ್ಟ. ನಗರಗಳ ಅತಿಯಾದ ವಿದ್ಯುತ್ ದೀಪಗಳ ಬೆಳಕು (Light Pollution) ಇದ್ದರೆ ಸ್ಪಷ್ಟವಾಗಿ ಕಾಣದೇ ಇರಬಹುದು. ಹವಾಮಾನ ಅನುಕೂಲಕರವಾಗಿದ್ದರೆ ಕೋಟ್ಯಂತರ ಜನರು ಈ ಅಪರೂಪದ ದೃಶ್ಯವನ್ನು ವೀಕ್ಷಿಸಬಹುದು.
ಯಾವ ಯಾವ ದೇಶಗಳಲ್ಲಿ ಕಾಣಿಸಲಿದೆ?
ಅಪೋಫಿಸ್ ತನ್ನ ಪ್ರಯಾಣವನ್ನು ಮೊದಲು ಆಸ್ಟ್ರೇಲಿಯಾದ ಆಕಾಶದಲ್ಲಿ ಆರಂಭಿಸುತ್ತದೆ. ನಂತರ ಅದು ಏಷ್ಯಾ, ಆಫ್ರಿಕಾ, ಯುರೋಪ್, ಅಟ್ಲಾಂಟಿಕ್ ಮಹಾಸಾಗರದ ಮೇಲ್ಭಾಗ, ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ಕೆಲವು ಭಾಗಗಳ ಮೂಲಕ ಗೋಚರಿಸಲಿದೆ. ಒಟ್ಟಾರೆ ಸುಮಾರು ಏಳು ಗಂಟೆಗಳ ಕಾಲ ವಿವಿಧ ಪ್ರದೇಶಗಳ ಜನರು ಇದನ್ನು ವೀಕ್ಷಿಸಬಹುದು.
ವಿಜ್ಞಾನಿಗಳು ಈಗಾಗಲೇ ಅಪೋಫಿಸ್ ಹೆಚ್ಚು ಪ್ರಕಾಶಮಾನವಾಗಿ ಕಾಣುವ ಸಮಯಗಳನ್ನು ಲೆಕ್ಕ ಹಾಕಿದ್ದಾರೆ. ಅತ್ಯುತ್ತಮ ವೀಕ್ಷಣೆಯ ಅವಕಾಶ ಇರುವ ಪ್ರದೇಶಗಳು- ಆಫ್ರಿಕಾದ ಬಹುತೇಕ ಭಾಗ, ಏಷ್ಯಾದ ದೊಡ್ಡ ಪ್ರದೇಶ, ಪೂರ್ವ ದಕ್ಷಿಣ ಅಮೆರಿಕ, ಯುರೋಪಿನ ಕೆಲವು ಭಾಗಗಳು. ನಂತರ ಅದು ಉತ್ತರ ಅಟ್ಲಾಂಟಿಕ್ ಮೇಲ್ಭಾಗ ತಲುಪುವಾಗ, ಪಶ್ಚಿಮ ಆಫ್ರಿಕಾ, ಯುರೋಪ್, ದಕ್ಷಿಣ ಅಮೆರಿಕ, ಉತ್ತರ ಅಮೆರಿಕದ ಕೆಲವು ಪ್ರದೇಶಗಳ ಜನರೂ ಇದನ್ನು ಸುಲಭವಾಗಿ ವೀಕ್ಷಿಸಬಹುದು.
ಇದು ಏಕೆ ಇಷ್ಟು ವಿಶೇಷ?
ಸಾಮಾನ್ಯವಾಗಿ ಉಪಗ್ರಹಗಳು ಕೆಲವೇ ನಿಮಿಷಗಳಲ್ಲಿ ಆಕಾಶವನ್ನು ದಾಟಿಬಿಡುತ್ತವೆ. ಆದರೆ ಅಪೋಫಿಸ್ ನಿಧಾನವಾಗಿ ಚಲಿಸುವುದರಿಂದ ಜನರು ಅದನ್ನು ಸಾಕಷ್ಟು ಸಮಯ ಗಮನಿಸಬಹುದು. ಖಗೋಳ ವಿಜ್ಞಾನಿಗಳ ಪ್ರಕಾರ, ಮಾನವ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಕ್ಷುದ್ರಗ್ರಹವು ಇಷ್ಟು ಸಮೀಪದಿಂದ ಹಾದು ಹೋಗುವುದನ್ನು ಮುಂಚಿತವಾಗಿ ಇಷ್ಟೊಂದು ನಿಖರವಾಗಿ ಊಹಿಸಿರುವುದು ಇದೇ ಮೊದಲ ಬಾರಿ. ಇದರಿಂದ ಈ ಘಟನೆಗೆ ಐತಿಹಾಸಿಕ ಮಹತ್ವ ಸಿಕ್ಕಿದೆ.
ಅಪೋಫಿಸ್ ಬಗ್ಗೆ ಆರಂಭದಲ್ಲಿ ಏಕೆ ಭಯವಿತ್ತು?
2004ರಲ್ಲಿ ಅಪೋಫಿಸ್ ಪತ್ತೆಯಾದಾಗ ಅದರ ಕಕ್ಷೆ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಆ ಸಮಯದಲ್ಲಿ ನಡೆಸಿದ ಲೆಕ್ಕಾಚಾರಗಳು, "2029ರಲ್ಲಿ ಭೂಮಿಗೆ ಡಿಕ್ಕಿಯಾಗುವ ಸ್ವಲ್ಪ ಸಾಧ್ಯತೆ ಇದೆ" ಎಂದು ಸೂಚಿಸಿದ್ದವು. ಇದರಿಂದ ವಿಶ್ವದಾದ್ಯಂತ ಆತಂಕ ಉಂಟಾಗಿತ್ತು.
ನಂತರ ಹಲವು ವರ್ಷಗಳ ಕಾಲ ದೂರದರ್ಶಕಗಳ ಮೂಲಕ ನಿರಂತರ ವೀಕ್ಷಣೆ ನಡೆಯಿತು. ಪ್ರತಿ ಹೊಸ ಮಾಹಿತಿಯೊಂದಿಗೆ ಅದರ ಕಕ್ಷೆ ಇನ್ನಷ್ಟು ಸ್ಪಷ್ಟವಾಯಿತು. ಕೊನೆಗೆ ವಿಜ್ಞಾನಿಗಳು, 2029ರಲ್ಲಿ ಮಾತ್ರವಲ್ಲ, ಮುಂದಿನ ಕನಿಷ್ಠ ನೂರು ವರ್ಷಗಳವರೆಗೆ ಅಪೋಫಿಸ್ ಭೂಮಿಗೆ ಯಾವುದೇ ಅಪಾಯ ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿದರು.
ಗುರುತ್ವಾಕರ್ಷಣೆಯಿಂದ ಏನಾಗಬಹುದು?
ಅಪೋಫಿಸ್ ಭೂಮಿಗೆ ಡಿಕ್ಕಿ ಹೊಡೆಯದಿದ್ದರೂ, ಭೂಮಿಯ ಗುರುತ್ವಾಕರ್ಷಣೆಯ ಪ್ರಭಾವ ಅದಕ್ಕೆ ಬೀಳಲಿದೆ. ಇದರಿಂದ ಸೂರ್ಯನ ಸುತ್ತ ಅದರ ಮುಂದಿನ ಕಕ್ಷೆ ಸ್ವಲ್ಪ ಬದಲಾಗಬಹುದು. ಮೇಲ್ಮೈಯಲ್ಲಿರುವ ಸಡಿಲ ಕಲ್ಲುಗಳು ಜಾರಬಹುದು. ಸಣ್ಣ ಪ್ರಮಾಣದ ಭೂಕುಸಿತದಂತಹ ಬದಲಾವಣೆಗಳು ಸಂಭವಿಸಬಹುದು. ಹಲವು ವರ್ಷಗಳಿಂದ ಧೂಳು ಮತ್ತು ಬಂಡೆಗಳ ಕೆಳಗೆ ಅಡಗಿರುವ ಹೊಸ ಭಾಗಗಳು ಹೊರಗೆ ಕಾಣಿಸಬಹುದು.
ಆದರೆ ಇವುಗಳಲ್ಲಿ ಯಾವುದೂ ಆಗದೇ ಇರಬಹುದು ಎಂಬ ಸಾಧ್ಯತೆಯೂ ಇದೆ. ಈ ಅನಿಶ್ಚಿತತೆಯೇ ವಿಜ್ಞಾನಿಗಳಿಗೆ ಈ ಘಟನೆಯನ್ನು ಇನ್ನಷ್ಟು ಕುತೂಹಲಕರವಾಗಿಸಿದೆ.
ವಿಜ್ಞಾನಿಗಳು ಹೇಗೆ ಅಧ್ಯಯನ ನಡೆಸಲಿದ್ದಾರೆ?
2029ರ ಘಟನೆಗೆ ಇನ್ನೂ ಹಲವು ವರ್ಷಗಳಿದ್ದರೂ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಅಪೋಫಿಸ್ ಸಾಗುವ ಮಾರ್ಗದಲ್ಲಿರುವ ಅನೇಕ ಖಗೋಳ ವೀಕ್ಷಣಾಲಯಗಳು ಇದನ್ನು ಅಧ್ಯಯನ ಮಾಡಲಿವೆ. ವಿಶೇಷವಾಗಿ ಸ್ಪೇನ್‌ನ ಕ್ಯಾನರಿ ದ್ವೀಪಗಳಲ್ಲಿರುವ ವೀಕ್ಷಣಾಲಯಗಳು ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಲಿವೆ.
ಇವುಗಳ ಜೊತೆಗೆ, ಶಕ್ತಿಶಾಲಿ ದೂರದರ್ಶಕಗಳು, ರಾಡಾರ್ ವ್ಯವಸ್ಥೆಗಳು, ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳು ಅಪೋಫಿಸ್‌ನ ಆಕಾರ, ತಿರುಗುವ ವೇಗ, ಮೇಲ್ಮೈಯಲ್ಲಾಗುವ ಬದಲಾವಣೆಗಳು, ಗುರುತ್ವಾಕರ್ಷಣೆಯ ಪರಿಣಾಮ ಇವೆಲ್ಲವನ್ನು ದಾಖಲಿಸಲಿವೆ. ಈ ಮಾಹಿತಿಯಿಂದ ಭವಿಷ್ಯದಲ್ಲಿ ಭೂಮಿಯ ಸಮೀಪಕ್ಕೆ ಬರುವ ಇತರ ಕ್ಷುದ್ರಗ್ರಹಗಳ ಬಗ್ಗೆ ಇನ್ನಷ್ಟು ನಿಖರವಾದ ಅಂದಾಜುಗಳನ್ನು ಮಾಡಲು ವಿಜ್ಞಾನಿಗಳಿಗೆ ಸಹಾಯವಾಗಲಿದೆ.
ಭಾರತದಿಂದ ಅಪೋಫಿಸ್ ಕಾಣುತ್ತದೆಯೇ?
ಪ್ರಸ್ತುತ ಲಭ್ಯವಿರುವ ಲೆಕ್ಕಾಚಾರಗಳ ಪ್ರಕಾರ ಭಾರತ ಸೇರಿದಂತೆ ಏಷ್ಯಾದ ಬಹುತೇಕ ಭಾಗಗಳಲ್ಲಿ ಅಪೋಫಿಸ್ ಗೋಚರಿಸುವ ಸಾಧ್ಯತೆ ಇದೆ. ಆದರೆ ಅದು ಯಾವ ಸಮಯದಲ್ಲಿ, ದೇಶದ ಯಾವ ಭಾಗಗಳಿಂದ ಅತ್ಯುತ್ತಮವಾಗಿ ಕಾಣುತ್ತದೆ ಎಂಬ ಅಂತಿಮ ಮಾಹಿತಿ 2029ರ ಸಮೀಪದಲ್ಲಿ ಇನ್ನಷ್ಟು ನಿಖರವಾಗಿ ಪ್ರಕಟವಾಗಲಿದೆ. ಹವಾಮಾನ, ಮೋಡದ ಪ್ರಮಾಣ ಮತ್ತು ಬೆಳಕಿನ ಮಾಲಿನ್ಯವೂ ವೀಕ್ಷಣೆಯ ಮೇಲೆ ಪರಿಣಾಮ ಬೀರುತ್ತವೆ.
2029ರ ಏಪ್ರಿಲ್ 13ರಂದು ನಡೆಯಲಿರುವ ಅಪೋಫಿಸ್‌ನ ಸಮೀಪದ ಹಾರಾಟ ಭೂಮಿಗೆ ಯಾವುದೇ ಅಪಾಯ ಉಂಟುಮಾಡುವುದಿಲ್ಲ. ಆದರೆ ಇದು ಖಗೋಳ ವಿಜ್ಞಾನದಲ್ಲಿ ಅಪರೂಪದ ಘಟನೆ. ಸಾಮಾನ್ಯ ಜನರು ಬರಿಗಣ್ಣಿನಿಂದಲೇ ಒಂದು ಬೃಹತ್ ಕ್ಷುದ್ರಗ್ರಹ ಆಕಾಶದಲ್ಲಿ ಚಲಿಸುತ್ತಿರುವುದನ್ನು ನೋಡುವ ಅಪೂರ್ವ ಅವಕಾಶ. ಜೀವನದಲ್ಲಿ ಒಮ್ಮೆ ಮಾತ್ರ ಸಿಗಬಹುದಾದ ಅದ್ಭುತ ಖಗೋಳ ಅನುಭವ.
(ಬರಹ: ರಂಜಿತಾ ಆರ್.ಕೆ.)















Click it and Unblock the Notifications