‘ಶಾಸಕರಿಗೆ ಎರಡೆರಡು ಮದುವೆ’ ಎಂದ ಡಿಕೆ ಶಿವಕುಮಾರ್‌ಗೆ ಕೌಂಟರ್ ಕೊಟ್ಟ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: 'ಕೆಲ ಶಾಸಕರಿಗೆ ಎರಡೆರಡು ಮದುವೆಯಾಗಿದೆ' ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸದನದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ರೀತಿಯ ಹೇಳಿಕೆ ನೀಡುವುದು ಸರಿಯೇ ಎಂದು ಪ್ರಶ್ನಿಸಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ಸದನದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಮಾತನಾಡುತ್ತಾರಾ? ಇಂತಹ ಮುಖ್ಯಮಂತ್ರಿಯನ್ನು ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ದೇವರೇ ಕಾಪಾಡಬೇಕು. ಈ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ 224 ಶಾಸಕರೂ ಪ್ರತಿಭಟನೆ ಮಾಡಬೇಕಿತ್ತು. ಕಾಂಗ್ರೆಸ್ ನವರೇ ಇದಕ್ಕೆ ಪ್ರತಿಭಟನೆ ಮಾಡಬೇಕಿತ್ತು ಎಂದು ಹೇಳಿದರು.

ರೈತರಿಗೆ ₹2500; ರೈತನೇನು ಭಿಕ್ಷುಕನೇ
ರಾಜ್ಯ ಸರಕಾರ ಘೋಷಿಸಿರುವ ₹2500 ಬರ ಪರಿಹಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು; "ಇವರ ಯೋಗ್ಯತೆಗೆ ಇಷ್ಟೇ. ಹಿಂದಿನ ಮುಖ್ಯಮಂತ್ರಿ ಕಚೇರಿಯಲ್ಲಿ ಕಾಫಿ-ಟೀ ಕುಡಿಯಲು ₹200 ಕೋಟಿ ಖರ್ಚು ಮಾಡಿದ್ದರು. ನಿಮ್ಮ ಯೋಗ್ಯತೆಗೆ ರೈತರಿಗೆ ₹2500 ಕೊಟ್ಟಿದ್ದೀರಲ್ಲ, ನಿಮಗೆ ಮಾನ ಮರ್ಯಾದೆ ಇದೆಯಾ? ರೈತ ಏನು ಭಿಕ್ಷುಕನಾ? ರೈತರನ್ನು ಈ ಮಟ್ಟಕ್ಕೆ ಇಳಿಸಿದ್ದೀರಲ್ಲಾ? ತಮ್ಮನ್ನು ತಾವು ರೈತನ ಮಗ ಎಂದು ಹೇಳಿಕೊಳ್ಳುತ್ತಾರೆ ಈ ಮುಖ್ಯಮಂತ್ರಿ! ರೈತನ ಮಗನಾದರೆ ಈ ರೀತಿ ಮಾಡುತ್ತಾರಾ? ಯಾವ ರೈತನ ಕೆಲಸ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೆಪಿಎಸ್‌ಸಿ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ ಮೌನ ಏಕೆ?
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಯಲ್ಲಿ ನಡೆದಿರುವ ಅವ್ಯಾಹತ ಅಕ್ರಮಗಳ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿ ಏಕೆ ಮೌನವಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆಯಿತು ಎಂದು ನವದೆಹಲಿಯಲ್ಲಿ ಇನ್ನಿಲ್ಲದ ಗಲಾಟೆ ಎಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಜೆನ್ ಜಿ ಗಳು ಈಗೆಲ್ಲಿ ಹೋಗಿದ್ದಾರೆ? ಅವರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಮಿತಿಮೀರಿದ ಭ್ರಷ್ಟಾಚಾರ ಮತ್ತು ಕೆಪಿಎಸ್ಸಿಯಲ್ಲಿ ನಡೆದಿರುವ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳ ನೇಮಕಾತಿ ಅಕ್ರಮ ಹಾಗೂ ಪಶು ವೈದ್ಯರ ನೇಮಕಾತಿ ಅಕ್ರಮ ಸೇರಿದಂತೆ ಕಾಸಿಗಾಗಿ ಉದ್ಯೋಗಗಳನ್ನು ಮಾಡಿಕೊಳ್ಳುತ್ತಿರುವ ಭ್ರಷ್ಟಾಚಾರವನ್ನು ಪ್ರಶ್ನಿಸುತ್ತಿಲ್ಲ ಏಕೆ ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕಡುಭ್ರಷ್ಟ ಸರ್ಕಾರ ಆಡಳಿತ ನಡೆಸುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ದೊಡ್ಡಮಟ್ಟದ ಕೆಟ್ಟ ಹೆಸರು ಬರುತ್ತಿದೆ ವಾಗ್ದಾಳಿ ನಡೆಸಿದ ಸಚಿವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ. ಆದರೆ ಅವರದೇ ಸರ್ಕಾರ ಎಸುಗುತ್ತಿರುವ ಅಕ್ರಮಗಳ ಬಗ್ಗೆ ಅವರು ಜಾಣಮೌನ ವಹಿಸಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಸರ್ಕಾರ ಸಂಪೂರ್ಣ ವೈಫಲ್ಯ
ಬರ ನಿರ್ವಹಣೆಯಲ್ಲಿ ಈ ಸರ್ಕಾರ ಸಂಪೂರ್ಣವಾಗಿ ವೈಫಲ್ಯವಾಗಿದೆ. ಒಂದು ಕಡೆ ಖಜಾನೆಯನ್ನು ಖಾಲಿ ಮಾಡಿಕೊಂಡು ಇನ್ನೊಂದು ಕಡೆ ಜನರಿಗೆ ಮಂಕು ಬೂದಿ ಹಚ್ಚಲು ಯೋಜನೆಗಳ ಮೇಲೆ ಯೋಜನೆಗಳನ್ನು ಘೋಷಣೆ ಮಾಡುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಹಾಗಿದ್ದರೂ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಕಡಿವಾಣ ಹಾಕಲು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಕೈಚಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಎಸ್ಸಿ ಅಕ್ರಮಗಳ ತನಿಖೆ ನಡೆಸಲು ರಾಜ ಹೈಕೋರ್ಟ್ ಎಸ್ಐಟಿ ರಚಿಸಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಆದರೆ ಆ ಅಧಿಕಾರಿಗಳು ಬೇಡವೆಂದು ಈ ಸರ್ಕಾರ ನಾಟಕ ಆಡುತ್ತಿದೆ. ಒಬ್ಬ ಅಧಿಕಾರಿಯನ್ನು ವರ್ಗಾವಣೆಯನ್ನು ಮಾಡಿದೆ. ಹೆಬ್ಬಟ್ಟು ಒತ್ತುವ ಅಧಿಕಾರಿಗಳು ಇವರಿಗೆ ಬೇಕಾಗಿದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳು ಇವರಿಗೆ ಆಗಿ ಬರುವುದಿಲ್ಲ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ವಿರುದ್ಧದ ಪ್ರತಿಭಟನೆಗೆ ಪ್ರಶ್ನೆ
ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ದೇಶವ್ಯಾಪಿ ಪ್ರತಿಭಟನೆಯನ್ನು ಕಟುವಾಗಿ ಟೀಕಿಸಿದ ಕೇಂದ್ರ ಸಚಿವರು; "ಯಾವ ಪುರುಷಾರ್ಥಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ? ಚುನಾವಣಾ ಆಯೋಗ ಒಂದು ಜವಾಬ್ದಾರಿಯುತ ಸಂಸ್ಥೆ. ಕಳೆದ 78 ವರ್ಷಗಳಿಂದ ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದುಕೊಂಡು ಬಂದಿದ್ದರೆ ಅದು ಚುನಾವಣಾ ಆಯೋಗದ ಜವಾಬ್ದಾರಿಯಿಂದಲೇ.
ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರ ನಡುವೆ ಇರುವ ಅಭಿಪ್ರಾಯ ಭೇದದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಇಟ್ಟುಕೊಂಡು ಅದನ್ನೇ ದೊಡ್ಡ ಅಪರಾಧದಂತೆ ಬಿಂಬಿಸಿ ದೇಶದಾದ್ಯಂತ ಪ್ರತಿಭಟನೆ ಮಾಡುತ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದಾರೆ ಎಂದು ನಾನು ಚರ್ಚೆ ಮಾಡುವುದಿಲ್ಲ. ಆದರೆ, ಈ ಭಿನ್ನಾಭಿಪ್ರಾಯ ಯಾವ ಕಾರಣಕ್ಕೆ ಬಂದಿದೆ, ಸತ್ಯಾಸತ್ಯತೆ ಏನು ಎಂಬುದನ್ನು ಆಯೋಗವೇ ದೇಶದ ಜನತೆಯ ಮುಂದೆ ಹೇಳಬೇಕು ಮತ್ತು ತನ್ನ ಸಂಸ್ಥೆಯ ಗೌರವವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ನಿರಂತರವಾಗಿ ರಾಷ್ಟ್ರದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ಅವುಗಳ ಚಾರಿತ್ಯವುದೇ ಮಾಡುವುದಲ್ಲದೆ ತನ್ನ ವೈಫಲ್ಯಗಳನ್ನು ಆ ಸಂಸ್ಥೆಗಳ ಮೇಲೆ ಹೇರುವ ಪ್ರಯತ್ನ ಮಾಡಿಕೊಂಡೆ ಬರುತ್ತಿದೆ. ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ನಡೆಸುತ್ತಿರುವ ದಾಳಿ ಇದೇ ಮೊದಲಲ್ಲ. ರಾಹುಲ್ ಗಾಂಧಿಯವರು ಜನತೆಯ ದಿಕ್ಕು ತಪ್ಪಿಸಲು ಆಗಾಗ ಇಂತ ಕೆಲಸಗಳಿಗೆ ಕುಮ್ಮಕ್ಕು ಕೊಡುತ್ತಾರೆ ಎಂದು ನೇರವಾಗಿ ಆರೋಪಿಸಿದರು.


Click it and Unblock the Notifications
