ದೇವೇಗೌಡ,ಕುಮಾರಸ್ವಾಮಿ ಮೇಲೆ ಡಿಕೆಶಿ ವಾಗ್ದಾಳಿ: "ಆಗಲೇ ಹರಿಲಿಲ್ಲ.. ಈಗ ಹರಿತೀನಿ ಅಂದ್ರೆ"..
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಚಾರದ ಕಣ ರಂಗೇರುತ್ತಿದೆ. ಇನ್ನೇನು ಚುನಾವಣಾ ಪ್ರಚಾರ ಕೊನೆಯ ಹಂತಕ್ಕೆ ಬಂದಿರುವಾಗಲೇ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾಜಿ ಪ್ರಧಾನಿ ಹಾಗೂ ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದ ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಕಾವು ಉತ್ತುಂಗಕ್ಕೆ ಹೋಗಿದೆ. ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ನಡುವೆ ನೇರ ಹಣಾಹಣಿ ಇದೆ. ಈ ನಡುವೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರನ್ನು ಏಕಕಾಲಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಶಿಗ್ಗಾಂವಿ ಉಪ ಚುನಾವಣೆ ಪ್ರಚಾರದಲ್ಲಿ ಮಾತನಾಡಿರುವ ಅವರು, ಸರ್ಕಾರ ಕಿತ್ತಾಕ್ತೀನಿ, ಕಿತ್ತಾಕ್ತೀನಿ ಅಂತಿದ್ದಾರೆ. ಸರ್ಕಾರನ ಕಿತ್ತಾಕೋಕೆ ಇದೇನು ಕಡ್ಲೆಕಾಯಿ ಗಿಡ ಕೆಟ್ಟೋಯ್ತಾ ಅಂತ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರೇ ಹೇಳ್ತೀನಿ ಕೇಳಿಸಿಕೊಳ್ಳಿ ಸರ್ಕಾರ ಕಿತ್ತಾಕೋಕೆ ನಿಮ್ಮ ಕೈಯಲ್ಲಿ ಆಗಲ್ಲ ಅಂದಿದ್ದಾರೆ.
ದೇವೇಗೌಡ ಅವರು, ಕುಮಾರಸ್ವಾಮಿ ಸರ್ಕಾರವನ್ನು ಕಿತ್ತಾಕ್ತೀವಿ ಅಂತಿದ್ದಾರೆ. ಸರ್ಕಾರನ ಕಿತ್ತು ಹಾಕುವುದಕ್ಕೆ ಇದೇನು ಕಡ್ಲೆಕಾಯಿ ಗಿಡ ಅಲ್ಲ ಅಂತ ಖಡಕ್ ರಿಪ್ಲೈ ಕೊಟ್ಟಿದ್ದಾರೆ. ಎಚ್.ಡಿ ಕುಮಾರಸ್ವಾಮಿಯ ಬಗ್ಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಡಿರುವ ಡಿ.ಕೆ ಶಿವಕುಮಾರ್, ಕೊಟ್ಟ ಕುದುರೆಯನ್ನು ಏರದವನು ಧೀರನೂ ಅಲ್ಲ, ಶೂರನೂ ಅಲ್ಲ. ಅಧಿಕಾರದಲ್ಲಿದ್ದಾಗಲೇ ಅವರ ಕೈಯಲ್ಲಿ ಏನೂ ಹರಿಯಲು ಆಗಲಿಲ್ಲ. ಈಗ ಬಂದು ಹರಿತೀನಿ.. ಹರಿತೀನಿ ಅಂತಾ ಹೇಳಿದ್ರೆ ಹೆಂಗೆ ಎಂದು ತೀಕ್ಷ್ಣವಾಗಿ ಕುಮಾರಸ್ವಾಮಿಗೆ ತಿರುಗೇಟು ಕೊಟ್ಟಿದ್ದಾರೆ.
ನಾವೇ ಅಧಿಕಾರಕ್ಕೆ ಬರ್ತೀವಿ: ಇನ್ನು ಮೂರು ವರ್ಷ ಮಾತ್ರವಲ್ಲ. ಇದಾದ ಮೇಲೂ ನಾವೇ ಮತ್ತೈದು ವರ್ಷಕ್ಕೆ ಅಧಿಕಾರಕ್ಕೆ ಬರ್ತೀವಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಜನ ನಮಗೆ ಭಾರೀ ಬಹುಮತ ಕೊಟ್ಟು ಆಶೀರ್ವಾದ ಮಾಡಿದ್ದಾರೆ. ನಾವು (ಕಾಂಗ್ರೆಸ್) ಜನರ ಸೇವೆಯನ್ನು ಮಾಡಿದ್ದೇವೆ. ಅಧಿಕಾರದಲ್ಲಿ ಇದ್ದಾಗ ಐದು ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿ, ಜನಕ್ಕೆ ಸಹಾಯ ಮಾಡಿದ್ದೇವೆ.
ಈ ರೀತಿಯ ಒಂದೇ ಒಂದು ಯೋಜನೆ ಅವರು ಜಾರಿ ಮಾಡಿದ್ರಾ ಹೇಳಿ ನೋಡೋಣ ಅಂತ ಪ್ರಶ್ನೆ ಮಾಡಿದ್ದಾರೆ. ಆಗಲೇ ಹರಿಯೋಕೆ ಆಗಲಿಲ್ಲ. ಈಗ ಬಂದು ನಾನು ಹರಿತೀನಿ ನಾನು ಹರಿತೀನಿ ಅಂದ್ರೆ ಹೆಂಗೆ ಎಂದಿದ್ದಾರೆ.
ಮಾಸ್ ಡೈಲಾಗ್: ಡಿ.ಕೆ ಶಿವಕುಮಾರ್ ಅವರು ಉತ್ತರ ಕರ್ನಾಟಕದಲ್ಲಿ ಮಾಸ್ ಡೈಲಾಗ್‌ಗಳ ಸುರಿಮಳೆಯನ್ನೇ ಸುರಿಸಿದ್ರು.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆಲೆ ಹೊಲದಲ್ಲಿದ್ದರೆ ಚೆಂದ. ಈ ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಕೈ ಅಧಿಕಾರದಲ್ಲಿ ಇರುವುದರಿಂದಲೇ ಈ ಐದು ಗ್ಯಾರಂಟಿ ಜಾರಿಯಾಗಿದೆ. ಇದರಿಂದ ನಿಮ್ಮ ಬದುಕು ಉತ್ತಮವಾಯ್ತು ಎಂದು ಹೇಳಿದ್ದಾರೆ.












Click it and Unblock the Notifications