ಸಿಬಿಐ ವಿಚಾರಣೆ ಸಂದರ್ಭ: ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ಡಿಕೆಶಿ!
ಬೆಂಗಳೂರು, ನ. 25: ಉಪ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಮಸ್ಕಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಸಿಬಿಐ ಸಮನ್ಸ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಇಂದು ಸಂಜೆ 4 ಗಂಟೆಗೆ ಸಿಬಿಐ ಕಚೇರಿಗೆ ತೆರಳಿ ವಿಚಾರಣೆಯನ್ನು ಎದುರಿಸಲಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ಹೀಗಾಗಿ ದೆಹಲಿಗೂ ತೆರಳಬೇಕಾದ ಅನಿವಾರ್ಯತೆ ಡಿ.ಕೆ. ಶಿವಕುಮಾರ್ ಅವರಿಗೆ ಎದುರಾಗಿದೆ.
ಸಿಬಿಐ ವಿಚಾರಣೆ ಬಳಿಕ ಸಂಜೆ 7 ಗಂಟೆಗೆ ದೆಹಲಿಗೆ ತೆರಳುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಆದರೆ ಕೇವಲ 3 ಗಂಟೆಗಳಲ್ಲಿ ವಿಚಾರಣೆ ಮುಗಿಸಿ ಸಿಬಿಐ ಅಧಿಕಾರಿಗಳು ಡಿಕೆಶಿ ಅವರನ್ನು ಕಳುಹಿಸಿ ಕೊಡುತ್ತಾರಾ? ಎಂಬ ಪ್ರಶ್ನೆ ಇದೇ ಸಂದರ್ಭದಲ್ಲಿ ಎದುರಾಗಿದೆ.
ಸಿಬಿಐನಿಂದ ಡಿ.ಕೆ. ಶಿವಕುಮಾರ್ ವಿಚಾರಣೆ ರಾಜಕೀಯ ಪ್ರೇರಿತ!
ಸಿಬಿಐ ವಿಚಾರಣೆ ಎದುರಿಸುತ್ತಿರುವ ಇದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಮನವಿ ಮಾಡಿದ್ದಾರೆ. ಅವರು ಮಾಡಿರುವ ಮನವಿ ಏನು? ಮುಂದಿದೆ ಮಾಹಿತಿ.

ನಾನೊಬ್ಬನೇ ಆಸ್ತಿ ಮಾಡಿದ್ದೇನಾ?
ಮಸ್ಕಿಯಿಂದ ಹಿಂದಿರುಗಿ ಬಳಿಕ ಬೆಂಗಳೂರಿನ ಸದಾಶಿವನಗರದಲ್ಲಿ ಮಾತನಾಡಿರುವ ಡಿಕೆಶಿ ಅವರು, ರಾಜ್ಯದಲ್ಲಿ ಆಸ್ತಿ ಸಂಪಾದಿಸಿರುವುದು ನಾನು ಮಾತ್ರಾನಾ? ಯಾರ ಮೇಲೂ ಇಲ್ಲದ ತನಿಖೆ ನನ್ನ ಮೇಲೆಯೇ ಯಾಕೆ? ನನ್ನ ಮೇಲೆ ನಡೆಯುತ್ತಿರುವ ತನಿಖೆ ದ್ವೇಷದ ರಾಜಕಾರಣವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ನಾನು ಮಾಡಬಾರದ ಕೆಲಸ ಮಾಡಿಲ್ಲ. ಹೀಗಾಗಿ ಹೆದರುವ ಅಗತ್ಯವಿಲ್ಲ. ನಾನು ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇಡೀ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ನನ್ನ ವಿರುದ್ಧ ತನಿಖೆ ಮಾಡುವಂತೆ ಸಿಬಿಐಗೆ ಅನುಮತಿ ನೀಡಿದ್ದಾರೆ. ಇದುವರೆಗೂ ಯಾರ ಮೇಲೆ ಈ ರೀತಿ ತನಿಖೆ ಮಾಡಿಸಿದ್ದಾರೆ?
ರಾಜ್ಯದಲ್ಲಿ ನಾನೊಬ್ಬನೇ ಆಸ್ತಿ ಸಂಪಾದಿಸಿದ್ದೇನಾ? ನನ್ನ ಮೇಲೆ ಯಾವುದಾದರೂ ದೂರು ದಾಖಲಾಗಿದೆಯಾ? ಯಾವುದಾದರೂ ಆರೋಪ ಸಾಬೀತಾಗಿದೆಯಾ? ಯಾರ ಬಳಿಯಾದರೂ ನಾನು ಲಂಚ ಪಡೆದಿದ್ದೇನಾ? ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೇನಾ? ಇಂಧನ ಸಚಿವ ಆಗಿದ್ದಾಗ ಅಕ್ರಮ ಮಾಡಿದ್ದೇನಾ? ಎಂದು ಪ್ರಶ್ನೆ ಮಾಡಿದ್ದಾರೆ.

ತನಿಖೆ ಮಾಡುವ ಪ್ರಕರಣವಲ್ಲ
ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅಧಿಕಾರದಲ್ಲಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ. ಅದನ್ನು ಬಿಟ್ಟು ಸಿಬಿಐಗೆ ಕೊಡುವ ಅಗತ್ಯ ಏನಿತ್ತು? ಎಂದು ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಅಂದು ತನ್ನ ಮರ್ಯಾದೆ ಉಳಿಸಿದ್ದ ಡಿಕೆಶಿಗೆ ಅಹ್ಮದ್ ಪಟೇಲ್ ಋಣ ಸಂದಾಯ ಮಾಡಿದ್ದು ಹೀಗೆ..
ಇದೊಂದು ತನಿಖೆ ಮಾಡುವ ಪ್ರಕರಣವಲ್ಲ ಎಂದು ಅಡ್ವೊಕೇಟ್ ಜನರಲ್ ಅವರೇ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿರುವ ಎಸಿಬಿಯಿಂದಲೇ ವಿಚಾರಣೆ ನಡೆಸಬಹುದು ಎಂದು ತಿಳಿದ್ದಾರೆ. ಆದರೂ ಸರ್ಕಾರದ ಒತ್ತಡದ ಮೇಲೆ ಈ ವಿಚಾರಣೆ ನಡೆಯುತ್ತಿದೆ.

ಸಿಬಿಐ ಅಧಿಕಾರಿಗಳನ್ನು ಪ್ರಶ್ನಿಸುವುದಿಲ್ಲ
ನಾನು ಸಿಬಿಐ ಅಧಿಕಾರಿಗಳ ತನಿಖಾ ವ್ಯವಸ್ಥೆ ಪ್ರಶ್ನಿಸುವುದಿಲ್ಲ. ಅವರು ನಮಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ಕೈಪಿಡಿ ನಾನು ಓದಿದ್ದೇನೆ. 48 ದಿನ ನಾನು ಈ ಕುರಿತ ಪುಸ್ತಕಗಳನ್ನು ಓದಿದ್ದೇನೆ. ಅವರಿಗೆ ಬರುವ ಮಾರ್ಗದರ್ಶನದಂತೆ ಅವರು ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾನು ದೂರುವುದಿಲ್ಲ ಎಂದಿದ್ದಾರೆ.

ನೋಟಿಸ್ ಕೊಟ್ಟಿದ್ದರು
ಸಿಬಿಐ ಅಧಿಕಾರಿಗಳು 23 ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ 23 ರಂದು ಮಸ್ಕಿ ಪ್ರವಾಸ ಪೂರ್ವನಿಗದಿಯಾಗಿದ್ದ ಹಿನ್ನೆಲೆಯಲ್ಲಿ, 25 ರಂದು ವಿಚಾರಣೆಗೆ ಹಾಜರಾಗುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೆ. ಇವತ್ತು ವಿಚಾರಣೆಗೆ ಹಾಜರಾಗುತ್ತೇನೆ.
ಅಕ್ರಮ ಆಸ್ತಿ ಗಳಿಕೆ ಕೇಸ್ : ಡಿ.ಕೆ. ಶಿವಕುಮಾರ್ ಸಿಬಿಐ ಮುಂದೆ ಹಾಜರು
ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದ ಮೇಲೆ ಅದರಿಂದ ತಪ್ಪಿಸಿಕೊಳ್ಳುವುದಿಲ್ಲ. ನಾನು ಇ.ಡಿ. ಸೇರಿದಂತೆ ಎಲ್ಲ ತನಿಖಾ ಸಂಸ್ಥೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಾ ಬಂದಿದ್ದೇನೆ. ನಾನು 4 ಗಂಟೆಗೆ ಹಾಜರಾಗುವುದಾಗಿ ತಿಳಿಸಿದ್ದೇನೆ. ಸಾಧ್ಯವಾದರೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗುತ್ತೇನೆ.

ಅಭಿಮಾನಿಗಳಲ್ಲಿ ಮನವಿ
ಈಗಾಗಲೇ ನಾನು ಮನವಿ ಮಾಡಿಕೊಂಡಿರುವಂತೆ, ನಾನು ವಿಚಾರಣೆಗೆ ಹಾಜರಾಗಲು ಸಿಬಿಐ ಕಚೇರಿಗೆ ಹೋದಾಗ ಯಾರು ಕೂಡ ಅಲ್ಲಿಗೆ ಬರಬಾರದು. ನಿಮಗೆ ಮುಜುಗರ ತರುವ ಯಾವುದೇ ಕೆಲಸ ನಾನು ಮಾಡಿಲ್ಲ. ನನಗೆ ಏನಾಗುತ್ತದೋ ಎಂಬ ಆತಂಕ ಬೇಡ.
ಅಧಿಕಾರಿಗಳು ಅವರ ಕೆಲಸ ಮಾಡುತ್ತಾರೆ. ಅಲ್ಲಿಗೆ ಬಂದು ಯಾರ ವಿರುದ್ಧವೂ ಘೋಷಣೆ ಹಾಕುವುದು ಬೇಡ. ಪರಿಸ್ಥಿತಿ ಕೈಮೀರಿದರೆ ನಮಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ನಾನು ಸ್ನೇಹಿತರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಈ ಮನವಿ ಮಾಡಿಕೊಳ್ಳುತ್ತಿದ್ದೇನೆ.

ನನ್ನ ಮೇಲೆ ವಿಶೇಷವಾದ ನಂಬಿಕೆ
ಅಹ್ಮದ್ ಪಟೇಲ್ ಅವರ ನಿಧನ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ನಮ್ಮ ಪಕ್ಷಕ್ಕೆ ನಿಷ್ಠೆಯಿಂದ ಇದ್ದ ನಾಯಕರು. ರಾಜ್ಯಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅವರು ಯಾವಾಗ ಬೇಕಾದರೂ ಮಂತ್ರಿ ಆಗಬಹುದಿತ್ತು. ಆದರೆ ಅವರು ಯಾವತ್ತೂ ಅಧಿಕಾರ ಬಯಸಲಿಲ್ಲ. ಪಕ್ಷ ಸಂಘಟನೆಯಲ್ಲೇ ಅವರು ತಮ್ಮನ್ನು ತೊಡಗಿಸಿಕೊಂಡರು. ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ನನ್ನ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟಿದ್ದರು. ನನ್ನ ಕಷ್ಟದ ದಿನಗಳಲ್ಲಿ ನನ್ನ ಜತೆ ನಿಂತರು.
ಅವರು ರಾಜ್ಯಸಭೆ ಚುನಾವಣೆಗೆ ನಿಂತಾಗ ಅದರ ಜವಾಬ್ದಾರಿ ಯಾರಿಗೆ ಬೇಕಾದರೂ ಕೊಡಬಹುದಿತ್ತು. ಅವರು ನನ್ನ ಮೇಲೆ ನಂಬಿಕೆ ಇಟ್ಟು ತಮ್ಮ ಶಾಸಕರನ್ನು ಕಳುಹಿಸಿಕೊಟ್ಟರು. ಒಂದು ವಾರದ ಹಿಂದೆ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದೆ. ಅವರು ಕೊಟ್ಟ ಮಾರ್ಗದರ್ಶನ, ಧೈರ್ಯವೇ ನಮಗೆ ಶಕ್ತಿ. ದೇಶದ ಉದ್ದಗಲಕ್ಕೂ ಸಾವಿರಾರು ನಾಯಕರನ್ನು ಗುರುತಿಸಿ, ಬೆಳೆಸಿ ಶಕ್ತಿ ತುಂಬಿದ ಧೀಮಂತ ನಾಯಕ ಅವರು ಎಂದು ಡಿಕೆಶಿ ಸ್ಮರಿಸಿದ್ದಾರೆ.