Monsoon Rain 2026: ಜೂನ್ 2 ಕಳೆದರೂ ಕೇರಳಕ್ಕೆ ಬಾರದ ಮುಂಗಾರು, ಮಳೆ ವಿಳಂಬ ಮುನ್ಸೂಚನೆ ಕೊಟ್ಟ ಐಎಂಡಿ
Monsoon Rain Updates: ಸಮುದ್ರ ಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದರೂ ಸಹಿತ ಮುಂಗಾರು ಮಳೆ (Monsoon Rain 2026) ಸುರಿಸುವ ಮಾರುತಗಳ ಕೇರಳ ಪ್ರವೇಶಿಸುವುದು ಮತ್ತೆ ತಡವಾಗಿದೆ. ಈ ಮೂಲಕ ಎರಡನೇ ಬಾರಿಗೆ ಭಾರತೀಯ ಹವಾಮಾನ ಇಲಾಖೆ (IMD) ನೀಡಿದ್ದ ಮುಂಗಾರು ಮಳೆಯ ಮುನ್ಸೂಚನೆಗಳು ಸುಳ್ಳಾಗಿವೆ. ದೇಶದಲ್ಲಿ ಮುಂಗಾರು ಆರಂಭ ಈ ವರ್ಷ ಮತ್ತೆ ವಿಳಂಬವಾಗಲಿದೆ.
ಹವಾಮಾನ ಇಲಾಖೆ (IMD) ಮುನ್ಸೂಚನೆ ಪ್ರಕಾರ, ಪ್ರತಿ ವರ್ಷ ಜೂನ್ 1ರಂದು ಮುಂಗಾರು ಮಳೆ ಕೇರಳ ಪ್ರವೇಶಿಸುತ್ತದೆ. ಕೆಲವು ಬಾರಿ ಈ ದಿನಾಂಕ ಹಿಂದು ಮುಂದಾಗುತ್ತದೆ. ಪ್ರಬಲ ಮುಂಗಾರಿಗೆ ಅಗತ್ಯವಾದ ಸಮುದ್ರ ಮೇಲ್ಮೈನ ಗಾಳಿಯು ಜೂನ್ 5-6ರ ನಂತರವೇ ಸ್ಥಿರವಾಗಲಿವೆ. ಅಲ್ಲಿಯವರೆಗೆ ಮುಂಗಾರು ಮಳೆ (ನೈಋತ್ಯ ಮುಂಗಾರು) ದುರ್ಬಲವಾಗಿರಲಿದೆ. ಇದು ಮಾನ್ಸೂನ್ ಮಾರುತಗಳು ತಡವಾಗಿ ಕೇರಳ ಪ್ರವೇಶಿಸುವುದಕ್ಕೆ ಕಾರಣವಾಗಿದೆ.

ಈ ವರ್ಷ ಮುಂಗಾರು ಕೊರತೆ ಇದೆ ವಿಜ್ಞಾನಿಗಳು ಮುನ್ಸೂಚನೆ ಕೊಟ್ಟಿದ್ದಾರೆ. ಅದರಲ್ಲಿ ಮುಂಗಾರು ಆಗಮನ ವಿಳಂಬವಾದರೆ ಕೃಷಿಗೆ ಸಾಕಷ್ಟು ಸಮಸ್ಯೆ ಆಗಲಿದೆ. ಮೇ 26ರಂದು ಮುಂಗಾರು ಆಗಮನ ನಿರೀಕ್ಷೆ ಇತ್ತು. ಆ ಮುನ್ಸೂಚನೆ ಸುಳ್ಳಾಗುತ್ತಿದ್ದಂತೆ ಜೂನ್ 2 ರಿಂದ 4ರವರೆಗೆ ಮುಂಗಾರು ಅಧಿಕೃತವಾಗಿ ಕೇರಳವನ್ನು ಪ್ರವೇಶಿಸಲಿದೆ ಎಂದು ಐಎಂಡಿ ವಿಜ್ಞಾನಿಗಳು ಹೇಳಿದರು. ಪೂರ್ವ ಮುಂಗಾರು ಮಳೆ ಕೇರಳಾದ್ಯಂತ ಅಬ್ಬರಿಸಿತಾದರೂ ಸಹಿತ ಮುಂಗಾರು ಆಗಮನಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿಲ್ಲ. ಅದು ನಿರ್ಮಾಣವಾಗಲು ಇನ್ನೂ ಮೂರು ದಿನಗಳ ಬೇಕಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ.
ಕೃಷಿ, ಅಂತರ್ಜಲ, ಆರ್ಥಿಕಗೆ ಮುಂಗಾರು ಪೂರಕ
ಕೃಷಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಭಾರತದಲ್ಲಿ ಮುಂಗಾರು ಮಳೆ ಆಸರೆಯಾಗಿದೆ. ವಾರ್ಷಿಕ ಅಗತ್ಯ ಮಳೆಯಲ್ಲಿ ಶೇ. 70ರಷ್ಟು ಮಳೆ ಮುಂಗಾರು ಋತುವಿನಲ್ಲಿ ಬರುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಹಿಂದೂ ಮಹಾಸಾಗರದಿಂದ ತೇವಾಂಶಭರಿತ ಗಾಳಿ ತರುವ ಈ ವ್ಯವಸ್ಥೆ ಇದಾಗಿದೆ. ಕೃಷಿಗೆ ಆಧಾರ ಮಾತ್ರವಲ್ಲದೇ, ಜಲಾಶಯಗಳಲ್ಲಿ ನೀರಿನ ಸಂಗ್ರಹ, ಅಂತರ್ಜಲ ವೃದ್ಧಿಗೂ ಪೂರಕವಾಗಿದೆ. ದೇಶದ ಆರ್ಥಿಕತೆಯು ಇದರ ಮೇಲೆ ಅವಲಂಬಿಸಿದೆ.
ಐಎಡಿ ಬಳಸುವ ಗ್ಲೋಬಲ್ ಫೋರ್‌ಕಾಸ್ಟ್ ಸಿಸ್ಟಮ್ (ಜಿಎಫ್‌ಎಸ್) ಮಾದರಿಯು ವಾತಾವರಣದಲ್ಲಿ ಆಗುವ ಬದಲಾವಣೆ, ಮುಂಗಾರಿನ ಹವಾಮಾನ ಸ್ಥಿತಿಗತಿಯನ್ನು ಕೆಲವು ದಿನಗಳ ಮೊದಲೇ ಊಹಿಸುತ್ತದೆ. ಈ ಬಾರಿಯು ಊಹಿಸಿ ಅವಧಿಗೂ ಮುನ್ನವೇ ಮೇ 26ರಂದು ಮುಂಗಾರು ಆಗಮನ ಖಚಿತ ಎಂದು ತಿಳಿಸಲಾಗಿತ್ತು. ಆದರೆ ಪಶ್ಚಿಮದಿಂದ ತೇವಾಂಶ ತರುವ ಗಾಳಿಯು ಕ್ಷೀಣಿಸಿಲ್ಲ. ಹೀಗಾಗಿ ದಕ್ಷಿಣ ಭಾರತದಲ್ಲಿ ಪ್ರಬಲ ಪೂರ್ವ ಮಾರುತಗಳು ಬಲಗೊಂಡಿಲ್ಲ ಎಂದು ಹೇಳಲಾಗಿದೆ.
ವಾತಾವರಣ ಪೂರಕವಾಗಿದ್ದರೂ ಮುಂಗಾರು ತಡ
ಐಎಂಡಿ ಮಾನದಂಡಗಳ ಪ್ರಕಾರ, ಕೇರಳದಲ್ಲಿ ಗುರುತಿಸಲಾದ ಸ್ಥಳದಲ್ಲಿ ಕನಿಷ್ಠ ಶೇ.60ರಷ್ಟು ನಿರಂತರ ಮಳೆ ಆಗಬೇಕು. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸಾಕಷ್ಟು ಬದಲಾವಣೆಗಳು ಆಗಬೇಕು. ಹೀಗೆ ಕೆಲವು ನಿರ್ದಿಷ್ಟ ಅಂಶಗಳ ಆಧಾರದಲ್ಲಿ ಮುಂಗಾರಿನ ಮುನ್ಸೂಚನೆ ನೀಡಲಾಗುತ್ತದೆ. ಸದ್ಯ ಕೇರಳದಲ್ಲಿ ಬರುತ್ತಿರುವ ಮಲೆ, ಮೋಡದ ಹೊದಿಕೆ ತೃಪ್ತಿಕರವಾಗಿದೆ. ಆದರೂ ಸಹಿತ ಮುಂಗಾರು ಮಳೆ ಸುರಿಸುವ ಮಾರುತಗಳ ಕೊರತೆ ಕಾಣುತ್ತಿದೆ. ವಾಯು ಚಂಡಮಾರುತ ಪರಿಚಲನೆ ಪರಿಣಾಮ ಮುಂಗಾರು ಗಾಳಿಯ ಸಂಚಾರ, ಆಗಮನ ದುರ್ಬಲಗೊಳಿಸಿದೆ.
ಮಳೆ ಕೊರತೆ, ಮುಂಗಾರು ವಿಳಂಬ ಪರಿಣಾಮ: ಕೃಷಿಗೆ ಹಿನ್ನಡೆ
ಈ ವರ್ಷ 'ಎಲ್‌ನಿನೋ' ಪ್ರಭಾವದಿಂದಾಗಿ ಮಳೆ ಕೊರತೆ ಉಂಟಾಗಲಿದೆ ಎಂದು ಹೇಳಲಾಗಿದೆ. ಮೊದಲು ವಾಡಿಕೆಯಷ್ಟಲ್ಲದೇ ಶೇ.92ರಷ್ಟು ಮಳೆ ಬರುತ್ತದೆ, 8ರಷ್ಟು ಕೊರತೆ ಎನ್ನಲಾಗಿತ್ತು. ಇದೀಗ ಶೇ.10ರಷ್ಟು ಕೊರತೆ ಆಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ರೈತರಿಗೆ ಆಘಾತ ನೀಡಿದಂತಾಗಿದೆ. ಮುಂಗಾರು ತಡವಾಗಿ ಆಗಮಿಸುವ ಕಾರಣ ಮುಂಗಾರು ಹಂಗಾಮಿನ ಬಿತ್ತನೆ ಮಾಡಿದ ರೈತರನ್ನು ಆಕಾಶವನ್ನೇ ನೋಡುತ್ತಾ ಮಳೆಗಾಗಿ ಕಾಯುತ್ತಿದ್ದಾರೆ.
ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಉತ್ತಮ ಪೂರ್ವ ಮುಂಗಾರು ಮಳೆ ಆಗಿದ್ದರಿಂದ ಜಮೀನು ಹದ ಮಾಡಿಕೊಂಡ ರೈತರು ಖಾರಿಫ್ ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ನಿಗದಿತ ಅವಧಿಗಿಂತ ಸುಮಾರು ಒಂದು ವಾರ ತಡವಾಗಿ ಆಗಮಿಸುವ ಸಾಧ್ಯತೆ ಇದೆ. ಆರಂಭದಲ್ಲಿ ಮಳೆ ಉತ್ತಮವಾಗಿ ಸುರಿಯದೇ ದುರ್ಬಲವಾಗಿದ್ದರೆ ರೈತರು ಕೈಸುಟ್ಟುಕೊಂಡ ಸ್ಥಿತಿ ತಲುಪಲಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತಿದ ಬೀಜ ಮೊಳಕೆಯೊಡೆದು ಸಸಿ ಇದ್ದಾಗಲೇ ಮಳೆ ಕೊರತೆ ಅನುಭವಿಸಲಿದೆ. ಅದು ಮುಂದೆ ಇಳುವರಿ ಮೇಲೂ ಪರಿಣಾಮ ಬೀರಲಿದೆ. ರೈತರಿ ಆದಾಯ, ದೇಶದ ಆರ್ಥಿಕತೆಗೆ ಹೊಡೆತ ನೀಡುವ ಸಾಧ್ಯತೆ ಇದೆ.
ಉತ್ತರ ಭಾರತದಲ್ಲಿ ಬಿತ್ತನೆಗೆ ಸಜ್ಜು, ಮಳೆಯೇ ಇಲ್ಲ
ಇನ್ನೂ ಉತ್ತರ ಮತ್ತು ಮಧ್ಯ ಭಾರತ ತೀವ್ರ ಉಷ್ಣ ಆಲೆಗಳು ಮುಂದುವರಿದಿವೆ. ರೈತರ ಬಿತ್ತನೆಗೆ ಕಾಯುತ್ತಿರುವ ಸಂದರ್ಭದಲ್ಲಿ ಮುಂಗಾರು ವಿಳಂಬ ಅವರಲ್ಲಿ ನಿರಾಶೆ ಮೂಡಿಸಿದೆ. ಈ ನೀರ್ಣಾಯಕ ಮಳೆಯು ಆಗಮನ ವಿಳಂಬವಾದಷ್ಟು ತೊಂದರೆ ಹೆಚ್ಚಾಗಲಿದೆ. ಮತ್ತೊಂದರೆ ತಡವಾಗಿ ಆರಂಭವಾಗುವ ಮುಂಗಾರಿನ ಪ್ರಭಾವ ಆರಂಭದಲ್ಲಾದರೂ ಹೆಚ್ಚಿರುತ್ತದೆ ಅಂತಲೂ ಹೇಳಲಾಗುತ್ತಿದೆ. ದೇಶದ ಜನರಿಗೆ ಈ ವಾರಾಂತ್ಯದವರೆಗೂ ಮುಂಗಾರಿಗೆ ಕಾಯುವಿಕೆ ಮುಂದುವರಿಯಲಿದೆ.













Click it and Unblock the Notifications