ಕಾಂಗ್ರೆಸ್ ಸರ್ಕಾರದಿಂದ ಇನ್ನೂ ಐದು ಗ್ಯಾರಂಟಿ: ಕರಾವಳಿ ಭಾಗಕ್ಕೂ ಸಿಹಿಸುದ್ದಿ ಕೊಟ್ಟ ಡಿ.ಕೆ.ಶಿವಕುಮಾರ್
ಪಂಚ ಗ್ಯಾರಂಟಿ ಜೊತೆಗೆ ಭೂಮಿ ಆರನೇ ಗ್ಯಾರಂಟಿ, ನೀರು 7ನೇ ಗ್ಯಾರಂಟಿ, ಮನೆಗಳನ್ನು ನೀಡುವುದು 8ನೇ ಗ್ಯಾರಂಟಿ, ಇ ಖಾತಾ ನೀಡುವುದು 9ನೇ ಗ್ಯಾರಂಟಿ, 10ನೇ ಗ್ಯಾರಂಟಿಯಾಗಿ ಉಚಿತವಾಗಿ ಆರೋಗ್ಯ ನೀಡುವುದು ನಮ್ಮ ಸರ್ಕಾರದ ಸಂಕಲ್ಪ. ಇದನ್ನು ನಮ್ಮ ಸರ್ಕಾರ ಕಾರ್ಯರೂಪಕ್ಕೆ ತರಲಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು. ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭಾನುವಾರ ಮಾತನಾಡಿದರು.
"ನೀವೆಲ್ಲರೂ ಸೇರಿ ರಾಜ್ಯದಲ್ಲಿ ನಮಗೆ ಶಕ್ತಿ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ನಾವು ಬಂದಿದ್ದೇವೆ. ಇದು ಕಟ್ಟಡ ನಿರ್ಮಾಣ ವಿಚಾರ ಮಾತ್ರವಲ್ಲ, ಇಲ್ಲಿ ನಿಮಗೆ ನಮ್ಮ ಮೇಲಿರುವ ನಂಬಿಕೆ ಮತ್ತಷ್ಟು ಗಟ್ಟಿಯಾಗಬೇಕು. ನಾವು ಮಾಡುವ ಕೆಲಸ ನಮ್ಮ ಸಾಕ್ಷಿಗುಡ್ಡೆಗಳಾಗಿ ಉಳಿದುಕೊಳ್ಳುತ್ತದೆ. ಜನರ ಸಹಕಾರಕ್ಕೆ ಈ ಕೆಲಸ ಶಕ್ತಿಯಾಗಿ ಉಳಿದುಕೊಳ್ಳುತ್ತದೆ" ಎಂದು ತಿಳಿಸಿದರು.

ಕರಾವಳಿಗೆ ವಿಶೇಷ ಪ್ರವಾಸೋದ್ಯಮ ನೀತಿ
ಕರಾವಳಿ ಭಾಗದ 300 ಕಿ.ಮೀ ಉದ್ದದ ತೀರ ಪ್ರದೇಶದ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರಲು ನಿರ್ಧರಿಸಿದ್ದೇವೆ. ಪ್ರಕೃತಿ ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಆಧಾರವಾಗಿಸಿಕೊಂಡು ಈ ಭಾಗವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬಂಡವಾಳ ಹೂಡಿಕೆದಾರರೊಂದಿಗೆ ಚರ್ಚೆ ನಡೆಯುತ್ತಿದೆ. ಇದರ ಮೂಲಕ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಿ, ಬೆಂಗಳೂರಿಗೆ ಅಥವಾ ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ತಪ್ಪಿಸಬೇಕು ಎಂದರು.
ಕೋಮುಗಲಭೆ ನಡೆಯದಂತೆ ನೋಡಿಕೊಂಡಿದ್ದೇವೆ
ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಭಾಗದಲ್ಲಿ ಒಂದೇ ಒಂದು ಕೋಮುಗಲಭೆಯೂ ನಡೆಯದಂತೆ ನೋಡಿಕೊಂಡಿದ್ದೇವೆ. ಇದುವೇ ಸರ್ಕಾರದ ಶಕ್ತಿ. ಹಿಂದಿನ ಅವಧಿಯಲ್ಲಿ ಕೋಮುಗಲಭೆಗಳು ಹೆಚ್ಚಾಗಿ ನಡೆದ ಕಾರಣ ಹೂಡಿಕೆದಾರರು ಮುಂದೆ ಬರುತ್ತಿರಲಿಲ್ಲ ಎಂದು ಹೇಳಿದರು. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ದೇವರು ವರ-ಶಾಪ ಕೊಡುವುದಿಲ್ಲ; ಅವಕಾಶ ನೀಡುತ್ತಾನೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರ್‌ಗಳು ಇದ್ದಾರೆ. ರಾಜ್ಯದಲ್ಲಿ 250 ಇಂಜಿನಿಯರಿಂಗ್ ಕಾಲೇಜುಗಳಿವೆ. ಬಿಜೆಪಿ ಟೀಕೆ ಮಾಡುವುದು ಬಿಟ್ಟು, ತಮ್ಮ ಕಾಲದಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಹೇಳಬೇಕು ಎಂದು ಟೀಕಿಸಿದರು. ನಾವು ನೀಡುವ 100 ರೂ. ತೆರಿಗೆಗೆ ಕೇಂದ್ರದಿಂದ ಕೇವಲ 13 ರೂ. ಮಾತ್ರ ಮರಳುತ್ತದೆ. ಆದರೂ ನಾವು 43% ತೆರಿಗೆ ನೀಡುತ್ತಾ ರಾಜ್ಯವನ್ನು ಅಭಿವೃದ್ಧಿಶೀಲ ರಾಜ್ಯವನ್ನಾಗಿ ನಿರ್ಮಿಸುತ್ತಿದ್ದೇವೆ ಎಂದರು.
ವೈದ್ಯಕೀಯ ಶಿಕ್ಷಣದಲ್ಲಿ ಕರ್ನಾಟಕ ಮುಂಚೂಣಿ
ರಾಜ್ಯದಲ್ಲಿ 13,940 ವೈದ್ಯಕೀಯ ಸೀಟುಗಳಿದ್ದು, 1.07 ಲಕ್ಷ ವಿದ್ಯಾರ್ಥಿಗಳು ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ದೇಶದಲ್ಲೇ ಅತಿ ಹೆಚ್ಚು 70 ವೈದ್ಯಕೀಯ ಕಾಲೇಜುಗಳು ಕರ್ನಾಟಕದಲ್ಲಿವೆ. ಮಂಗಳೂರು ಮತ್ತು ಉಡುಪಿಯಲ್ಲಿ ಮಾತ್ರವೇ 14-15 ಕಾಲೇಜುಗಳಿವೆ. ನಮ್ಮ ವೈದ್ಯರು ವಿದೇಶಗಳಲ್ಲೂ ಸೇವೆ ಸಲ್ಲಿಸಿ ದೇಶದ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು. ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಉಲ್ಲೇಖಿಸಿದರು.
ಗ್ಯಾರಂಟಿ ಯೋಜನೆಗಳ ಸಾಧನೆ
ಗ್ಯಾರಂಟಿ ಯೋಜನೆಗಳ ಮೂಲಕ 1 ಲಕ್ಷ ಕೋಟಿ ರೂ. ಹಣವನ್ನು ಜನರ ಜೇಬಿಗೆ ಹಾಕಿದ್ದೇವೆ. ಕಳೆದ ವಾರ 1 ಲಕ್ಷ ಜನರಿಗೆ ಆಸ್ತಿ ದಾಖಲೆ ನೀಡಿ ಭೂಮಿ ಗ್ಯಾರಂಟಿ ನೀಡಲಾಗಿದೆ ಎಂದು ವಿವರಿಸಿದರು. ಸೇವೆವೇ ಭಕ್ತಿ. ಯೋಗಿ ಎನಿಸಿಕೊಳ್ಳುವುದಕ್ಕಿಂತ ಉಪಯೋಗಿ ಎನಿಸಿಕೊಳ್ಳುವುದು ಮುಖ್ಯ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಬಿಜೆಪಿ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ಅಂಕೋಲಾದಲ್ಲಿ ಮಾತನಾಡಿದ ಅವರು, "ನಾವು ನಿರ್ಮಿಸುವ ಸೇತುವೆ ಜನರನ್ನು ಸಂಪರ್ಕಿಸುತ್ತದೆ; ಬೇರೆಯವರು ಕಟ್ಟುವ ಗೋಡೆ ಜನರನ್ನು ವಿಭಜಿಸುತ್ತದೆ. ಇದೇ ನಮ್ಮ ಮತ್ತು ಅವರ ನಡುವಿನ ವ್ಯತ್ಯಾಸ ಎಂದು ಹೇಳಿದರು. ಕರಾವಳಿ ಭಾಗದ ಅಭಿವೃದ್ಧಿಗೆ 2,000 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿ, ಜನರ ಸಹಕಾರ ಮತ್ತು ಆಶೀರ್ವಾದ ಕೋರಿದರು.
ಜನರ ಆರ್ಥಿಕ ಸಂಕಷ್ಟ ಬಗೆಹರಿಸಲು ಈ ಪಂಚ ಗ್ಯಾರಂಟಿ ನೀಡಿದ್ದೇವೆ. ಈ ಯೋಜನೆ ಟೀಕೆ ಮಾಡಿದವರೇ ಈಗ ನಮ್ಮ ಯೋಜನೆ ಅನುಸರಿಸುತ್ತಿದ್ದಾರೆ. ನಾವು ನುಡಿದಂತೆ ನಡೆಯುತ್ತಿದ್ದೇವೆ. ನಮಗೆ ನಾಲ್ವರು ಶಾಸಕರನ್ನು ಆಯ್ಕೆ ಮಾಡಿರುವ ಈ ಭಾಗದ ಅಭಿವೃದ್ಧಿಗೆ 2 ಸಾವಿರ ಕೋಟಿ ಹಣ ಅನುದಾನ ನೀಡಿದ್ದೇವೆ. ನಾವು ಆರಂಭಿಸಿದ ಕೆಲಸವನ್ನು ನಾವೇ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ಈ ನಾಯಕರು ಸೇರಿ ನಮಗೆ ಅನೇಕ ಯೋಜನೆಗಳ ಮನವಿ ನೀಡಿದ್ದಾರೆ ಎಂದರು.
ಜನರ ಸೇವೆ ನಮ್ಮ ಸರ್ಕಾರದ ಸಂಕಲ್ಪ. ಯೋಗಿ ಎಂದು ಕರೆಸಿಕೊಳ್ಳುವುದಕ್ಕಿಂತ ಉಪಯೋಗಿ ಎನಿಸಿಕೊಳ್ಳುವುದು ಉತ್ತಮ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಬಿಜೆಪಿಯವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ಸೈಲ್ ಅವರು ತಮ್ಮ 50 ಕೋಟಿ ಅನುದಾನದಲ್ಲಿ 25 ಕೋಟಿ ಹಣ ವಿವಿಧ ದೇವಾಲಯಗಳ ಅಭಿವೃದ್ಧಿಗೆ ನೀಡಿರುವುದಾಗಿ ಹೇಳಿದ್ದಾರೆ. ಬಹಳ ಸಂತೋಷ ಎಂದು ಹೇಳಿದರು.












Click it and Unblock the Notifications