ನಿವೃತ್ತಿ ವಯಸ್ಸು ಮಿತಿ ಬಗ್ಗೆ ದೇವೇಗೌಡ
ರಾಯಚೂರು, ಸೆ.29: ಕೇಂದ್ರ ಸರ್ಕಾರ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಏರಿಸುವ ವಿಚಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿರುವುದನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸ್ವಾಗತಿಸಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮೈತಿಯನ್ನು ಏರಿಕೆ ಮಾಡಬಾರದು ಎಂದು ದೇವೇಗೌಡರು ಆಗ್ರಹಿಸಿದ್ದರು. ಈ ರೀತಿ ವಯಸ್ಸಿನ ಮಿತಿ ಏರಿಕೆ ಮಾಡಿದರೆ ಯುವಕರಿಗೆ ತೊಂದರೆಯಾಗಲಿದೆ. ದೇಶದಲ್ಲಿ ಕೆಲಸ ಮಾಡಲು ಸಾಕಷ್ಟು ಸಂಖ್ಯೆಯ ಯುವಕರಿದ್ದಾರೆ. ಇನ್ನೊಂದು ಕಡೆ ನಿರುದ್ಯೋಗ ಸಮಸ್ಯೆ ಕೂಡ ಇದೆ. ಇಂತಹ ಸನ್ನಿವೇಶದಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಳ ಮಾಡುವ ಆಲೋಚನೆಯನ್ನು ಸರ್ಕಾರ ಕೈ ಬಿಡಬೇಕು ಎಂದು ದೇವೇಗೌಡರು ಹೇಳಿದ್ದಾರೆ.
1998ರಲ್ಲಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸಿನ ಮಿತಿಯನ್ನು 58 ವರ್ಷದಿಂದ 60 ವರ್ಷಕ್ಕೆ ಏರಿಸಲಾಗಿತ್ತು. ಶಿಕ್ಷಕರು ಹಾಗೂ ವಿಜ್ಞಾನಿಗಳ ನಿವೃತ್ತಿ ವಯಸ್ಸು ಮಾತ್ರ 62 ಆಗಿದೆ. ಆದರೆ, ಈಗಲೂ ಹಲವು ರಾಜ್ಯಗಳಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ಆಗಿದೆ.
ತೃತೀಯರಂಗದ ಬಗ್ಗೆ : ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಪ್ರಾದೇಶಿಕ ಪಕ್ಷಗಳು ಒಂದುಗೂಡಿ ರಾಷ್ಟ್ರಮಟ್ಟದಲ್ಲಿ ತೃತೀಯ ರಂಗ ರಚನೆ ಮಾಡಿಕೊಳ್ಳುವುದು ಬಹಳ ಅಗತ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ದೇಶ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಸನ್ನಿವೇಶದಲ್ಲಿ ಪ್ರಾದೇಶಿಕ ಪಕ್ಷಗಳು ಪರಸ್ಪರ ಭಿನ್ನಾಭಿಪ್ರಾಯ ಮರೆತು ದೇಶದ ಹಿತಕ್ಕಾಗಿ ಒಂದುಗೂಡಬೇಕಾಗಿದೆ ಎಂದರು. ನನ್ನಲ್ಲಿ ಹೋರಾಟದ ಬಲ, ಛಲ ಇರುವವರೆಗೂ ನಾನು ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ.
ಕಡೆ ತನಕ ಹೋರಾಟ ಮಾಡುತ್ತೇನೆ ಎಂದರು.
2ಜಿ ಹಗರಣದಲ್ಲಿ ಜಂಟಿ ಸಂಸದೀಯ ಸಮಿತಿ ಪ್ರಧಾನಮಂತ್ರಿಯವರಿಗೆ ಕ್ಲಿನ್‌ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅಯ್ಯೋ ಬಿಡ್ರಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮೂರು ಹೋಳಾಗಿದೆ. ಕಳಂಕಿತರನ್ನು ನಿರ್ಬಂಧ ಮಾಡಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂಬುದನ್ನು ಯಾರೊಬ್ಬರೂ ಮರೆಯಬಾರದು ಎಂದರು.
ಭಾರತ-ಪಾಕ್ ಬಿಕ್ಕಟ್ಟು ನಿವಾರಣೆಗೆ ಮೂರನೆಯವರ ಮಧ್ಯಸ್ಥಿಕೆ ಬೇಕಾಗಿಲ್ಲ. ಎರಡೂ ರಾಷ್ಟ್ರಗಳು ಮಾತುಕತೆ ನಡೆಸುವ ಮೂಲಕ ಪ್ರಸ್ತುತ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಿದ್ದುಗೆ ಸ್ವಾತಂತ್ರ್ಯ ಕೊಡಿ: ರಾಜ್ಯ ರಾಜಕೀಯಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ನಿಯಂತ್ರಣ ಮಾಡಲು ಸಮನ್ವಯ ಸಮಿತಿ ರಚನೆ ಮಾಡಿರುವುದು ವಿಷಾದನೀಯ. ಸಿದ್ದರಾಮಯ್ಯ ಅವರನ್ನು ನಿಯಂತ್ರಣ ಮಾಡಲು ಮಾಡಿರುವ ಸಮಿತಿಯಾಗಿದೆ. ಇದು ಆ ಪಕ್ಷದ ಆಂತರಿಕ ವಿಚಾರವಾಗಿರುವುದರಿಂದ ಇದರ ಬಗ್ಗೆ ಹೆಚ್ಚು ವ್ಯಾಖ್ಯಾನ ನಾನು ಮಾಡಲಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications