ಅರ್ಕಾವತಿ ಬಡಾವಣೆ: ಜಮೀನು ನೀಡಿದ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಡಿ.ಕೆ.ಶಿವಕುಮಾರ್
ಬೆಂಗಳೂರು: ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ ಬೆಲೆ ಬಾಳುವ ಜಮೀನನ್ನು ನೀಡಿದ್ದಾರೆ. ಈ ವಿಚಾರದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಲ್ಲಿ ಕೆಲವು ಕೇಸ್ ಗಳಿರುವುದರಿಂದ ಅವರಿಗೆ ಪರಿಹಾರ ಒದಗಿಸಲು ಸ್ವಲ್ಪ ಅಡ್ಡಿಯಾಗಿದೆ. ಶೀಘ್ರದಲ್ಲೇ ಒಂದು ಸಭೆಯನ್ನು ನಡೆಸಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.
ಬಿಜೆಪಿ ಶಾಸಕ ಮುನಿರಾಜು ಅವರು ಅರ್ಕಾವತಿ ಬಡಾವಣೆ ನಿರ್ಮಾಣವಾಗಿ 20 ವರ್ಷವಾಗಿದ್ದರೂ ನಿವೇಶನ ಸ್ವಾಧೀನ, ರೈತರಿಗೆ ಪರಿಹಾರ ನೀಡದಿರುವ ಬಗ್ಗೆ ಪ್ರಶ್ನಿಸಿದ್ದಾರೆ. ವಿಧಾನಸಭೆಯ ಗಮನ ಸೆಳೆವ ಸೂಚನೆ ವೇಳೆ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರ ನೀಡಿದ್ದು, ಅರ್ಕಾವತಿ ಬಡಾವಣೆ ಎಸ್.ಎಂ ಕೃಷ್ಣ ಅವರ ಕಾಲದಲ್ಲೇ ಆರಂಭವಾಯಿತು. ಈ ಮಧ್ಯೆ ನಿವೇಶನಕ್ಕೆ ಅನೇಕರು ಅರ್ಜಿ ಹಾಕಿಕೊಂಡು, ಅವರಿಗೆ ನಿವೇಶನ ಮಂಜೂರಾಯಿತು. ಭೂಸಂತ್ರಸ್ತರಿಗೆ ಅದೇ ಜಾಗದಲ್ಲಿ ಪರಿಹಾರವಾಗಿ ಜಾಗ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ, ಮುಂದೆ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸಲು ಕೇಶವ ನಾರಾಯಣ ಸಮಿತಿ ನೇಮಿಸಿದೆ.

ಈ ಸಮಿತಿ ಪರಿಶೀಲನೆ ಮಾಡುತ್ತಿದೆ. ಭೂಸಂತ್ರಸ್ತ ರೈತರಿಗೆ ಪರಿಹಾರವಾಗಿ ಭೂಮಿ ನೀಡಬೇಕು ಎಂಬುದಕ್ಕೆ ನಾನು ಬದ್ಧವಾಗಿದ್ದೇನೆ. ಈ ವಿಚಾರವಾಗಿ ಸಧ್ಯದಲ್ಲೇ ಸಭೆ ಕರೆಯಲಿದ್ದು, ಸಮಿತಿಯವರನ್ನು ಕರೆದು ಆದಷ್ಟು ಬೇಗ ತೀರ್ಮಾನ ಮಾಡುವಂತೆ ಮನವಿ ಮಾಡಲಾಗುವುದು. ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ನೀಡಲಾಗುವುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಂದು ಭರವಸೆ ನೀಡಿದರು.
ಅರ್ಕಾವತಿ ಬಡಾವಣೆ ನಿರ್ಮಾಣಗೊಂಡು ಸುಮಾರು 20 ವರ್ಷ ಕಳೆದರೂ ನಿವೇಶನಕ್ಕೆ ಅರ್ಜಿ ಸಲ್ಲಿಸಿದವರಿಗೆ ಪರಿಪೂರ್ಣವಾಗಿ ನಿವೇಶನ ಸ್ವಾಧೀನ ನೀಡದಿರುವುದು ಹಾಗೂ ಬಡಾವಣೆ ನಿರ್ಮಾಣಕ್ಕೆ ಜಮೀನು ನೀಡಿರುವ ರೈತರಿಗೆ ಇದುವರೆವಿಗೂ ಪರಿಹಾರ ನೀಡಿಲ್ಲ. ಇದರಿಂದ ರೈತರಿಗೆ ತಮ್ಮ ಮಕ್ಕಳ ಮದುವೆ ಮಾಡಲು, ಮಕ್ಕಳ ಶಿಕ್ಷಣ, ಮುಂತಾದ ವೆಚ್ಚಗಳನ್ನು ಭರಿಸಲು ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಶಾಸಕ ಎಸ್. ಮುನಿರಾಜು ಅವರು ಗಮನ ಸೆಳೆದ ವಿಷಯಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಅವರು ರೈತರ ಸಂಕಷ್ಟ ನನಗೆ ಅರ್ಥ ಆಗುತ್ತದೆ. ಖಂಡಿತಾ ಶೀಘ್ರದಲ್ಲಿ ಈ ವಿಷಯವನ್ನು ಪರಿಹರಿಸಲು ಸಭೆಯನ್ನು ಕರೆಯಲಾಗುವುದು. ಆ ಸಭೆಗೆ ತಮ್ಮನ್ನು ಆಹ್ವಾನಿಸುವುದಾಗಿ ಭರವಸೆ ನೀಡಿದರು.
ಕೇವಲ ಈ ಪ್ರಕರಣ ಮಾತ್ರವಲ್ಲ, ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲೂ ನ್ಯಾಯಾಲಯ ಹೊಸ ಅರ್ಜಿ ತೆಗೆದುಕೊಳ್ಳಲು ಅವಕಾಶ ನೀಡಿಲ್ಲ. ಹೀಗಾಗಿ ಇಲ್ಲಿ ಮೊದಲು ಭೂಸಂತ್ರಸ್ತರಿಗೆ ಭೂಮಿ ನೀಡಲಾಗುತ್ತಿದ್ದು, ಅರ್ಕಾವತಿ ಬಡಾವಣೆ ಭೂಸಂತ್ರಸ್ತರ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕರಾದ ಸುಬ್ಬಾರೆಡ್ಡಿ ಅವರು ರಾಜ್ಯದ ಟೋಲ್ ಗಳಲ್ಲಿ ಜನರಿಗೆ ಕಿರಿಕಿರಿ ಮಾಡುತ್ತಿರುವ ಬಗ್ಗೆ ಪ್ರಶ್ನೆ ಕೇಳಿದರು, "ಮೈಸೂರು ಬೆಂಗಳೂರು ರಸ್ತೆಯ ಟೋಲ್ ಬಳಿ ಈ ರೀತಿ ಕಿರಿಕಿರಿ ಮಾಡಿದವರಿಗೆ ದಂಡ ವಿಧಿಸಲಾಗಿದೆ. ಹುನಗುಂದದಲ್ಲೂ ನೋಟೀಸ್ ನೀಡಿ 10 ಲಕ್ಷ ದಂಡ ವಿಧಿಸಲಾಗಿದೆ. ಇದಕ್ಕೆ ನಾವು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇನ್ನು ಸ್ಪೀಕರ್ ಕಡೆಯಿಂದ ಶಾಸಕರು, ಎಂಎಲ್ ಸಿಗಳು ಹಾಗೂ ಸಂಸದರಿಗೆ ಪಾಸ್ ಹಾಗೂ ಫಾಸ್ಟ್ಯಾಗ್ ಅನ್ನು ಒದಗಿಸುವ ವ್ಯವಸ್ಥೆ ಆಗಬೇಕು. ಸರ್ಕಾರದಿಂದ ಏನು ಸಹಕಾರ ನೀಡಬೇಕೋ ನಾವು ನೀಡುತ್ತೇವೆ. ನಾವು ಶಾಸಕರನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದರು.












Click it and Unblock the Notifications