Cyclone Biparjoy: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ, ಇಲ್ಲಿದೆ ವಿವರ
ಕರ್ನಾಟಕ, ಜೂನ್, 10: ಕೇರಳ ರಾಜ್ಯಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದೆ. ಹಾಗೆಯೇ ಕರ್ನಾಟಕಕ್ಕೆ ಇನ್ನೂ ಕೆಲವೇ ಕ್ಷಣಗಳಲ್ಲಿ ಮುಂಗಾರು ಎಂಟ್ರಿ ಕೊಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮತ್ತೊಂದೆಡೆ ಬಿಪರ್‌ಜಾಯ್ ಚಂಡಮಾರುತ ಹಿನ್ನೆಲೆ ರಾಜ್ಯದ ಹಲವೆಡೆ ಇಂದು (ಜೂನ್ 10) ಬಿರುಗಾಳಿ ಸಮೇತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹಾಗಾದರೆ ಹಮಾಮಾನ ಇಲಾಖೆಯ ಪ್ರಕಾರ ಯಾವ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶುಕ್ರವಾರ (ಜೂನ್ 09) ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಬಳಿಕ ಜಿನುಗು ಮಳೆ ಪ್ರಾರಂಭ ಆಗಿದ್ದು, ಇದರಿಂದ ರಸ್ತೆಗಳ ಮೇಲೆ ಸ್ವಲ್ಪ ಮಟ್ಟಿಗೆ ನೀರು ಹರಿದಿತ್ತು. ಹಾಗೆಯೆ ನಗರದಲ್ಲಿ ಇಂದು ಬೆಳಗ್ಗೆಯಿಂದಲೂ ಬಿಸಿಲಿನ ವಾತಾವರಣ ಮುಂದುವರೆದಿದೆ. ಜೊತೆಗೆ ಗಾಳಿಯ ಪ್ರಮಾಣವು ಕೂಡ ಹೆಚ್ಚಿದ್ದು, ಸಂಜೆ ವೇಳೆಗೆ ಮಳೆರಾಯ ಅಬ್ಬರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗುಡುಗು, ಮಿಂಚು ಸಹಿತ ಮಳೆ
ಸಂಜೆ ಬಳಿಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ನಗರದ ಕೆಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುವ ಸಂಭವ ಇದೆ. ಇನ್ನು ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲೂ ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆ. ಸಮುದ್ರದಲ್ಲಿ ಗಾಳಿಯ ವೇಗವು ಗಂಟೆಗೆ 30ರಿಂದ 40 ಕಿಲೋ ಮೀಟರ್ ತಲುಪಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಸೂಚಿಸಲಾಗಿದೆ.
ಇನ್ನು ರಾಜ್ಯ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ. ಮತ್ತೊಂದೆಡೆ ರಾಯಚೂರು ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ ಎನ್ನುವ ಮಾಹಿತಿಯನ್ನು ನೀಡಿದೆ.
ಮತ್ತೊಂದೆಡೆ ತೀವ್ರ ಸ್ವರೂಪ ಪಡೆದಿರುವ ಬಿಪರ್‌ಜಾಯ್ ಚಂಡಮಾರುತವು ಅರಬ್ಬೀ ಸಮುದ್ರ ತೀರದಲ್ಲಿ ಸಂಕಷ್ಟ ತಂದೊಡ್ಡುವ ಎಲ್ಲಾ ಮುನ್ಸೂಚನೆಗಳು ಎದ್ದುಕಾಣುತ್ತಿವೆ. ಇದರ ಪ್ರಭಾವ ಕರ್ನಾಟಕದ ಕರಾವಳಿಯ ಮೇಲೂ ಬೀಳುವ ಸಾಧ್ಯತೆ ಹೆಚ್ಚಿದೆ. ಇನ್ನು ಮುಂದಿನ 3 ದಿನಗಳ ಕಾಲ ಬಿಪರ್‌ಜಾಯ್ ಮಾರುತದ ಪ್ರಭಾವ ಇರಲಿದ್ದು, ರಾಜ್ಯದ ಹಲವೆಡೆ 24 ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈ ಚಂಡಮಾರುತ ಗೋವಾದಿಂದ ಪಶ್ಚಿಮಕ್ಕೆ 690 ಕಿಲೋ ಮೀಟರ್ ದೂರದಲ್ಲಿ, ಮುಂಬೈನ ಪಶ್ಚಿಮ ಹಾಗೂ ನೈರುತ್ಯ ಭಾಗದ 640 ಕಿಲೋ ಮೀಟರ್ ಹಾಗೂ ಪೋರಬಂದರ್‌ನ ದಕ್ಷಿಣ ಹಾಗೂ ನೈರುತ್ಯ ಭಾಗದ 640 ಕಿಲೋ ಮೀಟರ್ ದೂರದಲ್ಲಿ ಇದೆ. ಇದು ಗಂಟೆಗೆ 145 ಕಿಲೋ ಮಿಟರ್ ವೇಗದಲ್ಲಿ ಸಂಚರಿಸಲಿದ್ದು, ಈ ಹಿನ್ನೆಲೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿಯುದ್ದಕ್ಕೂ ಬಿರುಗಾಳಿ ಸಹಿತ ಮಳೆ ಬೀಳಲಿದೆ ಎನ್ನುವ ಮಾಹಿತಿಯನ್ನು ರವಾನಿಸಿದೆ.
ಈಗಾಗಲೇ ಚಂಡಮಾರುತದ ಪ್ರಭಾವ ಹಿನ್ನೆಲೆ ದೇಶದ ಹಲವು ಕಡೆಗಳಲ್ಲಿ ಬೀಚ್‌ಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ಹಾಗೆಯೆ ಕರ್ನಾಟಕದ ಉಳ್ಳಾಲ ಸೇರಿದಂತೆ ಹಲವು ಕಡೆಗಳಲ್ಲಿಯೂ ಪ್ರವಾಸಿಗರು, ಸ್ಥಳೀಯರು, ಮೀನುಗಾರರು ಮುನ್ನೆಚ್ಛರಿಕೆ ವಹಿಸುವಂತೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ಹಾಗೆಯೆ ಮುಂಜಾಗ್ರತಾ ಕ್ರಮಾವಾಗಿ ಕೇರಳದ ಸಮೀಪವಿರುವ ಕರಾವಳಿ ಭಾಗದ ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಒಟ್ಟಿನಲ್ಲಿ ಹೇಳುವುದಾದರೆ ಮುಂಗಾರು ಪ್ರವೇಶ ವಿಳಂಬ ಹಿನ್ನೆಲೆ ರಾಜ್ಯದ ಹಲವೆಡೆ ರೈತಾಪಿ ವರ್ಗದವರು ಕಂಗಾಲಾಗಿ ಹೋಗಿದ್ದಾರೆ. ಇನ್ನು ಕೆಲವೆಡೆ ಜನರು ಬಿಸಿಲಿನ ಧಗೆಯಿಂದ ಬೇಸತ್ತು ಹೋಗಿದ್ದು, ಮಳೆ ಯಾವಾಗ ಬರುತ್ತದೆಯೋ ಎಂದು ಮೋಡದ ಕಡೆ ಮುಖ ಮಾಡಿ ಕಾತರದಿಂದ ಕಾಯುತ್ತಾ ಕುಳಿತಿದ್ದಾರೆ. ಅದರಲ್ಲೂ ರಾಯಚೂರು, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು, ಈ ಹಿನ್ನೆಲೆ ಇಲ್ಲಿನ ಜನರು ಬಿಸಿಲಿನ ಬೇಗೆಯಿಂದ ಬೆಂದು ಹೋಗಿದ್ದಾರೆ.












Click it and Unblock the Notifications