ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ?
ಬೆಂಗಳೂರು, ನವೆಂಬರ್ 11 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವ ಕುರಿತು ಕರ್ನಾಟಕ ಹೈಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅಭಿಪ್ರಾಯ ಕೇಳಿದೆ. ಸದ್ಯ, ಸರ್ಕಾರ ರಚನೆ ಮಾಡಿರುವ ಎಸ್‌ಐಟಿ ಹಗರಣದ ತನಿಖೆ ನಡೆಸುತ್ತಿದೆ.
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಭಾಗಿಯಾಗಿರುವುದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. [ಲೋಕಾಯುಕ್ತ ಭ್ರಷ್ಟಾಚಾರ : ಐವರ ವಿರುದ್ಧ FIR]

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಬಿಳ್ಳಪ್ಪ ಮತ್ತು ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ವಿಭಾಗೀಯ ಪೀಠ, ಈ ಕುರಿತು ಅಭಿಪ್ರಾಯ ತಿಳಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ, ಲೋಕಾಯುಕ್ತ ಹಾಗೂ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ]
ಮನವಿ ಏನು? : ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಹಲವು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೆಲವು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತದಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಅಶ್ವಿನ್ ರಾವ್ ಅವರಿಗೆ ಹಣ ನೀಡುವ ಮೂಲಕ ಮುಚ್ಚಿ ಹಾಕಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಎಸ್.ಆರ್.ಹಿರೇಮಠ ಅವರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. [ಕರ್ನಾಟಕ ಲೋಕಾಯುಕ್ತರಿಗೆ ಮತ್ತೆ 45 ದಿನ ರಜೆ!]
11 ಆರೋಪಿಗಳ ಬಂಧನ : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 11 ಆರೋಪಿಗಳನ್ನು ಎಸ್‌ಐಟಿ ಬಂಧಿಸಿದೆ. ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್, ಎಚ್.ಎಸ್.ರಾಜಶೇಖರ್, ಸೈಯದ್ ರಿಯಾಜ್, ಅಶೋಕ್ ಕುಮಾರ್, ಶ್ರೀನಿವಾಸ ಗೌಡ, ಶಂಕರೇಗೌಡ, ವಿ. ಭಾಸ್ಕರ್, ಮೊಹಮ್ಮದ್ ಸಾದಿಕ್, ಎನ್. ನರಸಿಂಹಮೂರ್ತಿ, ನರಸಿಂಹರಾವ್, ಹೊಟ್ಟೆ ಕೃಷ್ಣ ಬಂಧಿತ ಆರೋಪಿಗಳು.
ಈ ಎಲ್ಲಾ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಆರೋಪಿಗಳಾದ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್ ಕುಮಾರ್ ಅವರು ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಪುತ್ರ ಅಶ್ವಿನ್ ರಾವ್ ಬಂಧನವಾದ ಬಳಿಕ ಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಸರಣಿ ರಜೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸದ್ಯ, ಅಕ್ಟೋಬರ್ 22ರಿಂದ 45 ದಿನಗಳ ತನಕ ಅವರು ರಜೆ ವಿಸ್ತರಣೆ ಮಾಡಿದ್ದಾರೆ.












Click it and Unblock the Notifications