Muda Case: ನನ್ನ ವಿರುದ್ಧವೂ ಷಡ್ಯಂತ್ರ, ಹೆದರುವ ಪ್ರಶ್ನೆಯೇ ಇಲ್ಲ: ಡಿಕೆಶಿ
ನನ್ನ ವಿರುದ್ಧವೂ ಷಡ್ಯಂತರ ನಡೆಯುತ್ತಿದೆ. ರಾಜ್ಯಪಾಲರಿಗೆ ನನ್ನ ವಿರುದ್ಧವೂ ದೂರು ನೀಡಲು ಸಿದ್ಧತೆ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಆದರೆ, ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಈಗಾಗಲೇ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಇದೀಗ ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಿರುದ್ಧವೂ ರಾಜ್ಯಪಾಲರಿಗೆ ದೂರು ನೀಡಲು ತೆರೆಮರೆಯ ಸಿದ್ಧತೆ ನಡೆದಿದೆ. ಹೀಗೋಂದು ಷಡ್ಯಂತ್ರ ನಡೆಯುತ್ತಿರುವುದು ನನ್ನ ಗಮನಕ್ಕೂ ಬಂದಿದೆ ಎಂದು ಖುದ್ದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಅಲ್ಲದೇ ಈ ರೀತಿಯ ಬೆದರಿಕೆಗಳಿಗೆ ನಾನು ಎಂದೂ ಹೆದರಿದ್ದಿಲ್ಲ. ಮುಂದೆ ಹೆದರುವ ಪ್ರಶ್ನೆಯೂ ಇಲ್ಲ ಎಂದು ಅವರು ತಮ್ಮ ಹಳೇಯ ಸ್ಟೈಲ್‌ನಲ್ಲಿ ಮತ್ತೊಮ್ಮೆ ಹೇಳಿದ್ದಾರೆ.

ರಾಜಭವನದ ದುರುಪಯೋಗ
ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರವು ರಾಜಭವನ ಹಾಗೂ ರಾಜ್ಯಪಾಲರನ್ನು ದುರುಪಯೋಗ ಪಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ರಾಜಭವನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಬಿಜೆಪಿ ಅವರ ಈ ವರ್ತನೆಯಿಂದ ನಮಗೆ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಪ್ರತಿಭಟನೆಯನ್ನು ಮಾಡದೆ ಈಗ ಬೇರೆ ಮಾರ್ಗ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದು, ಈ ವಿಚಾರದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು, ಸಚಿವರು ಒಂದಾಗಿದ್ದಾರೆ.
ರಾಜ್ಯದಾದ್ಯಂತ ವಿಭಾಗವಾರು ಪ್ರತಿಭಟನೆಗೆ ಸಿದ್ಧತೆ
ರಾಜ್ಯದಲ್ಲಿ ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿ, ರಾಜ್ಯದಾದ್ಯಂತ ಪ್ರತಿಭಟನೆ ಹಾಗೂ ರ್ಯಾಲಿ ನಡೆಸಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾವಾರು ಸಚಿವರಿಗೂ ನಿರ್ದೇಶನ ನೀಡಲಾಗಿದೆ. ಎಲ್ಲಾ ಸಚಿವರು ಸಹ ಈ ವಿಷಯದಲ್ಲಿ ಒಗ್ಗಟ್ಟಾಗಿದ್ದು, ಪ್ರತಿಭಟನೆ ಮತ್ತು ರ್ಯಾಲಿ ನಡೆಸುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಪರವಾಗಿ ರ್ಯಾಲಿ ಹಾಗೂ ಸಭೆಗಳನ್ನು ನಡೆಸುವಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾಂಗ್ರೆಸ್ ಮುಖಂಡರಿಂದ ಒತ್ತಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವ್ಯಕ್ತವಾಗುತ್ತಿವೆ.

ರಾಜ್ಯದ ಯಾವೆಲ್ಲ ಭಾಗದಲ್ಲಿ ನಡೆಯಲಿದೆ ರ್ಯಾಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಮೊದಲು ತುಮಕೂರಿನಲ್ಲಿ ರ್ಯಾಲಿ ಪ್ರಾರಂಭವಾಗಲಿದೆ. ಇದಾದ ನಂತರ ಮುಂದುವರಿದು, ಬೆಳಗಾವಿ, ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಬೇಕು. ರ್ಯಾಲಿ, ಪ್ರತಿಭಟನೆಗಳನ್ನು ಯಶಸ್ವಿ ಮಾಡಬೇಕು ಎಂದು ಜಿಲ್ಲಾ ಹಾಗೂ ಕಾಂಗ್ರೆಸ್‌ನ ಪ್ರಮುಖ ಮುಖಂಡರು ಕರೆ ನೀಡುತ್ತಿದ್ದಾರೆ. ಈ ನಡುವೆ ಪ್ರತಿಭಟನೆಗೆ ಕೆಪಿಸಿಸಿಯಿಂದ ಅಧಿಕೃತ ಒಪ್ಪಿಗೆ ಬರುವುದು ಬಾಕಿ ಉಳಿದಿದ್ದು, ಅನುಮತಿ ಬಂದ ಕೂಡಲೇ ಪ್ರತಿಭಟನೆಗೆ ಧುಮುಕಲು ಕಾಂಗ್ರೆಸ್ ನಾಯಕರು ಸಿದ್ಧರಾಗಿದ್ದಾರೆ.
ಅಹಿಂದ ನಾಯಕರಿಂದ ಬೆಂಬಲ
ಸಿ.ಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಕೇಳಿ ಬಂದ ಬೆನ್ನಲ್ಲೇ. ಸಿ.ಎಂ ಸಿದ್ದರಾಮಯ್ಯ ಅವರ ಪರವಾಗಿ ಅಹಿಂದ ಹಾಗೂ ಶೋಷಿತ ಸಮುದಾಯವು ಸಿ.ಎಂ ಬೆಂಬಲಕ್ಕೆ ನಿಂತಿದೆ. ರಾಜ್ಯದ ಅಹಿಂದ ನಾಯಕರೊಬ್ಬರನ್ನು ಬಿಜೆಪಿ ತುಳಿಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಈ ಮೂಲಕ ಬಿಜೆಪಿಯ ಅಸ್ತ್ರಕ್ಕೆ ಪ್ರತ್ಯಸ್ತ್ರ ಬಿಟ್ಟಿದ್ದಾರೆ.












Click it and Unblock the Notifications