ಮಗನ ರಾಜಕೀಯ ಭವಿಷ್ಯದ ಲೆಕ್ಕಾಚಾರ; ಬಿಜೆಪಿ ನಿರ್ಲಕ್ಷಿಸಿದರೆ ಕೈ ಹಿಡಿಯಲು ಸೋಮಣ್ಣ ನಿರ್ಧಾರ?
ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಲು ವಿ ಸೋಮಣ್ಣ ಮುಂದಾಗಿದ್ದಾರೆ.
ಬೆಂಗಳೂರು,ಮಾರ್ಚ್ 14: ರಾಜ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಕಲಿಗಳಿಗೆ ಸಚಿವ ವಿ ಸೋಮಣ್ಣ ನಡೆಯೇ ದೊಡ್ಡ ಟೆನ್ಶನ್ ಆಗಿದೆ.
ಹೌದು, ವಸತಿ ಸಚಿವ ವಿ ಸೋಮಣ್ಣ ಬಿಜೆಪಿಯ ಪ್ರಮುಖ ಕಾರ್ಯಕ್ರಮಗಳಿಂದ ದೂರ ಉಳಿಯುತ್ತಿದ್ದು, ಚುನಾವಣೆ ಹೊತ್ತಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನ ಸೇರಲಿದ್ದಾರೆ ಎನ್ನುವ ಚರ್ಚೆಗಳು ಜೋರಾಗಿದೆ. ಒಂದು ಕಡೆ ಹಿರಿಯ ಲಿಂಗಾಯತ ನಾಯಕರಾಗಿರುವ ವಿ.ಸೋಮಣ್ಣ ಮೌನವಾಗಿ ಬಿಜೆಪಿಯಿಂದ ಅಂತರವನ್ನ ಕಾಯ್ದುಕೊಂಡಿರುವುದನ್ನ ನೋಡಿರೆ ಏಪ್ರಿಲ್ ಮೊದಲ ವಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.

ಇನ್ನೂ ಸಚಿವರಾಗಿರುವ ವಿ.ಸೋಮಣ್ಣ ಅವರು ಬೆಂಗಳೂರು ನಗರದ ನಾಲ್ಕೈದ ಕ್ಷೇತ್ರಗಳಲ್ಲಿ ತಮ್ಮದೇ ಆದ ವರ್ಚಸ್ಸನ್ನ ಹೊಂದಿರುವ ನಾಯಕರಾಗಿದ್ದು, ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ವಿ ಸೋಮಣ್ಣ ಇದ್ದಾರೆ ಎಂದು ಹೇಳಲಾಗಿದೆ.
ಸಚಿವ ವಿ.ಸೋಮಣ್ಣ ತಮ್ಮ ಪುತ್ರನ ರಾಜಕೀಯ ಭವಿಷ್ಯದ ಕುರಿತು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿಯಲ್ಲಿ ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ನೀಡುವುದು ಅನುಮಾನವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೋವಿಂದ ರಾಜ ನಗರದಲ್ಲಿ ಟಿಕೆಟ್ ನೀಡಲಿದ್ದು, ಇನ್ನು ಅರುಣ್ ಸೋಮಣ್ಣ ಅವರಿಗೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರಕ್ಕೆ ನೀಡಲಿದೆ ಎಂದು ಹೇಳಲಾಗಿದೆ.

ಈಗಾಗಲೇ ಅರುಣ್ ಸೋಮಣ್ಣ ಗೆ ಚಾಮರಾಜನಗರ ಜಿಲ್ಲೆಯ ಹನೂರು,ಹಾಸನ ಜಿಲ್ಲೆಯ ಅರಸೀಕೆರೆ ಅಥವಾ ಗುಬ್ಬಿ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬಿಜೆಪಿಯಲ್ಲಿ ಕೇಳಲಾಗಿದ್ದು, ಈ ಟಿಕೆಟ್ ಪಡೆಯುವಲ್ಲಿ ಸಚಿವ ವಿ.ಸೋಮಣ್ಣ ವಿಫಲರಾಗಿದ್ದಾರೆ ಎನ್ನಲಾಗಿದ್ದು, ಬಿಜೆಪಿಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇರುವ ಕಾರಣ ಕಾಂಗ್ರೆಸ್ ನಲ್ಲಿ ಸೋಮಣ್ಣ ಮತ್ತು ಪುತ್ರ ಅರುಣ್ ಸೋಮಣ್ಣ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ.
ಈ ಕುರಿತು ಸಚಿವ ವಿ ಸೋಮಣ್ಣ ಮಾತನಾಡಿ, ಬೇರೆ ರಾಜಕಾರಣಿ ಮಕ್ಕಳು ರಾಜಕಾರಣದಲ್ಲಿ ಇರಬಹುದು. ಎಲ್ಲರಿಗೂ ಮಕ್ಕಳು, ಪ್ರೀತಿ ಅನ್ನೋದು ಇರುತ್ತೆ, ನನಗೆ ಇರುವ ನಿಯಮ ಎಲ್ಲರಿಗೂ ಅನ್ವಹಿಸಬೇಕಲ್ವಾ? ನಾನು ಯಾವತ್ತೂ ಮಕ್ಕಳನ್ನು ರಾಜಕಾರಣಕ್ಕೆ ತಂದವನಲ್ಲ. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲ ಅನ್ನೋದಾದ್ರೆ ನಮಗೂ ಬೇಡ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ದ ವಿ ಸೋಮಣ್ಣ ಅಸಮಾಧಾನ ಹೊರ ಹಾಕಿದ್ದಾರೆ.

ಅವಕಾಶ, ಹಣೆಬರಹ ಇದ್ದರೆ ಮಗನಿಗೆ ಟಿಕೆಟ್ ಸಿಗುತ್ತದೆ. ನನಗೆ ಅಸಮಾಧಾನ ಇದೆ ಅಂತ ಎಲ್ಲಾದ್ರೂ ಹೇಳಿದ್ದೀನಾ? ರಾಜಕಾರಣಿಗಳಿಗೆ ಬದ್ದತೆ ಇರಬೇಕು, ಕಾಂಗ್ರೆಸ್ ಗೆ ಬರ್ತಾರೆ ಅಂತ ಅವರ ಭಾವನೆಗಳಿವೆ. ಅದಕ್ಕೆ ನಾನು ಬೇಡ ಅನ್ನಲ್ಲಾ ಎಂದು ಹೇಳಿದರು.












Click it and Unblock the Notifications