ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ
ಬೆಂಗಳೂರು, ನವೆಂಬರ್ 28 : ಕರ್ನಾಟಕದ ಕರಾವಳಿ ತೀರ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ರಾತ್ರಿಯ ವೇಳೆ ಗಸ್ತು ಹೆಚ್ಚಿಸಲು ಗೃಹ ಇಲಾಖೆ ಮುಂದಾಗಿದೆ. ಕರಾವಳಿ ವ್ಯಾಪ್ತಿಯಲ್ಲಿ 2014 ರಿಂದ 2015ರ ಇಲ್ಲಿಯ ತನಕ 217 ಕೊಲೆಗಳು ನಡೆದಿವೆ.
ರಾಜ್ಯದ ಕರಾವಳಿ ಪ್ರದೇಶಗಳು ಹೆಚ್ಚು ಸುದ್ದಿಯಾಗುವುದು ಕೊಲೆಗಳ ವಿಚಾರದಲ್ಲಿಯೇ, ಈಗ ಲಭ್ಯವಾಗಿರುವ ಅಂಕಿ-ಸಂಖ್ಯೆಗಳು ಇದನ್ನೇ ಬಿಡಿಸಿ ಹೇಳುತ್ತಿವೆ. 2014ರಲ್ಲಿ 100 ಕೊಲೆಗಳು ನಡೆದಿದ್ದರೆ, 2015ರಲ್ಲಿ 117 ಕೊಲೆಗಳು ಇದುವರೆಗೂ ನಡೆದಿವೆ. [ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ಸಿದ್ಧ]

ಕರಾವಳಿ ತೀರಗಳು ಭೂಗತ ಲೋಕದ ಚಟುವಟಿಕೆಗಳಿಗೆ ಪ್ರಸಿದ್ಧಿ ಪಡೆದಿವೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ನಡೆದ ಕೊಲೆಗಳು ಕೇವಲ 4. 2014ರಿಂದ 2015ರ ತನಕ ನಡೆದ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೂ 341 ಜನರನ್ನು ಬಂಧಿಸಲಾಗಿದೆ. [ಸ್ಪೈಸ್ ಜೆಟ್‌ನಿಂದ ಬೆಳಗಾವಿ-ಮಂಗಳೂರು ವಿಮಾನ ಸೇವೆ]
2014ರಲ್ಲಿ ನಡೆದ 100 ಕೊಲೆಗಳಿಗೆ ಸಂಬಂಧಿಸಿದಂತೆ 196 ಮತ್ತು 2015ರಲ್ಲಿ ನಡೆದ 117 ಕೊಲೆಗಳಿಗೆ ಸಂಬಂಧಿಸಿದಂತೆ 145 ಜನರನ್ನು ಬಂಧಿಸಲಾಗಿದೆ. ಸದ್ಯ, ಗೃಹ ಇಲಾಖೆ ಕರಾವಳಿ ಭಾಗದಲ್ಲಿ ರಾತ್ರಿ ಸಮಯದಲ್ಲಿನ ಗಸ್ತು ಹೆಚ್ಚಿಸಲು ಮುಂದಾಗಿದೆ.
ಗೃಹ ಸಚಿವ ಜಿ.ಪರಮೇಶ್ವರ ಅವರು ಈ ಕುರಿತು ಹೇಳಿಕೆ ನೀಡಿದ್ದು, 'ಕರಾವಳಿ ಭಾಗದ ಸೂಕ್ಷ ಪ್ರದೇಶಗಳಲ್ಲಿ ರಾತ್ರಿ ವೇಳೆಯ ಗಸ್ತನ್ನು ಹೆಚ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ' ಎಂದು ಹೇಳಿದ್ದಾರೆ.












Click it and Unblock the Notifications