ಸಿಎಂ ಕುರ್ಚಿ ಕದನ: ಶಕ್ತಿಪ್ರದರ್ಶನಕ್ಕೆ ಮುಂದಾದ ಸಿದ್ದರಾಮಯ್ಯ: ಎಲ್ಲಿ? ಯಾವಾಗ?
ಬೆಂಗಳೂರು, ಜುಲೈ 17: ರಾಜ್ಯ ರಾಜಕೀಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆಯಾಗುತ್ತಿದೆ. ಎರಡೂವರೆ ವರ್ಷ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ, ಅಧಿಕಾರ ಹಂಚಿಕೆಯಾಗುತ್ತದೆ ಎಂಬ ಮಾತುಗಳು ಕೈ ಪಾಳಯದಲ್ಲಿ ಕೇಳಿ ಬರುತ್ತಿದ್ದು, ಕಳೆದ ವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ನಾನೇ ಸಿಎಂ, ಡಿ ಕೆ ಶಿವಕುಮಾರ್ ಅವರಿಗೆ ಹೆಚ್ಚಿನ ಶಾಸಕರ ಬೆಂಬಲ ಇಲ್ಲ ಎಂದು ಘೋಷಿಸಿದ್ದರು. ಇನ್ನು, ಸಿದ್ದರಾಮಯ್ಯ ಅವರ ಈ ಹೇಳಿಕೆ ಕೈ ಪಾಳಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದೀಗ ಸಿದ್ದರಾಮಯ್ಯ ಬಣದವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಕೆಯಿಂದ ಕುರ್ಚಿ ಭದ್ರ ಎಲ್ಲಾಗಿದೆ. ಇದೀಗ ಮೈಸೂರಿನಲ್ಲಿ ಸಾಧನ ಸಮಾವೇಶ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದು, ಜುಲೈ 19 ರಂದು ಬೃಹತ್ ಸಮಾವೇಶಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನಗಳ ಪ್ರವಾಸವನ್ನು ಹಮ್ಮಿಕೊಂಡಿದ್ದು, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಹಳೇ ಮೈಸೂರು ಭಾಗದಲ್ಲಿ ತಮ್ಮ ಶಕ್ತಿ ಎಷ್ಟಿದೆ ಎಂಬುದನ್ನು ಹೈಕಮಾಂಡ್‌ಗೆ ತೋರಿಸಲು ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಮೈಸೂರಿನಲ್ಲಿ ನಡೆಯುವ ಶಕ್ತಿ ಪ್ರದರ್ಶನದ ಕುರಿತು ಸಚಿವ ಎಂ ಬಿ ಪಾಟೀಲ್ ಅವರು ಮಾತನಾಡಿ, ರಾಜ್ಯ ಸರಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಶನಿವಾರ ಸಮಾವೇಶ ನಡೆಸಲಾಗುತ್ತಿದೆ. ಇದನ್ನು ಟೀಕಿಸುವುದರ ಬದಲು ಮುಖ್ಯಮಂತ್ರಿ ಹೇಳಿದ ಹಾಗೆ ಚರ್ಚೆ ಒಂದು ವೇದಿಕೆಗೆ ಬರಲಿ. ಅವರು ಏನು ಮಾಡಿದ್ದರು? ನಾವು ಏನು ಮಾಡಿದ್ದೇವೆ ಎನ್ನುವುದನ್ನು ಚರ್ಚಿಸಲಾಗುತ್ತದೆ ಎಂದು ಹೇಳಿದರು. ಜನರಿಗೆ ಹೇಳಲು ನಮ್ಮ ಸಾಕಷ್ಟು ಸಾಧನೆಗಳಿವೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಒಬಿಸಿ ವರ್ಗಗಳ ಜನಪ್ರಿಯ ಮತ್ತು ಅಗ್ರಗಣ್ಯ ನಾಯಕರಾಗಿದ್ದಾರೆ. ಹೀಗಾಗಿ ಪಕ್ಷವು ಒಬಿಸಿ ವರ್ಗಗಳ ಶ್ರೇಯೋಭಿವೃದ್ಧಿಗೆ ಪಕ್ಷವು ಇಡಬೇಕಾದ ಹೆಜ್ಜೆಗಳ ಕುರಿತು ಚಿಂತಿಸಲು ಅವರ ನೇತೃತ್ವದಲ್ಲಿ ಸಭೆ ನಡೆಸಿದೆ ಎಂದು ಪಾಟೀಲ್ ಅವರು ಹೇಳಿದರು. ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಬಿಜೆಪಿ ಟೀಕಿಸುತ್ತಿತ್ತು. ಆದರೆ ತಾನು ಎಲ್ಲಾ ರಾಜ್ಯಗಳಲ್ಲೂ ಇದೇ ಮಾದರಿಯನ್ನು ನಕಲು ಮಾಡುತ್ತಿದೆ. ಈಗ ಚುನಾವಣೆಯ ಹತ್ತಿರವಿರುವ ಬಿಹಾರದಲ್ಲಿ ಬಿಜೆಪಿ-ಜೆಡಿಯು ಸಮ್ಮಿಶ್ರ ಸರಕಾರವು ತಿಂಗಳಿಗೆ 125 ಯೂನಿಟ್ ಉಚಿತ ವಿದ್ಯುತ್ ಘೋಷಿಸಿದೆ. ಇದು ಬಿಜೆಪಿಯ ದ್ವಂದ್ವವನ್ನು ತೋರಿಸುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ನಾವು ರಾಜ್ಯದಲ್ಲಿ ಮಹಿಳೆಯರ ನೆರವಿಗೆ ಗೃಹಲಕ್ಷ್ಮಿ ಯೋಜನೆಯನ್ನು ತಂದೆವು. ಬಿಜೆಪಿ ಇದನ್ನು ಟೀಕಿಸಿತು. ಆದರೆ ಮಹಾರಾಷ್ಟ್ರದಲ್ಲಿ ಅದೇ ಬಿಜೆಪಿ ಸರಕಾರವು ಇದನ್ನು ಲಾಡ್ಲಿ ಬೆಹೆನ್ ಹೆಸರಿನಲ್ಲಿ ನಕಲು ಮಾಡಿತು. ದೆಹಲಿಯಲ್ಲೂ ಆ ಪಕ್ಷ ಇದನ್ನೇ ಮಾಡಿದೆ. ಈಗ ಬಿಹಾರವೂ ನಮ್ಮ ಮಾದರಿಯನ್ನೇ ಅನುಕರಿಸಿದೆ ಎಂದು ಅವರು ಟೀಕಿಸಿದ್ದಾರೆ. ಬಿಜೆಪಿಯವರು ಗ್ಯಾರಂಟಿ ಕೊಟ್ಟರೆ ಮಾತ್ರ ಸರಿ, ನಾವು ಕೊಟ್ಟರೆ ಖಜಾನೆ ಖಾಲಿ ಆಗುತ್ತದೆ ಎನ್ನುವ ಧೋರಣೆ ಸರಿಯಲ್ಲ. ನಾವು ನೀಡುತ್ತಿರುವ ಗ್ಯಾರಂಟಿಗಳು ದೇಶಕ್ಕೇ ಮಾದರಿಯಾಗಿವೆ ಎಂದು ಸಚಿವ ಎಂ ಬಿ ಪಾಟೀಲ್ ಅವರು ಹೇಳಿದರು.












Click it and Unblock the Notifications