Karnataka Budget: ರಾಜ್ಯ ಬಜೆಟ್‌ನಲ್ಲಿ ದಲಿತರಿಗೆ ಬಂಪರ್: ಸಿಎಂ ಸಿದ್ದರಾಮಯ್ಯ ಮಾಹಿತಿ
ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ದಲಿತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದಾರೆ. ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ದಲಿತ ಮುಖಂಡರುಗಳೊಂದಿಗಿನ ಬಜೆಟ್ ಪೂರ್ವ ಸಭೆಯಲ್ಲಿ ಸಿದ್ದರಾಮಯ್ಯ ಈ ಬಗ್ಗೆ ಸುಳಿವು ನೀಡಿದ್ದಾರೆ. ಶೋಷಿತರ, ದಲಿತ ಸಮಯದಾಯಗಳ ಬೇಡಿಕೆಗಳನ್ನು ನಾನು ಮುಖ್ಯಮಂತ್ರಿ ಆದ ಬಳಿಕ ನಿರಂತರವಾಗಿ ಈಡೇರಿಸುತ್ತಲೇ ಇದ್ದೇನೆ. ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನ ಅಭಿವೃದ್ಧಿ ಹಣದಲ್ಲಿ ಶೇ 24ರಷ್ಟು ಹಣ ಮೀಸಲಾಗಿಡುವ ಕಾಯ್ದೆ ಜಾರಿ ಮಾಡಿದ್ದು ನಮ್ಮ ಸರ್ಕಾರ ಎಂದು ಹೇಳಿದ್ದಾರೆ.
ಈ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರವಾಗಲಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ. ದಲಿತ ಸಮುದಾಯದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಾವು ಮಾತ್ರ. ಇದನ್ನು ಈಗ 2 ಕೋಟಿಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಬಂದಿದ್ದು, ಈ ಬಗ್ಗೆಯೂ ಪರಿಶೀಲಿಸುತ್ತೇನೆ ಎಂದು ಸಿಹಿಸುದ್ದಿ ನೀಡಿದ್ದಾರೆ.

ಬಡ್ತಿಯಲ್ಲೂ ಮೀಸಲಾತಿ ತಂದಿದ್ದು ನಾವು ಮಾತ್ರ. ಪಿಟಿಸಿಎಲ್ ಕಾಯ್ದೆ ಮಾಡಿದ್ದು ನಾವು. ಹೊಸದಾಗಿ ಕೈಗಾರಿಕೆ ಆರಂಭಿಸುವವರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಿದ್ದೇವೆ. ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆ, ಕಾನೂನು, ನಿಯಮಗಳನ್ನು ಮಾಡಿರುವ ದಾಖಲೆ ನಮ್ಮ ಸರ್ಕಾರದ್ದು ಎಂದು ಸಿದ್ದರಾಮಯ್ಯ ಬೆನ್ನುತಟ್ಟಿಕೊಂಡಿದ್ದಾರೆ.
ವಿಧಾನಮಂಡಲದ ಅಧಿವೇಶನವು ಮಾರ್ಚ್ 3ರಿಂದ ಪ್ರಾರಂಭವಾಗಲಿದ್ದು, ನೂತನ ವರ್ಷದ ಮೊದಲನೇ ಅಧಿವೇಶನವಾದ್ದರಿಂದ ರಾಜ್ಯಪಾಲರು ಮೂರನೇ ತಾರೀಖಿನಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದು, ಮಾರ್ಚ್ 7ರಂದು 2025-2026 ನೇ ಸಾಲಿನ ಬಜೆಟ್ ಮಂಡಿಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ಬಜೆಟ್ ಮೇಲೆ ಚರ್ಚೆ ನಡೆದು ಉತ್ತರವನ್ನು ಮಾರ್ಚ್ ತಿಂಗಳ ಕೊನೆಯಲ್ಲಿ ನೀಡಲಾಗುವುದು. ಅಧಿವೇಶನ ಎಷ್ಟು ದಿನದವರೆಗೆ ನಡೆಸಬೇಕು ಎಂದು ವ್ಯವಹಾರ ಸಲಹಾ ಸಮಿತಿಯಲ್ಲಿ ತೀರ್ಮಾನಿಸಲಾಗುವುದು. ವಿವಿಧ ಇಲಾಖೆಗಳೊಂದಿಗೆ ಆಯವ್ಯಯ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಇಂದು ರೈತ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿದ್ದೇನೆ ಎಂದಿದ್ದಾರೆ.
ರೈತರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸುವಾಗ ಇತಿಮಿತಿಯೊಳಗೆ ಸಲಹೆಗಳನ್ನು ಸೇರ್ಪಡೆ ಮಾಡಲಾಗುವುದು. ಕರ್ನಾಟಕ ಸರ್ಕಾರ ರೈತರ ಹಿತವನ್ನು ಕಾಪಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಯಾವತ್ತೂ ರೈತರ ಪರವಾಗಿದ್ದು, ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಇರಲಿದೆ ಎಂದು ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅವರು ರೈತ ಸಂಘದ ಮುಖಂಡರುಗಳೊಂದಿಗೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ನಡೆಸಿ, ರೈತ ಸಮುದಾಯದ ಕುಂದುಕೊರತೆ, ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಆಲಿಸಿದ್ದಾರೆ. ರೈತರ ಬೇಡಿಕೆಗಳನ್ನು ನಿರಂತರವಾಗಿ, ಹಂತ ಹಂತವಾಗಿ ಈಡೇರಿಸುತ್ತಲೇ ಇದ್ದೇವೆ. ಅತಿ ಹೆಚ್ಚು ಉದ್ಯೋಗ ಅವಲಂಬನೆ ಇರುವುದು ಕೃಷಿಯಲ್ಲೇ, ಆದ್ದರಿಂದ ರೈತರ ಬೇಡಿಕೆಗಳ ಈಡೇರಿಕೆ ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಸಿದ್ದರಾಮಯ್ಯ ರೈತರಿಗೆ ತಿಳಿಸಿದ್ದಾರೆ.












Click it and Unblock the Notifications