ಮುಡಾ ಕೇಸ್ ಸಿಬಿಐಗೆ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣವು ಸಿಎಂ ಸಿದ್ದರಾಮಯ್ಯ ಅವರ ಕುರ್ಚಿಯನ್ನು ಅಲುಗಾಡಿಸುತ್ತಿದೆ. ಈ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ ಅವರು ಮುಡಾ ನಿವೇಶನ ಹಂಚಿಕೆ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ನನಗೆ ಆತಂಕವಿಲ್ಲ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
ಜಾರಿ ನಿರ್ದೇಶನಾಯಲಯದವರು (ಇ.ಡಿ) ನನ್ನ ಪತ್ನಿಗೆ ನೋಟೀಸ್ ಜಾರಿ ಮಾಡಿದ್ದು, ನ್ಯಾಯಾಲಯ ಅದಕ್ಕೆ ತಡೆಯಾಜ್ಞೆ ನೀಡಿದೆ. ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ಸಿಬಿಐಗೆ ಪ್ರಕರಣ ವಹಿಸುವ ಸಂಬಂಧ ನ್ಯಾಯಾಲಯದಲ್ಲಿ ವಾದ ನಡೆಯುತ್ತಿದೆ. ಈ ಹಂತದಲ್ಲಿ ಆತುರ ಮಾಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಇ.ಡಿ ನೋಟೀಸ್ ಮಾತ್ರ ರಾಜಕೀಯ ಪ್ರೇರಿತ ಅಲ್ಲ, ಇಡೀ ಮುಡಾ ಪ್ರಕರಣವೇ ರಾಜಕೀಯ ಪ್ರೇರಿತ ಎಂದಿದ್ದಾರೆ.

ಮೈಸೂರಿನ ಮುಡಾ ಸೈಟು ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಸ್ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಕೆ ಮಾಡಲು ಗಡುವು ಕೂಡ ವಿಸ್ತರಿಸಿದೆ. ಈ ಹಿನ್ನೆಲೆ ಆದೇಶ ಕಾಯ್ದಿರಿಸಿರುವುದರಿಂದ ಸಿದ್ದರಾಮಯ್ಯ ಅವರು ಆತಂಕದಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಈ ಕೇಸ್ ಸಿಬಿಐಗೆ ವಹಿಸಿದರೂ ಯಾವುದೇ ಆತಂಕವಿಲ್ಲ, ಕಾನೂನು ಹೋರಾಟ ಮುಂದುವರಿಸುವುದಾಗಿ ಸವಾಲೊಡ್ಡಿದ್ದಾರೆ.
ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಮುಡಾ ಕೇಸ್ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಲಾಗಿತ್ತು. ಬಳಿಕ ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಕೇಸ್ ಅನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ವಾದ ಪ್ರತಿವಾದವನ್ನು ಆಲಿಸಿರುವ ಹೈಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೆ ಲೋಕಾಯುಕ್ತ ವರದಿ ಸಲ್ಲಿಕೆಗೆ ನೀಡಿರುವ ಅವಧಿಯ ಗಡುವನ್ನು ಸಹ ವಿಸ್ತರಿಸಿದೆ.

ಜಾತಿ ದೌರ್ಜನ್ಯ ಶಿಕ್ಷೆ ಹೆಚ್ಚಳಕ್ಕೆ ಸೂಚನೆ: ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯಮಟ್ಟದ ಜಾಗೃತ ಮತ್ತು ಉಸ್ತುವಾರಿ ಮೇಲ್ವಿಚಾರಣಾ ಸಮಿತಿ ಸಭೆಯನ್ನು ಸಿಎಂ ಸಿದ್ದರಾಮಯ್ಯ ಇಂದು ನಡೆಸಿದ್ದಾರೆ. ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ 2020ರಲ್ಲಿ ಶೇ 10ರಷ್ಟಿತ್ತು, ಪ್ರಸ್ತುತ ಅದು ಶೇ 7ಕ್ಕೆ ಇಳಿದಿದೆ. ಶಿಕ್ಷೆಯ ಪ್ರಮಾಣವನ್ನು ಶೇ 10ಕ್ಕೆ ಹೆಚ್ಚಿಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಸರ್ಕಾರಿ ಪ್ರಾಸಿಕ್ಯೂಟರ್‌ಗಳು ಹಾಗೂ ಪೊಲೀಸ್ ಇಲಾಖೆಯವರು ಪರಿಶೀಲನಾ ಸಭೆ ನಡೆಸಬೇಕು. ಜಾತಿ ದೌರ್ಜನ್ಯ ಪ್ರಕರಣಗಳ ಶಿಕ್ಷೆಯ ಪ್ರಮಾಣ ಹೆಚ್ಚಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಮೂರು ತಿಂಗಳಿಗೊಮ್ಮೆ ತಪ್ಪದೇ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು. ಈ ಬಗ್ಗೆ ವಿಳಂಬ ನೀತಿ ಅನುಸರಿಸುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಬ್ಯಾಕ್‌ಲಾಗ್ ಹಾಗೂ ಬಡ್ತಿ ವಿಚಾರದಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆಯೂ ಸಭೆಯಲ್ಲಿ ಸಮಿತಿ ಸದಸ್ಯರು ಚರ್ಚಿಸಿದ್ದು, ಬ್ಯಾಕ್‌ಲಾಗ್ ಹಾಗೂ ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪರಿಶೀಲನಾ ಸಭೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications