ಸಿಎಂ - ಡಿಸಿಎಂ ಕಾಂಗ್ರೆಸ್ ಹೈಕಮಾಂಡ್ ಭೇಟಿ: ಸಿಎಂ ಬದಲಾವಣೆ ಮತ್ತೆ ಮುನ್ನೆಲೆ!
ಕರ್ನಾಟಕದ ರಾಜಕೀಯದಲ್ಲಿ ಹೊಸ ಸಂಚಲನ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದಿಢೀರ್ ಎಂದು ದೆಹಲಿ ಪ್ರವಾಸ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಬದಲಾವಣೆಯ ವಿಚಾರವು ಕಳೆದ ಕೆಲವು ದಿನಗಳಿಂದ ತಣ್ಣಗಾಗಿತ್ತು. ಇನ್ನು ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಚರ್ಚೆಯಾಗಿದೆ ಎಂದು ಹೇಳಲಾದಂತೆ ಮುಖ್ಯಮಂತ್ರಿ ಬದಲಾವಣೆ ಆಗಲಿದೆಯೇ ಎನ್ನುವ ಬಗ್ಗೆ ಚರ್ಚೆ ನಡೆದಿದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ದೆಹಲಿ ಹೈಕಮಾಂಡ್ ಭೇಟಿ ಮಾಡಿದ್ದು, ಮತ್ತೆ ಚರ್ಚೆ ಶುರುವಾಗಿದೆ. ಇಂದು ಡಿ.ಕೆ ಶಿವಕುಮಾರ್ ಅವರು ದೆಹಲಿ ಭೇಟಿಯು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನು ಸೃಷ್ಟಿ ಮಾಡಿದೆ. ಇನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ದೆಹಲಿ ಭೇಟಿ ನೀಡುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದೆಹಲಿಗೆ ಭೇಟಿ ನೀಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಸಹ ಜೂನ್ 12ಕ್ಕೆ ದೆಹಲಿಗೆ ಭೇಟಿ ನೀಡಲಿದ್ದು ಹೈಕಮಾಂಡ್‌ನೊಂದಿಗೆ ಚರ್ಚಿಸಲಿದ್ದಾರೆ.

ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಎದುರಾಗಿದೆ. ಈ ಸಂಬಂಧ ಚರ್ಚಿಸುವುದಕ್ಕೂ ಹೈಕಮಾಂಡ್ ಇಬ್ಬರು ನಾಯಕರನ್ನು ಕರೆದಿದೆ ಎಂದು ಹೇಳಲಾಗಿದೆ. ಪೂರ್ವನಿಯೋಜಿತ ಕಾರ್ಯುಕ್ರಮದಂತೆ ಇಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ಜೊತೆ ದೆಹಲಿ ಮಹಾನಗರ ಪಾಲಿಕೆಯ ವಿವಿಧ ಕಾರ್ಯಗಳನ್ನು ಪರಿಶೀಲನೆ ಮಾಡಲಿದ್ದಾರೆ. ಇನ್ನು ದೆಹಲಿಯಲ್ಲೂ ಈ ಹಿಂದೆ ಮೂರು ಮಹಾನಗರ ಪಾಲಿಕೆಗಳನ್ನು ರಚಿಸಲಾಗಿತ್ತು. ಇದೀಗ ಬೆಂಗಳೂರಿನಲ್ಲೂ ಮೂರು ಪಾಲಿಕೆಗಳನ್ನು ರಚಿಸುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಇದಾದ ನಂತರ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಜಲಶಕ್ತಿ ಸಚಿವರು ಹಾಗೂ ಇಂಧನ ಸಚಿವರನ್ನು ಭೇಟಿ ಮಾಡಲಿದ್ದಾರೆ.
ಬೆಂಗಳೂರಿನಲ್ಲಿ ಕಸ ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ನಗರಗಳನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈ ಮಹಾನಗರಗಳಿಗೆ ಭೇಟಿ ನೀಡಲಾಗಿದೆ. ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಯಾವ ವಿಧಾನವನ್ನು ಬಳಸಲಾಗುತ್ತಿದೆ ಎಂದು ಪರಿಶೀಲನೆ ನಡೆಸಲಾಗುತ್ತದೆ. ಗ್ರೇಟರ್ ಬೆಂಗಳೂರು ಪಾಲಿಕೆಯಿಂದ 15 ಜನ ಸದಸ್ಯರ ತಂಡ ದೆಹಲಿಗೆ ಭೇಟಿ ನೀಡಿದೆ.
ಕಾಲ್ತುಳಿತ ಪ್ರಕರಣ ಚರ್ಚೆ: ಇನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿರುವ 11 ಜನರ ಬಗ್ಗೆಯೂ ರಾಜ್ಯದ ನಾಯಕರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.












Click it and Unblock the Notifications