ಕರ್ನಾಟಕದಲ್ಲಿ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ
ಬೆಂಗಳೂರು, ಆಗಸ್ಟ್ 10: ಕರ್ನಾಟಕದ ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ವೈದ್ಯಕೀಯ ತಪಾಸಣೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂಬುದಾಗಿ ತಜ್ಞರು ಎಚ್ಚರಿಸಿದ ಬೆನ್ನಲ್ಲೇ ಈ ಆದೇಶ ಹೊರಡಿಸಲಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯು 6 ರಿಂದ 16 ವರ್ಷದೊಳಗಿನ ಮಕ್ಕಳ ಆರೋಗ್ಯ ಪರೀಕ್ಷಿಸಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಕೊವಿಡ್-19 ಪರಿಶೀಲನಾ ಸಭೆಯಲ್ಲಿ ವೈದ್ಯಕೀಯ ಇಲಾಖೆ ಅಧಿಕಾರಿಗಳು ಮತ್ತು ತಜ್ಞರ ಜೊತೆಗಿನ ಚರ್ಚೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ನಡೆಸಿರುವ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಶೇ.40ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ಗೊತ್ತಾಗಿದೆ. ರಾಜ್ಯದಲ್ಲಿ ಮಕ್ಕಳನ್ನು ಕೊವಿಡ್-19 ಮೂರನೇ ಅಲೆಯಿಂದ ರಕ್ಷಿಸುವುದಕ್ಕೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು?, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿರುವ ಆದೇಶದಲ್ಲಿ ಉಲ್ಲೇಖವಾಗಿರುವ ಅಂಶಗಳೇನು?, ಡಾಕ್ಟರ್ ದೇವಿಶೆಟ್ಟಿ ನೇತೃತ್ವದ ನಿಯೋಗ ಮಾಡಿರುವ ಶಿಫಾರಸ್ಸುಗಳೇನು?, ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು ಸೃಷ್ಟಿಸಿರುವ ಸನ್ನಿವೇಶ ಹೇಗಿದೆ ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಪ್ರಯಾಣಿಕರಿಗೆ ಕೊವಿಡ್-19 ನೆಗೆಟಿವ್ ವರದಿ ಕಡ್ಡಾಯ
ಕೊರೊನಾವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದಾಗಿ ಅಂತರ್-ರಾಜ್ಯ ಗಡಿ ಪ್ರದೇಶಗಳಲ್ಲಿ ತಪಾಸಣೆಯನ್ನು ಶಿಸ್ತುಬದ್ಧವಾಗಿ ನಡೆಸಲಾಗುತ್ತಿದೆ. ಗಡಿ ರಾಜ್ಯಗಳಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಕೊವಿಡ್-19 ನೆಗೆಟಿವ್ ವರದಿಯನ್ನು ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ನಂತರದ ಸ್ಥಾನದಲ್ಲಿ ಇರುವ ಮೈಸೂರು ಜಿಲ್ಲೆಯಲ್ಲೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯು ಮೂರು ಶಿಫ್ಟ್ ಗಳಲ್ಲಿ ಈ ಕುರಿತು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.

ಕೊವಿಡ್-19 ಪರೀಕ್ಷೆ ಮತ್ತು ಲಸಿಕೆ ವಿತರಣೆ ಹೆಚ್ಚಳ
ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ 1.5 ಕೋಟಿ ಜನರಿಗೆ ಕೊವಿಡ್-19 ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಅಂದರೆ ಪ್ರತಿನಿತ್ಯ 5 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ನೀಡುವುದಕ್ಕೆ ನಿರ್ಧರಿಸಲಾಗಿದೆ. ರಾಜ್ಯದ ಎಂಟು ಗಡಿ ಜಿಲ್ಲೆಗಳಲ್ಲಿ ಸೋಂಕು ತಪಾಸಣೆ ಮತ್ತು ಲಸಿಕೆ ವಿತರಣೆಯನ್ನು ಹೆಚ್ಚಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಿಯಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಜಿಎಸ್ ಟಿ ಪಾಲು
"ಕೇಂದ್ರ ಸರ್ಕಾರದಿಂದ ಜಿಎಸ್ ಟಿ ತೆರಿಗೆ ಪಾಲು ಪಡೆದುಕೊಳ್ಳುವಂತೆ ರಾಜ್ಯದ ಪ್ರತಿಪಕ್ಷ ನಾಯಕರು ಹೇಳುತ್ತಿದ್ದಾರೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ಈಗಾಗಲೇ 12800 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, 11,300 ಕೋಟಿ ಅನುದಾನ ಬರಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಅನುದಾನವನ್ನು ಸಹ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದ್ದಾರೆ," ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕಿದೆ ಎಂದು ಸೂಚಿಸಿದ್ದಾರೆ. ಇನ್ನೊಂದು ಕಡೆಯಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 1023 ಕೋಟಿ ರೂಪಾಯಿ ಹಣವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕೊರೊನಾವೈರಸ್ ನಿಯಂತ್ರಿಸಲು ಸರ್ಕಾರಕ್ಕೆ ಶಿಫಾರಸ್ಸು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎನ್ನುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಕೊವಿಡ್-19 ನಿಯಂತ್ರಣ ಕಾರ್ಯ ಪಡೆಯ ಸದಸ್ಯರು ಹಾಗೂ ವೈದ್ಯಕೀಯ ತಜ್ಞರು ಶಿಫಾರಸ್ಸು ಮಾಡಿದ್ದಾರೆ. ಮಕ್ಕಳ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ತಜ್ಞರು ನೀಡಿರುವ ಸಲಹೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* ರಾಜ್ಯದಲ್ಲಿ ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ 6 ರಿಂದ 16 ವರ್ಷದ ಮಕ್ಕಳಿಗೆ ಹಾಲಿನ ಜೊತೆಗೆ ಇತರೆ ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡುವುದು
* ಕ್ಷೀರ ಭಾಗ್ಯ ಯೋಜನೆಯನ್ನು ಅಂಗನವಾಡಿ ಮಕ್ಕಳಿಗೂ ನೀಡುವುದು
* ಲಾಕ್‌ಡೌನ್ ಸಡಿಲಿಕೆ ನಂತರ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ಪ್ರಾರಂಭಿಸುವುದು
* ಎಫ್‌ಎಸ್‌ಎಸ್‌ಎಐ ಸ್ಥಾಪಿಸಿದ ಆಹಾರ ಬಲಪಡಿಸುವ ಸಂಪನ್ಮೂಲ ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ವಿದ್ಯಾರ್ಥಿಗಳಿಗೆ ಅಕ್ಕಿ, ಗೋಧಿ, ಎಣ್ಣೆ, ಉಪ್ಪು ಮತ್ತು ಹಾಲಿನೊಂದಿಗೆ ಆಹಾರ ಭದ್ರತೆಯನ್ನು ಒದಗಿಸಲು ಶಿಫಾರಸು ಮಾಡಲಾಗಿದೆ.
* ಮಕ್ಕಳಲ್ಲಿ MIS-C ಸೇರಿದಂತೆ ಕೋವಿಡ್-19 ನಂತರದ ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ನಿಟ್ಟಿನಲ್ಲಿ ಕೊರೊನಾವೈರಸ್ ನಂತರದ ಚೇತರಿಕೆಗೆ ತಾಲೂಕು/ವಲಯ ಮಟ್ಟದಲ್ಲಿ OPD ಕೇಂದ್ರಗಳನ್ನು ತೆರೆಯುವುದು.

ಕರ್ನಾಟಕದಲ್ಲಿ ಇಳಿಮುಖವಾದ ಕೊವಿಡ್-19 ಸಂಖ್ಯೆ
ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ನಾಲ್ಕನೇ ಪ್ರಕರಣ ವರದಿ ಆಗಿರುವುದರ ಮಧ್ಯೆ ರಾಜ್ಯದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.0.89ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 2.02ರಷ್ಟಿದೆ. ಒಂದು ದಿನದಲ್ಲಿ 1186 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1776 ಸೋಂಕಿತರು ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 24 ಮಂದಿ ಕೊರೊನಾವೈರಸ್ ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 36817 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2919711ಕ್ಕೆ ಏರಿಕೆಯಾಗಿದೆ. ಒಟ್ಟು 2859552 ಸೋಂಕಿತರು ಗುಣಮುಖರಾಗಿದ್ದು. 23316 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೊರೊನಾವೈರಸ್ ಸೋಂಕು ಪರೀಕ್ಷೆ ಪ್ರಮಾಣ ಎಷ್ಟು?
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 17910 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 1,14,282 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 1,32,192 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 74,00,716 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 3,25,77,799 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 3,99,78,515 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊವಿಡ್-19?
ರಾಜ್ಯದಲ್ಲಿ ಒಟ್ಟು 1186 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 0, ಬಳ್ಳಾರಿ 6, ಬೆಳಗಾವಿ 29, ಬೆಂಗಳೂರು ಗ್ರಾಮಾಂತರ 19 ಬೆಂಗಳೂರು 296, ಬೀದರ್ 1, ಚಾಮರಾಜನಗರ 31, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 24, ಚಿತ್ರದುರ್ಗ 15, ದಕ್ಷಿಣ ಕನ್ನಡ 273, ದಾವಣಗೆರೆ 4, ಧಾರವಾಡ 1, ಗದಗ 3, ಹಾಸನ 54, ಹಾವೇರಿ 1, ಕಲಬುರಗಿ 6, ಕೊಡಗು 83, ಕೋಲಾರ 28, ಕೊಪ್ಪಳ 5, ಮಂಡ್ಯ 29, ಮೈಸೂರು 82, ರಾಯಚೂರು 0, ರಾಮನಗರ 2, ಶಿವಮೊಗ್ಗ 34, ತುಮಕೂರು 40, ಉಡುಪಿ 81, ಉತ್ತರ ಕನ್ನಡ 30, ವಿಜಯಪುರ 1, ಯಾದಗಿರಿ 1 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.
Recommended Video

ಯಾವ ಹಂತದಲ್ಲಿ ಎಷ್ಟು ಫಲಾನುಭವಿಗಳಿಗೆ ಲಸಿಕೆ?
ರಾಜ್ಯದಲ್ಲಿ ಈವರೆಗೂ 7,61,616 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 5,55,187 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 9,31,828 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 3,79,230 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಇದರ ಹೊರತಾಗಿ 45 ವರ್ಷಕ್ಕಿಂತ ಮೇಲ್ಪಟ್ಟ 1,24,61,055 ಫಲಾನುಭವಿಗಳಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು 56,13,110 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಈವರೆಗೂ 2,57,18,122 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 73,88,422 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.












Click it and Unblock the Notifications