ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶೇ.75ರಷ್ಟು ಹಾಜರಾತಿ, ಸ್ಪಷ್ಟನೆಗಳು
ಬೆಂಗಳೂರು, ಫೆಬ್ರವರಿ 09: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಯಾರಿಗಳು ಆರಂಭವಾಗಿವೆ. ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಶೇ.75ರಷ್ಟು ಹಾಜರಾತಿ ಕಡ್ಡಾಯ ಎಂಬ ಸುದ್ದಿಯೊಂದು ಮಾಧ್ಯಮಗಳಲ್ಲಿ ಬಂದಿದ್ದು, ವೈರಲ್ ಆಗಿದೆ. ಈ ಕುರಿತು ಅನಗತ್ಯ ಗೊಂದಲ ಉಂಟಾಗಬಾರದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸ್ಪಷ್ಟನೆಯೊಂದನ್ನು ನೀಡಿದೆ.
ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷ ಬಸವರಾಜೇಂದ್ರ ಹೆಚ್. ಸ್ಪಷ್ಟೀಕರಣವನ್ನು ನೀಡಿದ್ದಾರೆ. ದಿನಾಂಕ 7/2/2025ರಂದು ದಿನಪತ್ರಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ಶೇ.75ಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಪರೀಕ್ಷೆ-2 ಮತ್ತು 3ಕ್ಕೂ ನೋಂದಣಿಗೆ ಅವಕಾಶ ಇಲ್ಲದ ಕುರಿತು ಹಾಗೂ ಮರು ದಾಖಲಾತಿಯಾಗುವ ಬಗ್ಗೆ ಪ್ರಕಟವಾಗಿರುವ ಸುದ್ದಿಯ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಈ ಸ್ಪಷ್ಟೀಕರಣ ದಿನಾಂಕ 7.02.2025ರಂದು ದಿನಪತ್ರಿಕೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ಶೇ.75ಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಪರೀಕ್ಷೆ-2 ಮತ್ತು 3ಕ್ಕೂ ನೋಂದಣಿಗೆ ಅವಕಾಶ ಇಲ್ಲದ ಕುರಿತು ಹಾಗೂ ಮರು ದಾಖಲಾತಿಯಾಗುವ ಬಗ್ಗೆ ಪ್ರಕಟವಾಗಿರುವ ಸುದ್ದಿಯ ಕುರಿತು ಎಂಬ ವಿಷಯ ಒಳಗೊಂಡಿದೆ.
ಸ್ಪಷ್ಟೀಕರಣದ ವಿವರ: ಶೇ 75ಕ್ಕಿಂತ ಕಡಿಮೆ ಹಾಜರಾತಿ ಇರುವ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1, 2 ಮತ್ತು 3ಕ್ಕೆ ನೋಂದಣಿಗೆ ಅವಕಾಶವಿಲ್ಲದಿರುವ ಕುರಿತು ಮಂಡಲಿಯಿಂದ ಸುತ್ತೋಲೆ ಪ್ರಕಟವಾಗಿದ್ದು ಹಾಗೂ ಸದರಿ ವಿದ್ಯಾರ್ಥಿಗಳು 2025-26ನೇ ಶೈಕ್ಷಣಿಕ ಸಾಲಿಗೆ ಮರುದಾಖಲಾತಿಯಾಗಲು ಸುತ್ತೋಲೆಯಲ್ಲಿ ತಿಳಿಸಲಾಗಿದೆಯೆಂದು ವರದಿಯಾಗಿದೆ.
ಮಂಡಳಿಯ ಕಾಯ್ದೆ-1966 ನಿಯಮ-37ರನ್ವಯ, ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿರುವ ದಿನಗಳಿಗೆ ಅನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯವಾಗಿರುತ್ತದೆ.
ಆದರೆ 2024ರ ಪರೀಕ್ಷೆ-1ಕ್ಕೆ ನೋಂದಾಯಿಸಿಕೊಂಡು ಶೇ.75ಕ್ಕಿಂತ ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಿತದೃಷ್ಟಿಯಿಂದ ಪರೀಕ್ಷೆ-2 ಮತ್ತು 3ಕ್ಕೆ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಮಾಡಿ ಪರೀಕ್ಷೆ ಹಾಜರಾಗಲು ಅವಕಾಶ ಕಲ್ಪಿಸಲಾಗಿತ್ತು.
ಇದೇ ರೀತಿ 2024-25ನೇ ಸಾಲಿನ ಪರೀಕ್ಷೆಗೂ ಸಹ ಸದರಿ ನಿಯಮವನ್ನು ಮುಂದುವರೆಸಲಾಗುವುದು. ಹಾಜರಾತಿ ಹಾಗೂ ಪರೀಕ್ಷೆ ನಿಯಮಗಳಿಗೆ ಸಂಬಂಧಪಟ್ಟಂತೆ ಯಾವುದೇ ಬದಲಾವಣೆ ಇರುವುದಿಲ್ಲ. ಹಿಂದಿನ ಸಾಲಿನಂತೆಯೇ ಇರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಈಗಾಗಲೇ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪರೀಕ್ಷೆ -1ಕ್ಕೆ ನೋಂದಣಿಯಾಗಿರುವ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳುವ ಮತ್ತು ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡುವ ಕುರಿತು ಆದೇಶಗಳನ್ನು ಹೊರಡಿಸಲಾಗಿದೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 20ರಿಂದ ಆರಂಭವಾಗಲಿವೆ. 2024-25ನೇ ಶೈಕ್ಷಣಿಕ ವರ್ಷದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಯಾವುದೇ ಗ್ರೇಸ್ ಮಾರ್ಕ್ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಕೊಟ್ಟು ಶಿಕ್ಷಣ ಇಲಾಖೆ ವಿವಾದಕ್ಕೆ ಸಿಲುಕಿತ್ತು.
ಸಚಿವ ಮಧು ಬಂಗಾರಪ್ಪ ಮೂರು ಪರೀಕ್ಷೆ ಪದ್ಧತಿ ಈಗ ವಿದ್ಯಾರ್ಥಿಗಳಿಗೆ ಅರ್ಥವಾಗಿದೆ. ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆ, ಗೊಂದಲದ ಕುರಿತು ಅಧಿಕಾರಿಗಳ ಜೊತೆ ಸಭೆ ಮಾಡಿ ಸೂಚನೆ ನೀಡಿದ್ದೇವೆ. ಈ ಬಾರಿ ಉತ್ತಮ ಫಲಿತಾಂಶ ಬರಲಿದೆ. ಫಲಿತಾಂಶದ ವಿಚಾರದಲ್ಲಿ ಮಕ್ಕಳ ಮೇಲೆ ಒತ್ತಡ ಹಾಕಬಾರದು ಎಂದು ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications