Elephant Arjuna Death: ದಸರಾ ಅಂಬಾರಿ ಹೊತ್ತು ಮೆರೆದಿದ್ದ ಅರ್ಜುನ ಕಣ್ಣೇದುರೇ ಸಾವು: ಸಿದ್ದರಾಮಯ್ಯ ಹೇಳಿದಿಷ್ಟು!
ಬೆಂಗಳೂರು, ಡಿಸೆಂಬರ್ 04: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸೋಮವಾರ ಕಾಡಾನೆ ದಾಳಿಯಲ್ಲಿ ಸಾವನ್ನಪ್ಪಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಯಸಳೂರು ಬಳಿ ನಡೆದ ಕಾರ್ಯಾಚರಣೆ ವೇಳೆ ಒಂಟಿಸಲಗ ನಡೆಸಿದ ದಾಳಿಯಿಂದ ಅರ್ಜುನ ಆನೆ ಕೊನೆಯುಸಿರೆಳೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬನಿ ಮಿಡಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಐತಿಹಾಸಿಕ ಮೈಸೂರು ದಸರಾದ ಕೇಂದ್ರ ಬಿಂದುವಾದ ಜಂಬೂಸವಾರಿಯನ್ನು ಎಂಟು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟು ಜನರ ಪ್ರೀತಿಪಾತ್ರವಾಗಿದ್ದ ಆನೆ 'ಅರ್ಜುನ' ಇನ್ನಿಲ್ಲ ಎಂಬ ಸುದ್ದಿ ಕೇಳಿ ನೋವಾಯಿತು.

ಬರೋಬ್ಬರಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು, ಅತ್ಯಂತ ಸಂಯಮದಿಂದ ಮೆರವಣಿಗೆಯಲ್ಲಿ ಸಾಗುವ ಮೂಲಕ ತಾಯಿ ಚಾಮುಂಡೇಶ್ವರಿಯ ಸೇವೆಗೈದಿದ್ದ ಅರ್ಜುನ ಕಾಡಾನೆ ಜೊತೆಗಿನ ಕಾದಾಟದಲ್ಲಿ ಮೃತಪಟ್ಟಿದೆ. ಲಕ್ಷಾಂತರ ಜನರ ನಡುವೆ ಗಾಂಭೀರ್ಯದಿಂದ ಸಾಗುತ್ತಿದ್ದ ಅರ್ಜುನನ ನಡಿಗೆ ನನ್ನಂತಹ ಕೋಟ್ಯಂತರ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇರಸ ವ್ಯಕ್ತಪಡಿಸಿದ್ದಾರೆ.
ಅರ್ಜುನನ ಸಾವು ಅತ್ಯಂತ ದುಃಖಕರ: ಈಶ್ವರ ಖಂಡ್ರೆ
ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಹಲವು ಬಾರಿ ಅಂಬಾರಿ ಹೊತ್ತಿದ್ದ 64 ವರ್ಷದ ಅರ್ಜುನ ಆನೆಯ ಸಾವಿಗೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಹಾಸನ ಜಿಲ್ಲೆ ಯಸಳೂರು ವಲಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆಯ ವೇಳೆ ದುರ್ಘಟನೆ ಸಂಭವಿಸಿದ್ದು, ಮದಗಜವೊಂದು, ಅರ್ಜುನನ ಮೇಲೆ ದಾಳಿ ಮಾಡಿ, ತನ್ನ ದಂತದಿಂದ ಚುಚ್ಚಿ ಘಾಸಿಗೊಳಿಸಿ, ಸಾವಿಗೆ ಕಾರಣವಾಗಿರುವುದು ಅತ್ಯಂತ ದುರಾದೃಷ್ಟಕರ ಎಂದು ತಿಳಿಸಿದ್ದಾರೆ.
ಪುಂಡಾನೆ ಸೆರೆ ಕಾರ್ಯಾಚರಣೆ ಅತ್ಯಂತ ಕಷ್ಟದಾಯಕ. ನಾಡಿಗೆ ಕಾಡಾನೆಗಳು ಬಂದಾಗ ಜನರು ತೀವ್ರ ಆತಂಕಕ್ಕೆ ಒಳಗಾಗುತ್ತಾರೆ. ಜನರ ಪ್ರಾಣ ರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ಕಾರ್ಯಾಚರಣೆ ನಡೆಸಬೇಕಾಗುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಪುಂಡಾನೆ ರೌದ್ರಾವತಾರ ತಾಳಿ, ಅರ್ಜುನನ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಜಗ್ಗದೆ ದಾಳಿ ಮಾಡಿದೆ. ಮಾವುತ ಮತ್ತು ಪಶುವೈದ್ಯರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದ ಮೂರು ಆನೆಗಳು ಹಿಮ್ಮೆಟ್ಟಿವೆ.
ಆದರೆ ಅರ್ಜುನ ಪುಂಡಾನೆಯೊಂದಿಗೆ ಏಕಾಂಗಿಯಾಗಿ ಹೋರಾಡುವಾಗ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ಜುನ ಆನೆ ಈ ಹಿಂದೆ ಹಲವು ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಅನುಭವ ಹೊಂದಿತ್ತು ಮತ್ತು ತರಬೇತಿ ಪಡೆದಿತ್ತು ಎಂದು ತಿಳಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ ಯಸಳೂರು ವಲಯದಲ್ಲಿ ಹಲವು ಕಾಡಾನೆಗಳು ಬೀಡು ಬಿಟ್ಟಿದ್ದು, ಹಾಸನ ವಲಯದಲ್ಲಿ ಈವರೆಗೆ ನಡೆದ ಕಾರ್ಯಾಚರಣೆಯಲ್ಲಿ 5 ಕಾಡಾನೆ ಹಿಡಿದು ರೇಡಿಯೋ ಕಾಲರ್ ಅಳವಡಿಸಲಾಗಿದೆ. ಆದರೂ ಇಲ್ಲಿನ ಜನರು ಆತಂಕಕ್ಕೆ ಈಡಾಗಿದ್ದರು.
ಆನೆಗಳನ್ನು ಕಾಡಿಗೆ ಅಟ್ಟಲು ಇಲ್ಲವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಒತ್ತಡ ಹೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಎಲ್ಲ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಮತ್ತು ಸಕಲ ಸಿದ್ಧತೆಯೊಂದಿಗೆ ಅರ್ಜುನ ಸೇರಿದಂತೆ ನಾಲ್ಕು ಸಾಕು ಆನೆಗಳೊಂದಿಗೆ ಕಾರ್ಯಾಚರಣೆ ನಡೆಸುವಾಗ ಈ ದುರ್ಘಟನೆ ನಡೆದಿದೆ ಎಂದು ಹೇಳಿಕೆಯಲ್ಲಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.












Click it and Unblock the Notifications