Karnataka Government: ಡಿಕೆ ಶಿವಕುಮಾರ್, ಸಚಿವ ರಹೀಂ ಖಾನ್ ಖಾತೆಯಲ್ಲಿ ಬದಲಾವಣೆ: ಕಾರಣವೇನು?
ಬೆಂಗಳೂರು, ಸೆಪ್ಟೆಂಬರ್ 29: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಬರೋಬ್ಬರು ಎರಡು ವರ್ಷ ಪೂರೈಸಿದ್ದು, ಇದೀಗ ರಾಜ್ಯ ಸರ್ಕಾರ ಹಲವು ಬದಲಾವಣೆಗೆ ಮುಂದಾಗಿದೆ. ಈಗಾಗಲೇ ಕರ್ನಾಟಕ ಸರಕಾರವು ಗ್ರೇಟರ್ ಬೆಂಗಳೂರು ಯೋಜನೆಯ ಮೂಲಕ ಬೆಂಗಳೂರು ನಗರದ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಇನ್ನೂ ಬಿಬಿಎಂಪಿ ಸುತ್ತ ಮುತ್ತಲಿನ ಪಟ್ಟಣ ಮತ್ತು ಗ್ರಾಮ ಪಂಚಾಯತ್‌ಗಳನ್ನು ಸೇರಿಸಿ, ನಗರದ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ಐದು ಹೊಸ ನಗರ ಪಾಲಿಕೆಗಳನ್ನು ರಚಿಸಲಾಗುತ್ತದೆ. ಈ ಯೋಜನೆಯಿಂದ ಬಿಬಿಎಂಪಿಯ ವ್ಯಾಪ್ತಿ ದ್ವಿಗುಣವಾಗುವ ನಿರೀಕ್ಷೆಯಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಹ ಇದರ ಅಡಿಯಲ್ಲೇ ಕಾರ್ಯನಿರ್ವಹಿಸಲಿದೆ.
ಈಗಾಗಲೇ ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಅಥಾರಿಟಿ ಅಸ್ತಿತ್ವಕ್ಕೆ ಬಂದಿದ್ದು, ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಐದು ಹೊಸ ಪಾಲಿಕೆಗಳನ್ನು ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್ ಅವರ ಖಾತೆಯಲ್ಲಿ ಬದಲಾವಣೆ ಮಾಡಲಾಗಿದೆ. ಈ ಕುರಿತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಸೂಚನೆ ಹೊರಡಿಸಿದ್ದಾರೆ. ಡಿ ಕೆ ಶಿವಕುಮಾರ್ ಹಾಗೂ ರಹೀಂ ಖಾನ್ ಅವರ ಖಾತೆಯಲ್ಲಿ ಮಾತ್ರ ಬದಲಾವಣೆಯಾಗಿದ್ದು, ಬೇರೆ ಯಾವ ಸಚಿವರ ಖಾತೆಯಲ್ಲಿ ಬದಲಾವಣೆಯಾಗಿಲ್ಲ.

ಈ ಮೊದಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ, ಬಿಬಿಎಂಪಿ, ಬಿಡಿಎ, ಬಿಡಬ್ಲ್ಯುಎಸ್ಎಸ್‌ಬಿ, ಬಿಎಂಆರ್‌ಡಿಎ, ಬಿಎಂಆರ್‌ಸಿಎಲ್ (ನಗರ ಯೋಜನೆಗೆ ಸಂಬಂಧಿಸಿದ ಪ್ರಾಧಿಕಾರಗಳು) ಸೇರಿ ಬೆಂಗಳೂರು ನಗರ ಅಭಿವೃದ್ಧಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಬೃಹತ್ ಮತ್ತು ಮಧ್ಯಮ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ (ಬೆಂಗಳೂರು ನಗರ ಯೋಜನೆಗೆ ಸಂಬಂಧಿಸಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ ಐದು ಪಾಲಿಕೆಗಳು ಮತ್ತು ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿರುವ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು (ಸೇವಾ ವಿಷಯಗಳನ್ನು ಹೊರತುಪಡಿಸಿ), ಬಿಡಿಎ, ಬಿಡಬ್ಲ್ಯುಎಸ್ಎಸ್‌ಬಿ, ಬಿಎಂಆರ್‌ಡಿಎ, ಬಿಎಂಆರ್‌ಎಲ್ ಆಡಳಿತ ಹೊಣೆ ನೀಡಲಾಗಿದೆ.
ಡಿ ಕೆ ಶಿವಕುಮಾರ್ ಖಾತೆ ಬದಲಾವಣೆ ಮಾತ್ರವಲ್ಲದೇ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರ ಖಾತೆ ಹಾಗೆಯೇ ಉಳಿದಿದ್ದರೂ, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಡಳಿತ ಜವಾಬ್ದಾರಿ ಮಾತ್ರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗಿದೆ. ಇನ್ನೂ ಮುಖ್ಯಮಂತ್ರಿಯವರ ಸಲಹೆಯ ಮೇರೆಗೆ ಇಬ್ಬರು ಸಚಿವರಿಗೆ ಸಂಬಂಧಿಸಿದಂತೆ, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ವ್ಯವಹಾರದಲ್ಲಿ ಅಸ್ತಿತ್ವದಲ್ಲಿರುವ ಖಾತೆಗಳನ್ನು ಮಾರ್ಪಡಿಸಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿಸೂಚನೆ ಹೊರಡಿಸಿದ್ದಾರೆ.












Click it and Unblock the Notifications