HD Kumaraswamy: ಕಾಂಗ್ರೆಸ್ ಸರಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? : ಎಚ್ ಡಿ ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು, ಸೆಪ್ಟೆಂಬರ್ 16: ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ. ಕಳೆದ ಆರು ತಿಂಗಳಲ್ಲಿ ಸರ್ಕಾರದ ಅಧಿಕೃತ ಅಂಕಿ ಅಂಶಗಳಂತೆ 251 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದುಮ ರಾಜ್ಯ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಬೆಳ್ಳಂ ಬೆಳಗ್ಗೆಯೇ ರೈತರ ಸಾವಿನ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ? ಎಂದು ಕಿಡಿಕಾರಿದ್ದಾರೆ.

ಗ್ಯಾರಂಟಿಗಳನ್ನು ಕೊಟ್ಟೆವೆಂದು ಬೀಗುತ್ತಿರುವ ಕರ್ನಾಟಕ ಕಾಂಗ್ರೆಸ್ ಸರಕಾರಕ್ಕೆ ರೈತನ ಬದುಕಿಗೆ ಗ್ಯಾರಂಟಿ ಕೊಡಲು ಸಾಧ್ಯವಿಲ್ಲವೇ? ಇದೇನಾ 'ಕರ್ನಾಟಕ ಮಾದರಿ'? ರಾಜ್ಯದಲ್ಲಿ ಕೃಷಿ ಇಲಾಖೆ ಎನ್ನುವುದು ಇದೆಯಾ? ಅದು ಕೃಷಿ ಇಲಾಖೆಯಾ, ಕಸಾಯಿಖಾನೆಯಾ? ಕಂದಾಯಕ್ಕೂ ಆದಾಯದ ಚಿಂತೆಯಾ? ರಾಜ್ಯಕ್ಕೆ ಬರ, ಕೆಲವರಿಗೆ ಅದೇ ವರ..!! ಇದು ನೈಜಸ್ಥಿತಿ ಎಂದು ರಾಜ್ಯ ಸರ್ಕಾರದ ವಿರುದ್ದ ಕುಟುಕಿದ್ದಾರೆ.
ಬೆಳ್ಳಂ ಬೆಳಗ್ಗೆಯೇ ಈ ವರದಿ ಓದಿದಾಕ್ಷಣ ಬಹಳ ಸಂಕಟವಾಯಿತು, ಕಣ್ಣಾಲಿಗಳು ತುಂಬಿ ಬಂದವು. ಇನ್ನೆಷ್ಟು ದಿನ ಇಂತಹ ಸಾವುಗಳನ್ನು ನೋಡಬೇಕು. ಕೇವಲ ಪ್ರಚಾರ, ಅಧಿಕಾರದ ಸುಖ ಅನುಭವಿಸುತ್ತಿರುವ @INCKarnataka ಸರಕಾರಕ್ಕೆ ಅನ್ನದಾತನ ಸಾವಿನ ಕೇಕೆ ಸವಿಗಾನವಾಗಿದೆಯಾ? ಇವರಿಗೆ ವಾಸ್ತವ ಅರಿವಿಲ್ಲವೆ? 1/5
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) September 16, 2023
ಗ್ಯಾರಂಟಿಗಳನ್ನು ಕೊಟ್ಟೆವೆಂದು… pic.twitter.com/Tqe1DB9a8m
ಆಗಸ್ಟ್, ಸೆಪ್ಟೆಂಬರ್ ನಲ್ಲಿ ಕೆಲವೆಡೆ ಮಳೆಯಾದರೂ ಪ್ರಯೋಜನವಾಗಿಲ್ಲ. ಆಗ್ಗೆ ಬೆಳೆಗಳು ನಾಶವಾಗಿವೆ. ತುರ್ತಾಗಿ ಕೇಂದ್ರಕ್ಕೆ ಮನವಿ ಮಾಡಬೇಕಿದ್ದ ಸರಕಾರ ಮಾರ್ಗಸೂಚಿ ನೆಪದಲ್ಲಿ ಕಾಲಹರಣ ಮಾಡುತ್ತಿದೆ. ಕಾಲಹರಣವೂ ಜೀವಹರಣವೂ ಬೇರೆ ಬೇರೆ ಅಲ್ಲ. ತುರ್ತಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬಿಡುಗಡೆ ಮಾಡಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಬೆಳೆ ವಿಮೆಯೂ ಅನ್ನದಾತರ ಆಪತ್ತಿಗೆ ಆಗುತ್ತಿಲ್ಲ,ಅದರ ಬಗ್ಗೆ ಅವರಿಗೆ ವಿಶ್ವಾಸವೇ ಇಲ್ಲ. ಅವರು ಸಾವಿನ ದವಡೆಗೆ ಬೀಳುತ್ತಿದ್ದರೆ ಅಧಿಕಾರಿಗಳು ಅರ್ಹ-ಅನರ್ಹ ಸಾವು(!!) ಎಂದು ವಿಭಜಿಸಿ ಲೆಕ್ಕ ಹಾಕಿಕೊಂಡು ಕೂತಿದ್ದಾರೆ.ಸಾವಿನಲ್ಲೂ ಅರ್ಹತೆ, ಅನರ್ಹತೆ ಹುಡುಕುವ ಈ ಕ್ರೂರತೆಗೆ ಏನೆಂದು ಹೇಳುವುದು? ರೈತರ ಸಾವುಗಳೆಂದರೆ ಇವರಿಗೆ ಇಷ್ಟು ಹಗುರವೇ? ಎಂದು ಪ್ರಶ್ನಿಸಿದರು.
ನನ್ನ ಮನವಿ ಇಷ್ಟೇ; ರೈತರು ಎದೆಗುಂದಬಾರದು. ನಿಮ್ಮ ದುಡುಕಿನ ನಿರ್ಧಾರ ನಿಮ್ಮ ಕುಟುಂಬವನ್ನು ಅನಾಥಗೊಳಿಸುತ್ತದೆ, ನಿಮ್ಮೊಂದಿಗೆ ನಾನಿದ್ದೇನೆ. ಸರಕಾರ ಇಂಥಹ ಆತ್ಮಹತ್ಯೆ ಪ್ರಕರಣಗಳಿಗೆ ಇತಿಶ್ರೀ ಹಾಡಲೇಬೇಕು. ಶಾಶ್ವತವಾಗಿ ಪರಿಹಾರೋಪಾಯ ಕಂಡುಕೊಳ್ಳಬೇಕು. ಜೀವಬಿಟ್ಟ ರೈತ ಕುಟುಂಬಗಳಿಗೆ ಮಾನವೀಯತೆಯ ನೆರವು ಕೊಡಬೇಕು. ವಿಳಂಬ ಸರಿಯಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.












Click it and Unblock the Notifications