ತಂದೆ ತನ್ನ ಜೀವಿತಾವಧಿಯಲ್ಲಿಯೇ ಗಂಡು ಮಕ್ಕಳಿಗೆ ಆಸ್ತಿ ಮಾರಿದ್ದರೆ ಅದರಲ್ಲಿ ಮಗಳು ಪಾಲು ಕೇಳಬಹುದೇ? ಕಾನೂನು ಏನು ಹೇಳುತ್ತದೆ?
ಭಾರತದಲ್ಲಿ ಆಸ್ತಿ ವಿವಾದಗಳು ಮತ್ತು ಪಾಲು ಹಂಚಿಕೆ ಕುರಿತಾದ ಪ್ರಶ್ನೆಗಳು ಬಹಳ ಸಾಮಾನ್ಯ. ಅದರಲ್ಲೂ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಇರುವ ಹಕ್ಕುಗಳ ಬಗ್ಗೆ ಹಲವು ಗೊಂದಲಗಳಿರುತ್ತವೆ. ಇತ್ತೀಚೆಗೆ ವೈಯಕ್ತಿಕ ಹಣಕಾಸು ಹಾಗೂ ಕಾನೂನು ಸಲಹಾ ವೇದಿಕೆಯಾದ 'ಆಸ್ಕ್ ವಾಲೆಟ್-ವೈಸ್' (Ask Wallet-Wise) ನಲ್ಲಿ ಒಡಿಶಾ ಮೂಲದ ಮಹಿಳೆಯೊಬ್ಬರು ತಮ್ಮ ತಂದೆಯ ಆಸ್ತಿ ಹಂಚಿಕೆ ಕುರಿತು ಒಂದು ಮಹತ್ವದ ಪ್ರಶ್ನೆಯನ್ನು ಕೇಳಿದ್ದಾರೆ. ತಂದೆ ತನ್ನ ಜೀವಿತಾವಧಿಯಲ್ಲಿಯೇ ಸ್ವಯಾರ್ಜಿತ ಆಸ್ತಿಯನ್ನು ಗಂಡು ಮಕ್ಕಳಿಗೆ ಮಾರಾಟ ಮಾಡಿದ್ದರೆ, ಅದರಲ್ಲಿ ಹೆಣ್ಣು ಮಕ್ಕಳು ಪಾಲು ಕೇಳಬಹುದೇ? ಎಂಬುದೇ ಆ ಪ್ರಶ್ನೆ. ಇದಕ್ಕೆ ಕಾನೂನು ತಜ್ಞರು ನೀಡಿದ ಸ್ಪಷ್ಟ ಉತ್ತರ ಇಲ್ಲಿದೆ.
ಮಹಿಳೆ ಕೇಳಿದ ಪ್ರಶ್ನೆ ಹೀಗಿದೆ: "ನಮ್ಮ ಕುಟುಂಬದಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ನಾನು ಮನೆಯ ಹಿರಿಯ ಮಗಳು. ನನ್ನ ಅವಿವಾಹಿತ ತಂಗಿ ಕ್ಯಾನ್ಸರ್‌ನಿಂದಾಗಿ ಎರಡು ವರ್ಷಗಳ ಹಿಂದೆ ನಿಧನಳಾದಳು. ಆಕೆ ತಾಯಿಯೊಂದಿಗೆ ವಾಸಿಸುತ್ತಿದ್ದಳು. 2005ರಲ್ಲಿ ನನ್ನ ತಂದೆ ಒಡಿಶಾದ ಭುವನೇಶ್ವರದಲ್ಲಿರುವ ತಮ್ಮ ಸ್ವಯಾರ್ಜಿತ ಜಾಗವನ್ನು ನನ್ನ ಗಮನಕ್ಕೆ ಬಾರದಂತೆ ನನ್ನ ಇಬ್ಬರು ಕಿರಿಯ ಸಹೋದರರಿಗೆ ಮಾರಾಟ ಮಾಡಿದ್ದಾರೆ. ನಂತರ ನನ್ನ ಸಹೋದರರು ಆ ಜಾಗದಲ್ಲಿ ಮನೆ ಕಟ್ಟಿಕೊಂಡು ಪ್ರಸ್ತುತ ಅಲ್ಲಿಯೇ ವಾಸಿಸುತ್ತಿದ್ದಾರೆ. ಈ ಆಸ್ತಿ ಮಾರಾಟದ ವಿಚಾರ ನನಗೆ ಇತ್ತೀಚೆಗಷ್ಟೇ ತಿಳಿದುಬಂದಿದೆ. 2015ರಲ್ಲಿ ನನ್ನ ತಂದೆ ನಿಧನರಾಗಿದ್ದಾರೆ. ಈಗ ನಾನು ಆ ಆಸ್ತಿಯ ಮೇಲೆ ನನ್ನ ಕಾನೂನುಬದ್ಧ ಹಕ್ಕನ್ನು ಪ್ರತಿಪಾದಿಸಲು ಮತ್ತು ನನ್ನ ಸಹೋದರರಿಂದ ಪಾಲು ಕೇಳಲು ಅವಕಾಶವಿದೆಯೇ?"

ಈ ಪ್ರಶ್ನೆಗೆ ತಜ್ಞರು ನೀಡಿರುವ ಸಲಹೆ ಹಾಗೂ ವಿವರಣೆ ಹೀಗಿದೆ: ಮಹಿಳೆ ಹೇಳಿರುವ ಪ್ರಕಾರ, ಭುವನೇಶ್ವರದಲ್ಲಿರುವ ಜಾಗವು ಅವರ ತಂದೆಯ 'ಸ್ವಯಾರ್ಜಿತ ಆಸ್ತಿ'ಯಾಗಿದೆ. ಹಿಂದೂ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನಿಷ್ಟದಂತೆ ವಿಲೇವಾರಿ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತಾನೆ. ಅವರು ಆ ಆಸ್ತಿಯನ್ನು ಯಾರಿಗಾದರೂ ದಾನವಾಗಿಯೂ ನೀಡಬಹುದು ಅಥವಾ ಮಾರಾಟವನ್ನು ಮಾಡಬಹುದು. ಅಷ್ಟೇ ಅಲ್ಲದೆ, ತನ್ನ ಮರಣದ ನಂತರ ಆಸ್ತಿ ಯಾರಿಗೆ ಸೇರಬೇಕು ಎಂಬುದರ ಕುರಿತು ಉಯಿಲು (Will) ಬರೆದಿಡುವ ಮೂಲಕ ಕಾನೂನುಬದ್ಧ ವಾರಸುದಾರರನ್ನು ಹೊರತುಪಡಿಸಿ ಬೇರೆ ಯಾವುದೇ ಹೊರಗಿನ ವ್ಯಕ್ತಿಗೂ ತನ್ನ ಸ್ವಯಾರ್ಜಿತ ಆಸ್ತಿಯನ್ನು ನೀಡುವ ಹಕ್ಕು ಆ ವ್ಯಕ್ತಿಗೆ ಇರುತ್ತದೆ.
ಒಂದು ವೇಳೆ ವ್ಯಕ್ತಿಯು ಯಾವುದೇ ಮಾನ್ಯವಾದ ಉಯಿಲು ಬರೆಯದೆ ಮೃತಪಟ್ಟರೆ ಮಾತ್ರ, ಅವರ ಕಾನೂನುಬದ್ಧ ವಾರಸುದಾರರು ಮುಂದೆ ಬರುತ್ತಾರೆ. ಆಗ ವಾರಸುದಾರರು ಮೃತರ ಸ್ವಯಾರ್ಜಿತ ಆಸ್ತಿ ಹಾಗೂ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ತಮ್ಮ ಪಾಲನ್ನು ಪಡೆಯಲು ಅರ್ಹರಾಗುತ್ತಾರೆ.
ಆದರೆ, ಇಲ್ಲಿ ಮಹಿಳೆಯ ತಂದೆಯು ತಮ್ಮ ಜೀವಿತಾವಧಿಯಲ್ಲಿಯೇ (2005ರಲ್ಲಿ) ಸ್ವಯಾರ್ಜಿತ ಜಾಗವನ್ನು ಗಂಡು ಮಕ್ಕಳಿಗೆ ಮಾರಾಟ ಮಾಡಿರುವುದರಿಂದ, ಈ ವಿಷಯದಲ್ಲಿ ಮಹಿಳೆಗೆ ಯಾವುದೇ 'ಕಾನೂನುಬದ್ಧ ಹಕ್ಕು' ಇರುವುದಿಲ್ಲ. ಒಂದು ವೇಳೆ ತಂದೆಯು ಆ ಜಾಗವನ್ನು ಗಂಡು ಮಕ್ಕಳಿಗೆ ದಾನವಾಗಿ ನೀಡಿದ್ದರೂ ಅಥವಾ ಮಾನ್ಯವಾದ ಉಯಿಲು ಮೂಲಕ ಬರೆದಿಟ್ಟಿದ್ದರೂ ಸಹ, ಮಗಳಾಗಿ ಆಕೆಗೆ ಅದನ್ನು ಆಕ್ಷೇಪಿಸುವ ಹಕ್ಕು ಇರುತ್ತಿರಲಿಲ್ಲ.
ತಂದೆಯು ಯಾವುದೇ ಮಾನ್ಯವಾದ ಉಯಿಲು ಬರೆಯದೆ ಮೃತಪಟ್ಟಿದ್ದರೆ, ಆ ಸಮಯದಲ್ಲಿ ಅವರ ಹೆಸರಿನಲ್ಲಿದ್ದ ಇತರ ಯಾವುದೇ ಆಸ್ತಿಗಳಿದ್ದರೆ ಮಾತ್ರ ಅದರಲ್ಲಿ ಮಗಳು ತನ್ನ ಪಾಲನ್ನು ಕೇಳಬಹುದಾಗಿದೆ. ಆದರೆ, ತಂದೆ ಬದುಕಿದ್ದಾಗಲೇ ಗಂಡು ಮಕ್ಕಳಿಗೆ ಮಾರಾಟ ಮಾಡಿರುವ ಜಾಗಕ್ಕೆ ಸಂಬಂಧಿಸಿದಂತೆ, ಆ ಮಾರಾಟ ಪ್ರಕ್ರಿಯೆಯನ್ನು ಆಕ್ಷೇಪಿಸುವ ಅಥವಾ ಆ ಆಸ್ತಿಯಲ್ಲಿ ಪಾಲು ಕೇಳುವ ಯಾವುದೇ ಹಕ್ಕು ಮಹಿಳೆಗೆ ಇರುವುದಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಗಮನಿಸಿ: ಇಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ತಜ್ಞರದ್ದಾಗಿದ್ದು, ಯಾವುದೇ ಆರ್ಥಿಕ ಅಥವಾ ಕಾನೂನು ನಿರ್ಧಾರ ತೆಗೆದುಕೊಳ್ಳುವ ಮುನ್ನ ಪ್ರಮಾಣೀಕೃತ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.












Click it and Unblock the Notifications