ಸಂಪುಟ ವಿಸ್ತರಣೆ : ಕಾಂಗ್ರೆಸ್ ಬೇಡಿಕೆ ಇಟ್ಟಿರುವ 5 ಖಾತೆಗಳು!
Recommended Video

ಬೆಂಗಳೂರು, ಮೇ 28 : ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆದರೆ, ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ. ಪ್ರಮುಖ ಖಾತೆಗಳಿಗೆ ಕಾಂಗ್ರೆಸ್-ಜೆಡಿಎಸ್ ನಡುವೆ ಜಟಾಪಟಿ ನಡೆದಿದೆ. ಖಾತೆ ಹಂಚಿಕೆ ಬಿಕ್ಕಟ್ಟು ದೆಹಲಿಗೆ ವರ್ಗಾವಣೆಯಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸದನದಲ್ಲಿ ಬಹುಮತ ಸಾಬೀತು ಮಾಡಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಬಿಕ್ಕಟ್ಟು ಬಗೆಹರಿದಿಲ್ಲ.
ಸರ್ಕಾರ ರಚನೆ ಮಾಡಲು ಬೇಷರತ್ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಈಗ ಹೊಸ-ಹೊಸ ಬೇಡಿಕೆ ಮುಂದಿಡುತ್ತಿದೆ. ಹಣಕಾಸು ಸೇರಿದಂತೆ ಪ್ರಮುಖ 5 ಖಾತೆಗಳಿಗೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ. ಆದರೆ, ಜೆಡಿಎಸ್ ಇನ್ನೂ ಇದಕ್ಕೆ ಒಪ್ಪಿಗೆ ನೀಡಿಲ್ಲ.
2004ರಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಸ್ಥಾನವನ್ನು ಇಟ್ಟುಕೊಂಡು ಉಪ ಮುಖ್ಯಮಂತ್ರಿ, ಹಣಕಾಸು ಖಾತೆಯನ್ನು ಬಿಟ್ಟುಕೊಟ್ಟಿದ್ದೇವೆ. ಆದ್ದರಿಂದ, ಈ ಬಾರಿ ಪ್ರಮುಖ ಖಾತೆಗಳು ನಮಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ. ಆದ್ದರಿಂದ, ಹಗ್ಗ-ಜಗ್ಗಾಟ ನಡೆಯುತ್ತಿದೆ.

ಹಣಕಾಸು ಖಾತೆ
ಹಣಕಾಸು ಖಾತೆ ನೀಡುವಂತೆ ಕಾಂಗ್ರೆಸ್ ಬೇಡಿಕೆ ಇಟ್ಟಿದೆ. ಹಣಕಾಸು ಖಾತೆಯನ್ನು ಮುಖ್ಯಮಂತ್ರಿಗಳ ಬಳಿಯೇ ಇಟ್ಟುಕೊಳ್ಳಲು ಜೆಡಿಎಸ್ ಬಯಸಿತ್ತು. ಮುಖ್ಯಮಂತ್ರಿ ಸ್ಥಾನದ ಬಳಿಕ ಅತೀ ಮಹತ್ವದ ಖಾತೆ ಇದಾಗಿದೆ.
ನಾವು ಚುನಾವಣೆ ಸಮಯದಲ್ಲಿ ಜನರಿಗೆ ಹಲವಾರು ಭರವಸೆ ನೀಡಿದ್ದೇವೆ. ಅವುಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದ್ದರಿಂದ, ಹಣಕಾಸು ಖಾತೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಪಟ್ಟು ಹಿಡಿದಿದ್ದಾರೆ.

ಇಂಧನ ಖಾತೆ
ಕಾಂಗ್ರೆಸ್ ಇಂಧನ ಖಾತೆಯನ್ನು ನೀಡಬೇಕು ಎಂದು ಪಟ್ಟು ಹಿಡಿದಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಖಾತೆ ಸಚಿವರಾಗಿದ್ದರು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲು ಡಿ.ಕೆ.ಶಿವಕುಮಾರ್ ಅವರು ಪ್ರಮುಖ ಕಾರಣ. ಈಗಲೂ ಅವರಿಗೆ ಇಂಧನ ಖಾತೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವ ಆಲೋಚನೆ ಕಾಂಗ್ರೆಸ್ ಪಕ್ಷದಲ್ಲಿದೆ.

ಜಲಸಂಪನ್ಮೂಲ
ಜಲಸಂಪನ್ಮೂಲ ಖಾತೆಯನ್ನು ನೀಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಅದರಲ್ಲೂ ಎಂ.ಬಿ.ಪಾಟೀಲ್ ಅವರು ಜಲಸಂಪನ್ಮೂಲ ಖಾತೆಯನ್ನು ತಮಗೆ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದರು.

ಕಾಂಗ್ರೆಸ್ ಬೇಡಿಕೆ ಇಟ್ಟಿರುವ ಮತ್ತೊಂದು ಖಾತೆ
ಕಾಂಗ್ರೆಸ್ ಕೈಗಾರಿಕೆ ಖಾತೆಗೂ ಬೇಡಿಕೆ ಇಟ್ಟಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರ್.ವಿ.ದೇಶಪಾಂಡೆ ಅವರು ಕೈಗಾರಿಕಾ ಖಾತೆ ಸಚಿವರಾಗಿದ್ದರು. ಈ ಬಾರಿಯೂ ಕಾಂಗ್ರೆಸ್ ಕೈಗಾರಿಕಾ ಖಾತೆಗೆ ಬೇಡಿಕೆ ಇಟ್ಟಿದೆ. ಆದರೆ, ಜೆಡಿಎಸ್ ಪ್ರಮುಖ ಖಾತೆಗಳನ್ನು ನೀಡಲು ಇನ್ನೂ ಒಪ್ಪಿಗೆ ನೀಡಿಲ್ಲ.

ಲೋಕೋಪಯೋಗಿ
ಕಾಂಗ್ರೆಸ್ ಲೋಕೋಪಯೋಗಿ ಖಾತೆಯನ್ನು ಸಹ ತನಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದೆ. ಇದು ಸಹ ಸರ್ಕಾರದಲ್ಲಿ ಪ್ರಭಾವಿ ಖಾತೆಯಾಗಿದೆ.
2004ರಲ್ಲಿ ಮೈತ್ರಿ ಮಾಡಿಕೊಂಡಾಗ ಮುಖ್ಯಮಮಂತ್ರಿ ಸ್ಥಾನವನ್ನು ಇಟ್ಟುಕೊಂಡು ಉಪ ಮುಖ್ಯಮಂತ್ರಿ, ಉಳಿದ ಖಾತೆಗಳನ್ನು ನೀಡಿದ್ದೆವು. ಆದ್ದರಿಂದ, ಈ ಬಾರಿ ಪ್ರಮುಖ ಖಾತೆಗಳು ನಮಗೆ ಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ.












Click it and Unblock the Notifications