ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಹೇಳಿದ ರಹಸ್ಯ ಬಿಚ್ಚಿಟ್ಟ ಬಿ.ಎಸ್.ಯಡಿಯೂರಪ್ಪ
ಮೈಸೂರು, ಮಾರ್ಚ್31: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಮಾತ್ರ ಬಾಕಿ ಉಳಿದಿದೆ. 2023 ರ ವಿಧಾನಸಭಾ ಚುನಾವಣಯೇ ನನ್ನ ಕೊನೆಯ ಚುನಾವಣೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ವರುಣಾ ಕ್ಷೇತ್ರ ಈ ಬಾರೀ ಹೈವೋಲ್ಟೇಜ್ ಕ್ಷೇತ್ರವಾಗಲಿದೆ.
ಈಗಾಗಲೇ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧೆ ನಡೆಸುತ್ತಾರೆ ಎಂಬ ಗೊಂದಲಕ್ಕೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದ್ದು, ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಇತ್ತ ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನ ಸೋಲಿಸಲು ಬಿಜೆಪಿ ವಿಜಯೇಂದ್ರ ಅವರನ್ನ ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಲಿದೆ ಎಂಬ ವಂದತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೆರೆ ಎಳೆದಿದ್ದು, ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಹೇಳಿದ ರಹಸ್ಯವನ್ನ ಬಿಚ್ಚಿಟ್ಟಿದ್ದಾರೆ.

ಹೌದು, ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು, ವರುಣಾದಿಂದ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿತ್ತು. ಆದರೆ ನಾನೇ ವರುಣಾದಿಂದ ಸ್ಪರ್ಧೆ ಬೇಡವೆಂದು ಹೇಳಿದ್ದೇನೆ ಎಂದು ಹೈಕಮಾಂಡ್ ನಾಯಕರು ಹೇಳಿದ ರಹಸ್ಯವನ್ನ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಹೈಕಮಾಂಡ್ ನಾಯಕರು ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಮಾಡಲಿ ಎಂದು ಹೇಳಿದ್ರೂ, ಈ ವಿಚಾರದಲ್ಲಿ ನಾನು ಹೈಕಮಾಂಡ್ ಮನವೊಲಿಸುತ್ತೇನೆ. ಯಾವ ಕಾರಣಕ್ಕೂ ವಿಜಯೇಂದ್ರ ವರುಣಾದಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಕಾರ್ಯಕರ್ತರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ. ಶಿಕಾರಿಪುರ ಬಿಟ್ಟು ಅವರು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ, ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ. ವರುಣಾ ಕ್ಷೇತ್ರದಿಂದ ಒಳ್ಳೆ ಅಭ್ಯರ್ಥಿ ಹಾಕುತ್ತೇವೆ. ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಒಪ್ಪಿಗೆ ಇತ್ತು. ಆದರೆ ನಾನೇ ಶಿಕಾರಿಪುರದಿಂದ ನಿಲ್ಲಬೇಕು ಅಂಥ ಹೇಳಿದ್ದೇನೆ. ಹೈಕಮಾಂಡ್‌ಗೆ ನಾನೇ ಈ ವಿಚಾರದಲ್ಲಿ ಮನವೊಲಿಸುತ್ತೇನೆ ಎಂದು ಹೇಳಿದರು.

ಇನ್ನೂ ವಿಜಯೇಂದ್ರ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ನಾನು ಶಿಕಾರಿಪುರದಿಂದ ಸ್ಪರ್ಧೆ ಮಾಡದ ಕಾರಣ ವಿಜಯೇಂದ್ರ ಅಲ್ಲಿಂದ ಸ್ಪರ್ಧೆ ಮಾಡಬೇಕು. ಇದು ನನ್ನ ನಿರ್ಧಾರ. ವಿಜಯೇಂದ್ರ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಶಿಕಾರಿಪುರ ನನ್ನನ್ನು ಮುಖ್ಯಮಂತ್ರಿ ಮಾಡಿದ ಕ್ಷೇತ್ರ ಆ ಕ್ಷೇತ್ರವನ್ನ ಬಿಡಲು ಸಾಧ್ಯವಿಲ್ಲ. ವರುಣಾದಲ್ಲಿ ಸ್ಪರ್ಧೆ ಮಾಡುವ ವಿಚಾರ ಬೇಡ ಎಂದು ಊಹಾಪೋಹಗಳಿಗೆ ಯಡಿಯೂರಪ್ಪ ಅವರು ತೆರೆ ಎಳೆದರು.












Click it and Unblock the Notifications