ಕರ್ನಾಟಕ; 5, 8, 9, 11ನೇ ತರಗತಿ ಬೋರ್ಡ್ ಪರೀಕ್ಷೆಗಳು ರದ್ದು
ಬೆಂಗಳೂರು, ಮಾರ್ಚ್ 06: 5, 8, 9 ಹಾಗೂ 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಕುರಿತು ಹೊರಡಿಸಿದ್ದ ಸುತ್ತೋಲೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಈ ಶೈಕ್ಷಣಿಕ ವರ್ಷದಿಂದಲೇ ಇದು ಜಾರಿಗೆ ಬರಲಿದೆ.
ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್) ಪರೀಕ್ಷೆಯನ್ನು ನಡೆಸುವ ಕುರಿತು 2023ರಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ)ಯು ಹೊರಡಿಸಿದ್ದ ಸುತ್ತೋಲೆ ರದ್ದಾಗಿದೆ.

ಖಾಸಗಿ ಶಾಲೆಗಳ ಸಂಘಟನೆ ರುಪ್ಸಾ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಸುತ್ತೋಲೆಯನ್ನು ರದ್ದುಗೊಳಿಸಿ ಆದೇಶಿಸಿದೆ.
ನ್ಯಾಯಮೂರ್ತಿ ರವಿ ಹೊಸಮನಿ ಅವರು ಬುಧವಾರ ನೀಡಿರುವ ಆದೇಶದಿಂದಾಗಿ ಮಾರ್ಚ್ 11 ರಿಂದ 18ರ ತನಕ ನಿಗದಿಯಾಗಿದ್ದ 2024-25ನೇ ಸಾಲಿನ ಬೋರ್ಡ್ ಪರೀಕ್ಷೆಗಳು ರದ್ದಾಗಲಿವೆ.
ರಾಜ್ಯ ಸರ್ಕಾರಿ ಶಾಲೆಗಳ ಪಠ್ಯಕ್ರಮ ಬೇರೆ, ಖಾಸಗಿ ಶಾಲೆಗಳ ಪಠ್ಯಕ್ರಮ ಬೇರೆಯಾಗಿದೆ. ಆದ್ದರಿಂದ ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟ ಅರ್ಜಿಯನ್ನು ಸಲ್ಲಿಸಿತ್ತು.
ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಸುತ್ತೋಲೆಯನ್ನು ಪ್ರಶ್ನಿಸಿ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರೂಪ್ಸಾ) ಹಾಗೂ ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ (ಅವರ್ಸ್ ಸ್ಕೋಲ್) ಕರ್ನಾಟಕ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದವು.
ಪರೀಕ್ಷಾ ವ್ಯವಸ್ಥೆ, ಪರೀಕ್ಷೆಗಳನ್ನು ನಡೆಸುವುದು ಹಾಗೂ ಪರೀಕ್ಷಾ ಮಾದರಿಗಳನ್ನು ಜಾರಿಗೆ ತರಬೇಕಾದರೆ ಕರ್ನಾಟಕ ಶಿಕ್ಷಣ ಕಾಯ್ದೆ-1983ರ ಸೆಕ್ಷನ್ 22ರಡಿ ನಿಯಮಗಳನ್ನು ರೂಪಿಸುವುದು ಕಡ್ಡಾಯ. ಆದರೆ ಸರ್ಕಾರ ಅದನ್ನು ಮಾಡದೇ ನೇರವಾಗಿ ಅಧಿಸೂಚನೆ ಹೊರಡಿಸುವ ಮೂಲಕ ಬೋರ್ಡ್ ಪರೀಕ್ಷೆ ನಿಗದಿಪಡಿಸಿದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿತ್ತು.
ಆದರೆ ಸರ್ಕಾರ ಉದ್ದೇಶಿತ ಬೋರ್ಡ್ ಪರೀಕ್ಷೆ ಅಥವಾ ಮೌಲ್ಯಮಾಪನ ಪೂರ್ವಸಿದ್ಧತಾ ಸ್ವರೂಪದ್ದಾಗಿದ್ದು, 10 ಮತ್ತು 12ನೇ ತರಗತಿಗೆ ಎದುರಾಗುವ ಬೋರ್ಡ್ ಪರೀಕ್ಷೆಗೆ ಮಕ್ಕಳನ್ನು ಸನ್ನದಗೊಳಿಸುವ ಉದ್ದೇಶವಿದೆ ಎಂದು ಹೇಳಿತ್ತು. ಆದರೆ ತರಕಾರು ಅರ್ಜಿಯನ್ನು ಪರಿಗಣಿಸಿದ್ದ ಕೋರ್ಟ್ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿತ್ತು.
ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಸುತ್ತೋಲೆಯನ್ನು ರದ್ದುಗೊಳಿಸಿರುವ ಏಕ ಸದಸ್ಯ ಪೀಠದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯಪೀಠದಲ್ಲಿ ಪ್ರಶ್ನಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಗುರುವಾರ ಈ ಕುರಿತು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.












Click it and Unblock the Notifications