5, 8ನೇ ತರಗತಿ ಬೋರ್ಡ್ ಪರೀಕ್ಷೆ; ಮೌಲ್ಯಮಾಪನ ಹೇಗೆ ನಡೆಯಲಿದೆ?
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಕಾರ್ಯವನ್ನು ನಡೆಸುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಯಲ್ಲಿ ಮಾಹಿತಿಗಳನ್ನು ನೀಡಲಾಗಿದೆ.
ಬೆಂಗಳೂರು, ಮಾರ್ಚ್ 21; ಕರ್ನಾಟಕದಲ್ಲಿ ಈ ಬಾರಿಯ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಮೌಲ್ಯಾಂಕನ (ಬೋರ್ಡ್) ಪರೀಕ್ಷೆ ನಡೆಸುವ ವಿವಾದ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ನಡುವೆ ಮಾರ್ಚ್ 27ರಿಂದ ಪರೀಕ್ಷೆಗಳು ಆರಂಭವಾಗಲಿವೆ. ಈ ಹಿನ್ನಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿಯೊಂದನ್ನು ಪ್ರಕಟಿಸಲಾಗಿದೆ.
ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. 2022-23ನೇ ಸಾಲಿನಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಕಾರ್ಯವನ್ನು ನಡೆಸುವ ಬಗ್ಗೆ ಈ ಮಾರ್ಗಸೂಚಿಯಲ್ಲಿ ಮಾಹಿತಿ ನೀಡಲಾಗಿದೆ.

2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27/3/2023 ರಿಂದ ಮೌಲ್ಯಾಂಕನವನ್ನು ನಡೆಸಲು ಕರ್ನಾಟಕ ಹೈಕೋರ್ಟ್ ಅವಕಾಶ ಕಲ್ಪಿಸಿದ್ದು, ಅದರಂತೆ 5 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27/3/2023 ರಿಂದ 30/3/2023ರವರೆಗೆ ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27/3/2023 ರಿಂದ 1/4/2023 ರವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ ಎಂದು ಮಾರ್ಗಸೂಚಿಯಲ್ಲಿ ಮಾಹಿತಿ ನೀಡಲಾಗಿದೆ.
ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಳಿಯ ವೆಬ್‌ಸೈಟ್ https://kseab.karnataka.gov.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಯಾ ಶಾಲೆಗಳನ್ನೇ ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ. ಈ ಮೌಲ್ಯಾಂಕನವು ವಿದ್ಯಾರ್ಥಿಗಳ ಕಲಿಕಾ ಮಟ್ಟ ಕಲಿಕಾ ನ್ಯೂನ್ಯತೆಗಳು, ಕಲಿಕಾ ಪ್ರಗತಿ ಹಾಗೂ ಯಾವ ವಿಷಯದ ಕಲಿಕೆಯಲ್ಲಿ ಎಷ್ಟು ಹಿನ್ನಡೆಯುಂಟಾಗಿದೆ ಎಂಬುದನ್ನು ತಿಳಿಯುವುದಾಗಿದೆ. ಈ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸುವುದಿಲ್ಲ ಹಾಗೂ ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.

ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಈ ಹಿಂದೆ 8ನೇ ತರಗತಿ ಮೌಲ್ಯಮಾಪನ ಕಾರ್ಯವನ್ನು ಅಂತರ್ ಬ್ಲಾಕ್ ಮಟ್ಟದಲ್ಲಿ ನಿರ್ವಹಿಸುವಂತೆ ತಿಳಿಸಲಾಗಿತ್ತು. ದಿನಾಂಕ 31/3/2023 ರಿಂದ ಎಸ್. ಎಸ್. ಎಲ್. ಸಿ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಒಂದು ಬ್ಲಾಕ್‌ನಿಂದ ಮತ್ತೊಂದು ಬ್ಲಾಕ್‌ಗೆ ಪ್ರಶ್ನೆಪತ್ರಿಕೆಗಳನ್ನು ಸಾಗಾಣಿಕೆ ಮಾಡಿ ಮೌಲ್ಯಮಾಪನ ನಡೆಸಿ ಫಲಿತಾಂಶ ನೀಡಲು ಕಾಲಾವಕಾಶದ ಕೊರತೆಯಿರುವುದರಿಂದ 5 ಮತ್ತು 8 ಎರಡೂ ತರಗತಿಗಳ ಮೌಲ್ಯಮಾಪನ ಕಾರ್ಯವನ್ನು ತಾಲ್ಲೂಕು ಕೇಂದ್ರದಲ್ಲಿ ಅಂತರ್ ಕ್ಲಸ್ಟರ್‌ವಾರು ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಅಲ್ಲದೇ ಆಯಾ ತರಗತಿಯ ಮೌಲ್ಯಾಂಕನ ಕಾರ್ಯ ಪೂರ್ಣಗೊಂಡ ನಂತರ ತಮ್ಮ ಬ್ಲಾಕ್ ಹಂತದ ಎಲ್ಲಾ ಶಾಲೆಗಳಿಂದ ಉತ್ತರಿಸಲಾದ ಎಲ್ಲಾ ವಿಷಯಗಳ ಬಂಡಲ್‌ಗಳನ್ನು ಪಡೆದು ತರಗತಿವಾರು ಪ್ರತ್ಯೇಕಿಸಿ ನಿಗದಿಪಡಿಸಲಾದ ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸಬೇಕು. 5ನೇ ತರಗತಿ ಮೌಲ್ಯಮಾಪನ ಕಾರ್ಯವನ್ನು ದಿನಾಂಕ 1/4/2023 ರಿಂದ 5/4/2023ರೊಳಗೆ ಮತ್ತು 8ನೇ ತರಗತಿ ಮೌಲ್ಯಮಾಪನ ಕಾರ್ಯವನ್ನು ದಿನಾಂಕ 2/4/2023 ರಿಂದ 7/4/2023ರೊಳಗಾಗಿ (ರಜಾ ದಿನಗಳನ್ನು ಒಳಗೊಂಡಂತೆ) ಪೂರ್ಣಗೊಳಿಸುವುದು. ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಮರುದಿನವೇ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ತಲುಪಿಸಬೇಕು ಎಂದು ಮಾರ್ಗಸೂಚಿ ಹೇಳಿದೆ.
ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು/ ಪ್ರಾಂಶುಪಾಲರು ವಿದ್ಯಾರ್ಥಿಗಳು ಗಳಿಸಿರುವ ಅಂಕಗಳನ್ನು ಕ್ರೋಢೀಕರಸಿ ಗ್ರೇಡ್‌ಗಳಿಗೆ ಪರಿವರ್ತಿಸಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ನೀಡುವುದು. ಈ ಅಂಶಗಳನ್ನು ಹೊರತುಪಡಿಸಿ ಉಳಿದಂತೆ ದಿನಾಂಕ 27/2/2023ರ ಮಾರ್ಗಸೂಚಿಯಂತೆ ಕ್ರಮವಹಿಸಿ ಮೌಲ್ಯಾಂಕನವನ್ನು ಯಶಸ್ವಿಗೊಳಿಸುವಂತೆ ಮಾರ್ಗಸೂಚಿ ಮೂಲಕ ಸೂಚನೆ ನೀಡಲಾಗಿದೆ.
ಸುಪ್ರೀಂಕೋರ್ಟ್‌ಗೆ ಅರ್ಜಿ; 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ (ಬೋರ್ಡ್) ಪರೀಕ್ಷೆ ನಡೆಸಲು ಕರ್ನಾಟಕ ಹೈಕೋರ್ಟ್ ನೀಡಿದ ಷರತ್ತುಬದ್ಧ ಅನುಮತಿಯನ್ನು ಪ್ರಶ್ನಿಸಿ ಸೋಮವಾರ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದೆ. ಸೋಮವಾರವೇ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಲಾಗಿತ್ತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಪೀಠದ ಮುಂದೆ ಖಾಸಗಿ ಶಾಲೆಗಳ ಪರವಾಗಿ ವಾದ ಮಂಡನೆ ಮಾಡಿದ ವಕೀಲರು ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದರಿಂದ ಮೌಲ್ಯ ಮಾಪನ ವಿಧಾನವು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಾದ ಮಂಡಿಸಿದ್ದಾರೆ.












Click it and Unblock the Notifications