Namma Metro: ಆರ್‌ವಿ.ರಸ್ತೆ-ಬೊಮ್ಮಸಂದ್ರ ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ: ಇಂದಿನಿಂದ 5ನೇ ರೈಲು ಸೇವೆ
ಬೆಂಗಳೂರು, ನವೆಂಬರ್ 01: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು ಉದ್ಘಾಟನೆಯಾಗಿ ಮೂರು ತಿಂಗಳು ಕಳೆಯುತ್ತಾ ಬಂತು. ಇನ್ನೂ ಯಾವಾಗ ಹೆಚ್ಚುವರಿ ರೈಲುಗಳ ಸಂಚಾರ ಆಗಲಿದೆ? ಎಂದು ಕಾಯುತ್ತಿದ್ದ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯೋತ್ಸವ ದಿನದಂದೇ ಮತ್ತೊಂದು ರೈಲು ಕಾರ್ಯಾಚರಣೆ ಆರಂಭಿಸಿದೆ. ಇದರಿಂದಾಗಿ ಈ ಮಾರ್ಗದ ರೈಲು ಆವರ್ತನ ಸಮಯ ಇಳಿಕೆ ಆದರೆ, ರೈಲುಗಳ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನೀಡಿರುವ ಮಾಹಿತಿ ಪ್ರಕಾರ, 2025 ನವೆಂಬರ್ 01ರಿಂದ ಹಳದಿ ಮಾರ್ಗದಲ್ಲಿ ಐದನೇ ಮೆಟ್ರೋ ರೈಲು ಕರ್ನಾಟಕ ರಾಜ್ಯೋತ್ಸವದ 70ನೇ ವರ್ಷದ ಆಚರಣೆ ಈ ಸಂದರ್ಭದಲ್ಲಿ ಸೇವೆ ಆರಂಭಿಸಿದೆ. ಇಂದಿನಿಂದ (1ನೇ ನವೆಂಬರ್) ಹಳದಿ ಮಾರ್ಗದ ಸುಮಾರು 70,000 ಪ್ರಯಾಣಿಕರಿಗೆ ಐದನೇ ಮೆಟ್ರೋ ರೈಲಿನ ವಾಣಿಜ್ಯ ಸೇವೆ ಲಭ್ಯವಾಗಿದೆ.

ಮೂರು ರೈಲುಗಳು ಸಂಚರಿಸುವಾಗಿ ಪ್ರತಿ ರೈಲಿಗಾಗಿ ಪ್ರಯಾಣಿಕರು 25 ನಿಮಿಷ ಕಾಯಬೇಕುತ್ತು. ನಂತರ ನಾಲ್ಕನೇ ರೈಲಿನ ಆಗಮನದಿಂದ ಈ ರೈಲು ಆವರ್ತನ ಸಮಯ 19 ನಿಮಿಷಕ್ಕೆ ಇಳಿಕೆ ಆಯಿತು. ಇದೀಗ ಐದನೇ ರೈಲಿನ ಸೇವೆ ಆರಂಭವಾಗಿದ್ದರಿಂದ ಪ್ರಯಾಣಿಕರು ರೈಲಿಗಾಗಿ ಕಾಯುವ ಸಮಯ 15 ನಿಮಿಷಕ್ಕೆ ಇಳಿಕೆ ಆಗಿದೆ. ಪ್ರಯಾಣಿಕರಿಗೆ ಕಡಿಮೆ ಸಮಯದಲ್ಲಿ ಸುಗಮ ಮತ್ತು ನಿರಂತರ ಸೇವೆಗೆ ಸಹಾಯವಾಗುತ್ತಿದೆ. ಈ ಬದಲಾವಣೆ ಎಲ್ಲಾ ದಿನಗಳಿಗೆ ಅನ್ವಯವಾಗುತ್ತದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ದೈನಂದಿನ ಪ್ರಯಾಣಿಕರ ಸಂಖ್ಯೆ ಏರಿಕೆ
ಸುಮಾರು 19 ಕಿಲೋ ಮೀಟರ್ ಉದ್ದದ ಈ ಆರ್.ವಿ. ರಸ್ತೆ- ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಆಯ್ಕೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಪ್ರಯಾಣಿಕರು ಈ ಬದಲಾವಣೆಯನ್ನು ಗಮನಿಸಿ, ಸುಧಾರಿತ ಮೆಟ್ರೋ ಸೇವೆಗಳ ಸದುಪಯೋಗ ಪಡೆಯುವಂತೆ ವಿನಂತಿಸಲಾಗಿದೆ. ಈ ಹಿಂದೆ ಒಂದೆರಡು ಬಾರಿ ಈ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಆಗಿದ್ದು ಬಿಟ್ಟರೆ ಯಾವುದೇ ಸಂಚಾರ ಸಮಸ್ಯೆ ಆಗಿಲ್ಲ. ಪ್ರಧಾನಿ ಮೋದಿಯವರು ಆಗಸ್ಟ್ 10ರಂದು ಈ ಮಾರ್ಗ ಉದ್ಘಾಟಿಸಿದ ಬಳಿಕ ದಿನೇ ದಿನೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಲಿ ಗರಿಷ್ಠ 70 ಸಾವಿರ ಪ್ರಯಾಣಿಕರು ನಿತ್ಯ ಈ ಹಳದಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಐದನೇ ರೈಲಿನ ಆಗಮನದಿಂದ ಮುಂದಿನ ದಿನಗಳಲ್ಲಿ ಈ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆದರೂ ಅಚ್ಚರಿ ಇಲ್ಲ.












Click it and Unblock the Notifications