ಬಿಎಸ್‌ವೈ, ಬೊಮ್ಮಾಯಿ ಅನುಪಸ್ಥಿತಿಯಲ್ಲಿ ಸಭೆ ನಡೆಸಿದ ಬಿಎಲ್ ಸಂತೋಷ್: ಸಂತಸ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್- ಕಾರಣವೇನು?
ಬೆಂಗಳೂರು, ಸೆಪ್ಟೆಂಬರ್ 02: ಮಾಜಿ ಸಿಎಂಗಳಾದ ಬಿಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅನುಪಸ್ಥಿತಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ( ಸಂಘಟನೆ ) ಬಿಎಲ್ ಸಂತೋಷ್ ಸಭೆ ನಡೆಸಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ.
ಬಿಎಲ್ ಸಂತೋಷ್ ಅವರು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ನಾಯಕರ ಪೂರ್ವಸಿದ್ಧತಾ ಸಭೆ ನಡೆಸಿದ್ದಾರೆ. ಹಲವು ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಎಲ್ ಸಂತೋಷ್ ಈ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಇದು ರಾಜ್ಯದಲ್ಲಿ ಬಹುದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಈ ಸಭೆಯ ಕುರಿತು ಮಾತನಾಡಿರುವ ಬಿಎಸ್‌ವೈ ಬೆಂಬಲಿಗರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಂತೋಷ್ ಕಾರಣ ಎಂದು ಆರೋಪಿಸಿದ್ದಾರೆ.
ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕರು
40ರಿಂದ 45 ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಂತೋಷ್ ಹೇಳಿರುವುದಕ್ಕೆ ಕಾಂಗ್ರೆಸ್ ನಾಯಕರು ಸಹ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, 'ಕಾಂಗ್ರೆಸ್‌ನ ನಗರಸಭೆ ಸದಸ್ಯರೂ ಸಂತೋಷ್ ಸಂಪರ್ಕದಲ್ಲಿಲ್ಲ. ಯಾರೂ ಬಿಜೆಪಿಗೆ ಸೇರಲು ಬಯಸುವುದಿಲ್ಲ ಏಕೆಂದರೆ ಅದು ಅವರನ್ನು ಬಳಸಿಕೊಳ್ಳುತ್ತದೆ ಮತ್ತು ಬಳಸಿ ಬೀಸಾಡುತ್ತದೆ. ಯಡಿಯೂರಪ್ಪನವರನ್ನೂ ಸಹ ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಲಾಗಿತ್ತು' ಎಂದು ಹೇಳಿದ್ದಾರೆ.

ಮಾಜಿ ಸಚಿವರಾದ ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ವಿ ಸೋಮಣ್ಣ ಸಭೆಗೆ ಗೈರುಹಾಜರಾದ ಬಗ್ಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಸಂತೋಷ್ ಅವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಸಂತೋಷ್ ನೀಡಿರುವ ಹೇಳಿಕೆ ಬಿಜೆಪಿ ನಾಯಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಗಿಮಿಕ್ ಎಂದು ಕಿಡಿಕಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಸಂತೋಷ್ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದರೆ ಸಂತೋಷವಾಗುತ್ತದೆ' ಎಂದು ಹೇಳಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು, 'ಸಂತೋಷ್ ನಾಯಕತ್ವದಲ್ಲಿ ಪಕ್ಷ ಸೋಲು ಕಂಡಿದೆ. ಇದರ ಹತಾಶೆಯಿಂದ ಸಂತೋಷ್ ಹೇಳಿಕೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.
ರೇಣುಕಾಚಾರ್ಯ ಆಕ್ರೋಶ
ಬಿಜೆಪಿಯ ಮಾಜಿ ಸಚಿವ, ಬಿಎಸ್ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಎಂಪಿ ರೇಣುಕಾಚಾರ್ಯ ಅವರು ಸಹ ಸಂತೋಷ್ ವಿರುದ್ಧ ಕಿಡಿಕಾರಿದ್ದಾರೆ.
ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ನಾಯಕರನ್ನು ಹೊರಗಿಡಲಾಗಿದೆ. ಇದಕ್ಕೆ ಸಂತೋಷ್ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
'2007ರಲ್ಲಿ ಸಂಘಪರಿವಾರದಿಂದ ಬಿಜೆಪಿಗೆ ಪ್ರವೇಶಿಸಿದ ಅವರು (ಸಂತೋಷ್) ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಲಿಲ್ಲ. ಆದರೆ ಅವರು ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಜನರಿಂದ ಆಯ್ಕೆಯಾಗದ ಅವರು ಪಕ್ಷದ ಮೇಲೆ ಹಿಡಿತ ಸಾಧಿಸಲು ಹೇಗೆ ಸಾಧ್ಯ' ಎಂದು ಎಂ ಪಿ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.












Click it and Unblock the Notifications