ಬಿಜೆಪಿಗೆ ಪ್ರತಿಪಕ್ಷ ಸ್ಥಾನ, ಬುಧವಾರ ಅಂತಿಮ ತೀರ್ಮಾನ
ಬೆಂಗಳೂರು, ಜ.21 : ಬುಧವಾರದಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ವಿಧಾನಸಭೆಯಲ್ಲಿ ಪ್ರತಿಪಕ್ಷ ಯಾವುದು ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿ-ಕೆಜೆಪಿ ವಿಲೀನವಾಗಿರುವುದರಿಂದ ಬಿಜೆಪಿಯ ಬಲಾಬಲ ಹೆಚ್ಚಿದ್ದು, ಅದು ಪ್ರತಿಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಈ ಕುರಿತು ಸದನದಲ್ಲಿ ಸ್ಪೀಕರ್ ಅಧಿಕೃತ ಘೋಷಣೆ ಮಾಡಬೇಕಾಗಿದೆ.
ಬುಧವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ ನಂತರ ವಿಧಾನ ಮಂಡಲದ ಉಭಯ ಸದನಗಳ ಕಲಾಪ ಆರಂಭವಾಗಲಿದೆ. ಕಲಾಪ ಆರಂಭಕ್ಕೂ ಮೊದಲು ಸ್ಪೀಕರ್ ಕಾಗೋಡು ತಿಮ್ಮಪ್ಪ ವಿಧಾನಸಭೆಯ ಪ್ರತಿಪಕ್ಷ ಯಾವುದು ಎಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಸದ್ಯ ಜೆಡಿಎಸ್ ಪ್ರತಿಪಕ್ಷ ಸ್ಥಾನದಲ್ಲಿದೆ ಕುಳಿತಿದೆ.[ಬಿಜೆಪಿಗೆ ಪ್ರತಿಪಕ್ಷ ಸ್ಥಾನ]

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ. ಆ ಕುರಿತ ಪತ್ರವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ನೀಡಿದ್ದಾರೆ. ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ನಾಲ್ವರು ಶಾಸಕರು ತಮ್ಮನ್ನು ಬಿಜೆಪಿ ಶಾಸಕಾಂಗ ಪಕ್ಷದ ಸದಸ್ಯರೆಂದು ಪರಿಗಣಿಸುವಂತೆ ಸ್ಪೀಕರ್‌ಗೆ ಪತ್ರ ಸಲ್ಲಿದ್ದಾರೆ. ಆದ್ದರಿಂದ ವಿಧಾನಸಭೆಯಲ್ಲಿ ಬಿಜೆಪಿಯ ಸದಸ್ಯಬಲ ಹೆಚ್ಚಾಗಿದೆ. [ಬುಧವಾರದಿಂದ ವಿಧಾನಮಂಡಲ ಅಧಿವೇಶನ]
ಬಿಜೆಪಿ ಸಹ ಸ್ಪೀಕರ್ ಅವರಿಗೆ ಕೆಜೆಪಿ ವಿಲೀನದ ನಂತರ ವಿಧಾನಸಭೆಯಲ್ಲಿ ನಮ್ಮ ಬಲಾಬಲ ಹೆಚ್ಚಿದ್ದು, ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನ ಮಾನ ನೀಡುವಂತೆ ಮನವಿ ಮಾಡಿದ್ದಾರೆ. ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನಕುಮಾರ್ ತಕರಾರು ಸಲ್ಲಿಸಿರುವುದರಿಂದ ಪ್ರತಿಪಕ್ಷ ಸ್ಥಾನ ನೀಡುವುದು ವಿಳಂಬವಾಗಬಹುದೇ ಎಂಬ ಕುತೂಹಲ ಮೂಡಿದೆ.
ಕೆಜೆಪಿ ಮತ್ತು ಬಿಜೆಪಿ ವಿಲೀನದ ಕುರಿತು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕಾನೂನು ತಜ್ಞರೊಂದಿಗೂ ಸಮಾಲೋಚನೆ ನಡೆಸಿದ್ದಾರೆ. ಕೇಂದ್ರ ಚುನಾವಣಾ ಆಯೋಗದಿಂದಲೂ ಮಾಹಿತಿ ಪಡೆದಿದ್ದಾರೆ. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅವರು ಸದನದಲ್ಲೇ ತಮ್ಮ ನಿರ್ಧಾರ ಪ್ರಕಟಿಸಬೇಕಾಗಿರುವುದರಿಂದ ಬುಧವಾರ ಈ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಬಿಜೆಪಿಗೆ ಪ್ರತಿಪಕ್ಷದ ಸ್ಥಾನ ಸಿಕ್ಕರೆ, ಶಾಸಕಾಂಗ ಪಕ್ಷದ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರತಿಪಕ್ಷದ ನಾಯಕರಾಗಲಿದ್ದು, ಉಪನಾಯಕನ ಸ್ಥಾನವನ್ನು ಸದ್ಯಕ್ಕೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅಲಂಕರಿಸುವ ಸಾಧ್ಯತೆ ಹೆಚ್ಚಾಗಿದೆ. ಉಪನಾಯಕನ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಸೇರಿದ ಹಿರಿಯ ಮುಖಂಡ ಗೋವಿಂದ ಕಾರಜೋಳ ಅವರಿಗೆ ನೀಡುವ ಮಾತುಗಳು ಕೇಳಿಬರುತ್ತಿವೆ.
ಪ್ರಸ್ತುತ ವಿಧಾನಸಭೆಯಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು 40 ಸ್ಥಾನ ಹೊಂದಿವೆ. ಆದರೆ, ಮತ ಗಳಿಕೆಯ ಆಧಾರದಲ್ಲಿ ಜೆಡಿಎಸ್‌ಗೆ ಅಧಿಕೃತ ಪ್ರತಿಪಕ್ಷದ ಸ್ಥಾನ ದೊರೆತಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಕ್ಷ ನಾಯಕರು. ಬಿಜೆಪಿಯಲ್ಲಿ ಕೆಜೆಪಿ ವಿಲೀನದ ನಂತರ ಬಿಜೆಪಿಯು ಜೆಡಿಎಸ್‌ಗಿಂತ ಹೆಚ್ಚು ಸದಸ್ಯರನ್ನು ಸಂಪಾದಿಸಲಿದೆ.












Click it and Unblock the Notifications