40 ವರ್ಷಗಳಲ್ಲಿ ಸಿದ್ದರಾಮಯ್ಯ ಇಂತಹ ಅವಮಾನವನ್ನು ಎಂದೂ ಅನುಭವಿಸಿಲ್ಲ: ಬಿಜೆಪಿ
ಬೆಂಗಳೂರು, ನವೆಂಬರ್ 22: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಅರ್ಜಿ ಅಸ್ತ್ರಕ್ಕೆ ಹೆದರಿ, ತಮ್ಮ ಆಪ್ತರ ಮೂಲಕ ಅರ್ಜಿ ಹಾಕಿಸಿದ್ದಾರೆ. ಅದರಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಎನ್ನುವುದು ನಮೂದಾಗಿಲ್ಲ. ಅಂದರೆ, ಕಾಂಗ್ರೆಸ್ ಕರಪ್ಟ್ ಸೊಸೈಟಿಗೆ ಸಿದ್ದರಾಮಯ್ಯ ಬ್ಲಾಂಕ್ ಚೆಕ್ ನೀಡಿದ್ದಾರೆ. ಇದು ಪಾಸೋ, ಬೌನ್ಸೋ ಅನ್ನೋದು ರಾಜ್ಯದ ಜನತೆ ಕಾದು ನೋಡಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದೆ. "75 ವರ್ಷಗಳ ಸಿದ್ದರಾಮಯ್ಯನವರು ತಮ್ಮ 40 ವರ್ಷಗಳ ರಾಜಕೀಯ ಬದುಕಿನಲ್ಲಿ ಇಂತಹ ಹದಗೆಟ್ಟ ಹಾಗೂ ಅವಮಾನವನ್ನು ಎಂದೂ ಅನುಭವಿಸಿಲ್ಲ. ಹಿರಿಯ ರಾಜಕಾರಣಿಯಾಗಿರುವ ಅವರು ರಾಜ್ಯದ ಯಾವ ಭಾಗದಲ್ಲಿ ಬೇಕಾದರೂ ನಿಂತು ಗೆಲ್ಲುವವನೇ ನಾಯಕ ಎಂದು ಘರ್ಜಿಸಿದ್ದರು," ಎಂದು ಬಿಜೆಪಿ ವ್ಯಂಗ್ಯವಾಡಿದೆ.
"ಕನಕಪುರ ಹೊರತಾಗಿ ಎಲ್ಲೂ ಪ್ರಭಾವ ಹೊಂದಿರದ ಡಿ.ಕೆ ಶಿವಕುಮಾರ್ ಎನ್ನುವ ಬಂಡೆ..ಅಲ್ಲಲ್ಲಾ ಬಂಡೆ ಚೂರಿಗೆ ಹೆದರಿ ತಮ್ಮ ಆಪ್ತ ಕಾರ್ಯದರ್ಶಿಗಳ ಮೂಲಕ ವಿಧಾನಸಭೆಯ ಟಿಕೆಟ್‌ಗಾಗಿ ಅರ್ಜಿ ಹಾಕಿಸಿದ್ದಾರೆ ಎಂದರೆ, ಸಿದ್ದರಾಮಯ್ಯನವರ ಪರಿಸ್ಥಿತಿ ಹೇಗಿರಬೇಡ. ಅರ್ಜಿಯಲ್ಲಿರುವ ಕ್ಷೇತ್ರದ ಕಾಲಮ್‌ನಲ್ಲಿ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲೇ ಸ್ಪರ್ಧೆ ಎನ್ನುವುದನ್ನು ನಮೂದಿಸಿರುವುದನ್ನು ನೋಡಿದರೆ, ಕನಕಪುರ ಎನ್ನುವ ಜೆಲ್ಲಿ ಕಲ್ಲು ಸಿದ್ದರಾಮಯ್ಯ ಅವರ ಮುಖಕ್ಕೆ ಸರಿಯಾಗಿ ಬಿದ್ದಿದೆ ಎನ್ನುವುದು ಜರೂರಾಗಿದೆ. ಪಾಪ ಎಂತಹ ದೀನ ಸ್ಥಿತಿ ಇವರದು", ಎಂದು ಬಿಜೆಪಿ ವ್ಯಂಗ್ಯ ಮಾಡಿದೆ.

ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್‌ಗಾಗ ಅರ್ಜಿ ಸಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶ ಹೊರಡಿಸಿದ್ದರು. ಅದರಂತೆ ರಾಜ್ಯದ ಮೂಲೆ ಮೂಲೆಯ ಕಾಂಗ್ರೆಸ್ ನಾಯಕರು ತಮ್ಮ ತಮ್ಮ ಕ್ಷೇತ್ರಗಳನ್ನು ನಮೂದಿಸಿ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ನವೆಂಬರ್ 21 ಕಾಂಗ್ರೆಸ್ ಟಿಕೆಟ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಕೊನೆಯ ಕ್ಷಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅರ್ಜಿಸಲ್ಲಿಸಿದ್ದಾರೆ.

ತಮ್ಮ ಆಪ್ತ ಸಹಾಯಕರ ಮೂಲಕ ಅರ್ಜಿ ಸಲ್ಲಿಸಿರುವ ಸಿದ್ದರಾಮಯ್ಯ, ತಾವು ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎನ್ನುವ ಗೊಂದಲದಿಂದ ಹೊರಬಂದಂತೆ ಕಾಣುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಪಕ್ಷಕ್ಕೆ ಟಿಕೆಟ್‌ಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ತಾವು ಸ್ಪರ್ಧಿಸುವ ಕ್ಷೇತ್ರದ ಹೆಸರು ನಮೂದಿಸದೇ, ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರದ ಆಯ್ಕೆ ಎಂದು ದಾಖಲಿಸಿದ್ದಾರೆ ಎನ್ನಲಾಗಿದೆ. ಸದ್ಯ ಇದು ಬಿಜೆಪಿಗೆ ಟೀಕೆಯ ಅಸ್ತ್ರವಾಗಿದೆ. ಇನ್ನು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದೆ.












Click it and Unblock the Notifications