ಡಿವಿಎಸ್ ಮೈಸೂರಿಗೆ, ಅಶೋಕ್ ಉತ್ತರಕ್ಕೆ?
ಬೆಂಗಳೂರು, ಫೆ.19 : ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದೆ. ಭಾರೀ ಪೈಪೋಟಿ ಎದುರಾಗಿರುವ ಬೆಂಗಳೂರು ಉತ್ತರ ಮುಂತಾದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಧ್ಯಾಹ್ನ 4 ಗಂಟೆಗೆ ಕೋರ್ ಕಮಿಟಿ ಸಭೆ ಆರಂಭವಾಗಿದ್ದು, ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಗುತ್ತಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. [ಬಿಜೆಪಿಗೆ ಕಗ್ಗಂಟಾದ ಚಿಕ್ಕಬಳ್ಳಾಪುರ ಕ್ಷೇತ್ರ]

ತೀವ್ರ ಪೈಪೋಟಿ ಉಂಟಾಗಿರುವ ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ ಮುಂತಾದ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಜಿಲ್ಲೆಯ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಆದ್ದರಿಂದ ಇಂದಿನ ಸಭೆಯಲ್ಲಿ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.
ಡಿವಿಎಸ್ ಮೈಸೂರಿಗೆ : ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡುವ ಕುರಿತು ಚಿಕ್ಕಮಗಳೂರು ಜಿಲ್ಲಾ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅದೇರೀತಿ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. [ಅಶೋಕ್ ಶಕ್ತಿ ಪ್ರದರ್ಶನ]
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಡಿವಿ ಸದಾನಂದ ಗೌಡರನ್ನು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಇಂದಿನ ಸಭೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ನಾಯಕರು ತೀರ್ಮಾನಿಸಿದ್ದಾರೆ.
ಮೋದಿ ಸಮಾವೇಶದ ಕುರಿತು ಚರ್ಚೆ : ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಫೆ.28ರಂದು ಗುಲ್ಬರ್ಗ ಮತ್ತು ಹುಬ್ಬಳ್ಳಿಯಲ್ಲಿ ಭಾರತ ಗೆಲ್ಲಿಸಿ ಸಮಾವೇ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶಗಳನ್ನು ಯಶಸ್ವಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. [ ಮಂಗಳೂರು, ದಾವಣಗೆರೆಯಲ್ಲಿ ಮೋದಿ ಹೇಳಿದ್ದೇನು]












Click it and Unblock the Notifications