ಗಡಿಯಲ್ಲಿ ಬಲಿದಾನ: ಹುತಾತ್ಮ ಸೈನಿಕರಿಗೆ ಬಿಜೆಪಿ ನಾಯಕರ ಸಂತಾಪ!
ಬೆಂಗಳೂರು, ಜೂ. 17: ಭಾರತದ ಗಡಿಯೊಳಗೆ ನುಗ್ಗಿದ್ದ ಚೀನಾ ಸೇನೆಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. ಆದರೆ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, ಇನ್ನೂ 4 ಸೈನಿಕರ ಸ್ಥಿತಿ ಚಿಂತಾಜನಕವಾಗಿದೆ. ಚೀನಾ ಸೇನೆಯ 43 ಸೈನಿಕರನ್ನು ನಮ್ಮ ಸೇನೆ ಹತ್ಯೆ ಮಾಡಿದೆ. ಕೊರೊನಾ ವೈರಸ್ ಸಂಕಷ್ಟದಲ್ಲಿ ಚೀನಾ ಉದ್ಧಟತನ ಮೆರೆದಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ಕೊಟ್ಟಿದೆ.
Recommended Video
ಸಂಕಷ್ಟದ ಸಂದರ್ಭದಲ್ಲಿಯೂ ರಾಜಕೀಯ ಭಿನ್ನಾಭಿಪ್ರಾಯಗಳು ಬಂದಿವೆ. ಚೀನಾ ಕೃತ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ವಿರೋಧ ಪಕ್ಷಗಳ ನಾಯಕರು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರು ಹೇಳಿಕೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಬೆನ್ನಿಗೆ ನಿಂತಿದ್ದಾರೆ. ಘರ್ಷಣೆಯಲ್ಲಿ ಹುತಾತ್ಮರಾದ ಸೈನಿಕರ ಬಲಿದಾನಕ್ಕೆ ರಾಜ್ಯ ಬಿಜೆಪಿ ನಾಯಕರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳಿರುವ ಪ್ರಶ್ನೆಗೆ ರಾಜ್ಯ ಬಿಜೆಪಿ ನಾಯಕರು ಉತ್ತರ ಕೊಟ್ಟಿದ್ದಾರೆ. ಕೇಂದ್ರ ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ, ರಾಹುಲ್ ಗಾಂಧಿ ಸೇರಿದಂತೆ ಹಲವರು ಪ್ರಧಾನಿ ಮೌನವನ್ನು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನಾಯಕರು ಹೇಳಿಕೆಗಳು ಹೀಗಿವೆ.

ಸಿಎಂ ಯಡಿಯೂರಪ್ಪ
ಭಾರತ ಮತ್ತು ಚೀನಾ ಗಡಿಯ ಗಾಲ್ವಾನ್ ಕಣಿವೆಯಲ್ಲಿ ದೇಶ ರಕ್ಷಣೆಯ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ, ಹುತಾತ್ಮರಾದ ನಮ್ಮ ಸೈನಿಕರ ಶೌರ್ಯ, ತ್ಯಾಗ, ಬಲಿದಾನಗಳಿಗೆ ಅನಂತ ಪ್ರಣಾಮಗಳು.
ನಮ್ಮ ಸೈನಿಕರ ಜೊತೆಗೆ ಇಡೀ ದೇಶ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸಚಿವ ಡಾ. ಸುಧಾಕರ್
ಗಾಲ್ವಾನ್ ವ್ಯಾಲಿ ನಲ್ಲಿ ನಡೆದ ಭಾರತ ಚೀನಾ ಸಂಘರ್ಷದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಪ್ರತಿಯೊಬ್ಬ ಭಾರತೀಯ ನಾಗರಿಕ ಋಣಿ , ಭಾರತೀಯರ ತಾಳ್ಮೆ ದೌರ್ಬಲ್ಯವಲ್ಲ , ನಮ್ಮ ದೇಶದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ವಿಚಾರದಲ್ಲಿ ನಾವೆಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲವೆಂದು ಚೀನಾಕ್ಕೆ ಖಡಕ್ಕಾಗಿ ಸಂದೇಶ ತಲುಪಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿಕೆ ಕೊಟ್ಟಿದ್ದಾರೆ.
ಗಾಲ್ವಾನ್ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬುರವರ ತಾಯಿಯ ಮಾತು, "ತಾಯಿಯಾಗಿ ನಾನು ತುಂಬಾ ದುಃಖಿತಳಾಗಿದ್ದೇನೆ, ಆದರೂ ನನ್ನ ಮಗ ದೇಶವನ್ನು ರಕ್ಷಿಸುವಾಗ ಹುತಾತ್ಮನಾದ ಎಂದು ನನಗೆ ಹೆಮ್ಮೆ ಇದೆ!" ಆ ಧೀರ ತಾಯಿಗೆ ನಮನಗಳು. ಪ್ರತಿ ಭಾರತೀಯ ಸೈನಿಕನ ಹಿಂದೆ ಆತನ ಕುಟುಂಬ ಮತ್ತು ಭಾರತೀಯರ ದೇಶಭಕ್ತಿಯ ಶಕ್ತಿಯಿದೆ ಎಂದು ಡಾ. ಸುಧಾಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ
ಭಾರತ ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ವೀರ ಮರಣ ಹೊಂದಿದ ಭಾರತೀಯ ಸೇನೆಯ ವೀರಪುತ್ರರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ. ಅಶ್ವಥ್ ನಾರಾಯಣ
ಗಾಲ್ವಾನ್ ಕಣಿವೆಯಲ್ಲಿ ರಾಷ್ಟ್ರ ರಕ್ಷಣೆಯ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ನಮ್ಮ ಕೆಚ್ಚೆದೆಯ ವೀರ ಸೈನಿಕರಿಗೆ ನನ್ನ ಅನಂತ ಪ್ರಣಾಮಗಳು. ನಿಮ್ಮ ತ್ಯಾಗ, ಬಲಿದಾನಕ್ಕೆ ನಾವು ಎಂದೆಂದಿಗೂ ಚಿರಋಣಿ.
ಅವರ ಕುಟುಂಬದವರಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸಂತಾಪ ವ್ಯಕ್ತಪಡಿಸಿದ್ದಾರೆ.

ನಳೀನ್ ಕುಮಾರ್ ಕಟೀಲ್
ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ದುಃಖವಿದೆ ಆದರೆ ಮಗ ದೇಶಕ್ಕಾಗಿ ಹುತಾತ್ಮನಾಗಿದ್ದಕ್ಕೆ ಹೆಮ್ಮೆಯಿದೆ ಎಂದ ಕರ್ನಲ್ ಸಂತೋಷ್ ಬಾಬು ತಾಯಿ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಶ್ಲಾಘಿಸಿದ್ದಾರೆ.
ತಾಯಿ ಭಾರತಿಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಮುಡಿಪಿಟ್ಟು ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಕಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ರಮೇಶ್ ಜಾರಕಿಹೊಳಿ
ಲಡಾಖ್ ಪ್ರಾಂತ್ಯದ ಗಡಿಯ ಗಾಲ್ವಾನ್ ಕಣಿವೆಯಲ್ಲಿ ದೇಶ ರಕ್ಷಣೆಯ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಹುತಾತ್ಮರಾದ ನಮ್ಮ ಭಾರತೀಯ ಸೈನಿಕರ ಶೌರ್ಯ, ತ್ಯಾಗ, ಬಲಿದಾನಗಳಿಗೆ ನನ್ನ ಅನಂತ ಪ್ರಣಾಮಗಳು.
ವಾಸ್ತವ ನಿಯಂತ್ರಣ ರೇಖೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರ ಮೇಲೆ ಅಪ್ರಚೋದಿತ ಆಕ್ರಮಣ ಖಂಡನೀಯ. ಸಾರ್ವಭೌಮತ್ವ ಹಾಗೂ ಸಮಗ್ರತೆ ಕಾಯ್ದುಕೊಳ್ಳಲು ನಮ್ಮ ದೇಶ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೆ.ಎಸ್. ಈಶ್ವರಪ್ಪ
ದೇಶಕ್ಕಾಗಿ ಹುತಾತ್ಮರಾದ ವೀರ ಯೋಧರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಗಳು. ಭಾರತ ಮಾತೆಯ ಸೇವೆಗಾಗಿ ವೀರರನ್ನು ನೀಡಿದ ಈ ತಾಯಿಗೆ ನನ್ನ ಗೌರವ ನಮನಗಳು.
ನಿಮ್ಮ ತ್ಯಾಗಕ್ಕೆ ನಾವು ಸದಾ ಚಿರಋಣಿಗಳು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಿ.ವೈ. ರಾಘವೇಂದ್ರ
ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ಕೆಚ್ಚೆದೆಯ ಕಲಿಗಳಾಗಿ ಚೀನಾ ಸೈನಿಕರನ್ನು ಸದೆಬಡಿದು ದೇಶ ರಕ್ಷಣೆಗಾಗಿ ಹೋರಾಡುತ್ತಲೆ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಶತ ನಮನಗಳು. ಭಾವಪೂರ್ಣ ಶ್ರದ್ಧಾಂಜಲಿ ಎಂದು ಸಂಸದ ಬಿ.ವೈ. ರಾಘವೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ
ಭಾರತ ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಕೆಚ್ಚೆದೆಯಿಂದ ಹೋರಾಡಿ ಚೀನಿ ಸೈನಿಕರನ್ನು ಸದೆಬಡಿದು ದೇಶಕ್ಕಾಗಿ ಹುತಾತ್ಮರಾದ ತಾಯಿ ಭಾರತಿಯ ವೀರ ಪುತ್ರರಿಗೆ ಶತ ನಮನಗಳು.
ಭಾವಪೂರ್ಣ ಶ್ರದ್ಧಾಂಜಲಿ ಎಂದು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications