ಜೆಡಿಎಸ್ ಪಾದಯಾತ್ರೆಯಿಂದ ಬಿವೈವಿ ದೂರ; ವಿಜಯೇಂದ್ರ ನಡೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ!
ಬೆಂಗಳೂರು: ಜೆಡಿಎಸ್ ವತಿಯಿಂದ ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಹಮ್ಮಿಕೊಂಡಿರುವ ಪಾದಯಾತ್ರೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೂರ ಉಳಿದಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರಮುಖ ರಾಜಕೀಯ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರೇ ಗೈರಾಗಿರುವುದು ಮೈತ್ರಿ ರಾಜಕಾರಣದ ಲೆಕ್ಕಾಚಾರಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿಡದಿಯಲ್ಲಿ ಜೆಡಿಎಸ್ ಆಯೋಜಿಸಿದ್ದ ಪಾದಯಾತ್ರೆಗೆ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಸೇರಿದಂತೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರೂ, ವಿಜಯೇಂದ್ರ ಅವರು ಮಾತ್ರ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಪಾದಯಾತ್ರೆಗೆ ಮುನ್ನ ನಡೆದ ಕೆಲವು ಕಾರ್ಯಕ್ರಮಗಳಲ್ಲೂ ಅವರ ಅನುಪಸ್ಥಿತಿ ಗಮನ ಸೆಳೆದಿದೆ.

ಎಚ್.ಡಿ. ಕುಮಾರಸ್ವಾಮಿ ಸಭೆಗೂ ಗೈರು
ಇದಕ್ಕೂ ಮುನ್ನ ದೆಹಲಿಯಲ್ಲಿ ನಡೆದ ಪ್ರಮುಖ ಸಭೆಯೊಂದಕ್ಕೂ ವಿಜಯೇಂದ್ರ ಗೈರಾಗಿದ್ದರು. ತಮ್ಮ ಬದಲು ಪಕ್ಷದ ಪ್ರತಿನಿಧಿಗಳನ್ನು ಕಳುಹಿಸಿದ್ದರು ಎನ್ನಲಾಗಿದ್ದು, ಈ ಬೆಳವಣಿಗೆಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.ಕೋಲಾರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿಯೂ ವಿಜಯೇಂದ್ರ ಅವರ ಅನುಪಸ್ಥಿತಿ ಎದ್ದು ಕಾಣಿಸಿತು. ಪಕ್ಷದ ಹಲವು ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ, ರಾಜ್ಯಾಧ್ಯಕ್ಷರು ಗೈರಾಗಿರುವುದು ಕುತೂಹಲ ಮೂಡಿಸಿದೆ.
ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿದೆಯೇ?
ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಮುಂದುವರಿದಿದ್ದು, ಹಲವು ರಾಜಕೀಯ ಹೋರಾಟಗಳಲ್ಲಿ ಉಭಯ ಪಕ್ಷಗಳ ನಾಯಕರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಜೆಡಿಎಸ್ ನೇತೃತ್ವದ ಕೆಲವು ಪ್ರಮುಖ ಕಾರ್ಯಕ್ರಮಗಳಿಂದ ವಿಜಯೇಂದ್ರ ಸತತವಾಗಿ ದೂರ ಉಳಿಯುತ್ತಿರುವುದು ಮೈತ್ರಿಯೊಳಗಿನ ರಾಜಕೀಯ ಸಮೀಕರಣಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ವಿಜಯೇಂದ್ರ ಅವರು ಬಿಡದಿ ಪಾದಯಾತ್ರೆಗೆ ಗೈರಾಗಲು ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ವೈಯಕ್ತಿಕ ಕಾರಣವೇ ಅಥವಾ ರಾಜಕೀಯ ಕಾರಣವೇ ಎಂಬುದರ ಬಗ್ಗೆ ಅಧಿಕೃತ ಸ್ಪಷ್ಟನೆಯೂ ಹೊರಬಿದ್ದಿಲ್ಲ. ಆದರೆ ಒಂದರ ಹಿಂದೆ ಒಂದರಂತೆ ಪ್ರಮುಖ ಕಾರ್ಯಕ್ರಮಗಳಿಂದ ವಿಜಯೇಂದ್ರ ದೂರ ಉಳಿಯುತ್ತಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಮುಂದಿನ ರಾಜಕೀಯ ನಡೆ ಹಾಗೂ ವಿಜಯೇಂದ್ರ ಅವರ ನಿಲುವು ಏನಾಗಿರಲಿದೆ ಎಂಬುದರತ್ತ ಇದೀಗ ರಾಜಕೀಯ ವಲಯದ ಗಮನ ನೆಟ್ಟಿದೆ.


Click it and Unblock the Notifications
