ಬೆಂಗಳೂರಿನಲ್ಲಿ ಕೈ-ಕಮಲ ನಾಯಕರ ಪ್ರತಿಭಟನೆ; ಉಭಯನಾಯಕರ ಧರಣಿ ಯಾಕೆ?
ಬೆಂಗಳೂರು,ಜುಲೈ 12: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪ್ರತ್ಯೇಕವಾಗಿ ಪ್ರತಿಭಟನೆಯನ್ನ ನಡೆಸಿವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆಯನ್ನ ನಡೆಸಿದ್ರೆ. ಇತ್ತ ಬಿಜೆಪಿ ರಾಜ್ಯ ಸರ್ಕಾರ ವಿರುದ್ದ ಧರಣೆಯನ್ನ ನಡೆಸಿದೆ.
ಹೌದು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರ ಹತ್ಯೆ ಹಾಗೂ ಮೈಸೂರು ಜಿಲ್ಲೆ ಟಿ. ನರಸೀಪುರದಲ್ಲಿ ನಡೆದ ಹನುಮ ಜಯಂತಿಯ ಸಂದರ್ಭದಲ್ಲಿ ಆದ ಕ್ಷುಲ್ಲಕ ವಿಚಾರದ ಗಲಾಟೆಯಲ್ಲಿ ಯುವಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಕೊಲೆ ನಡೆದಿದ್ದು, ರಾಜ್ಯದಲ್ಲಿ ನಡೆಯುತಿರುವ ಸರಣೆ ಕೊಲೆಗಳನ್ನ ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಎರಡೂ ಹತ್ಯೆಗಳನ್ನು ಖಂಡಿಸಿ ಮತ್ತು ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಒತ್ತಾಯಿಸಿ ಬಿಜೆಪಿ ನಾಯಕರು ರಾಜಭವನಕ್ಕೆ ಮೆರವಣಿಗೆ ತೆರಳಿದ್ದು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ದೂರು ನೀಡಿದ್ದಾರೆ.
ಇತ್ತ ಮೋದಿ ಉಪನಾಮ ಕೇಸಿನ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಸಂಸದ ಸ್ಥಾನದಿಂದ ಅನರ್ಹತೆ ಮಾಡಿರುವ ಕ್ರಮವನ್ನು ಖಂಡಿಸಿ ಇಡೀ ದಿನ ಕಾಂಗ್ರೆಸ್ ದೇಶಾದ್ಯಂತ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಭಟನೆಯ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಹಿಸಲಿದ್ದಾರೆ. ರಾಹುಲ್ ಗಾಂಧಿ ಅವರ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ನಡೆಯುತ್ತಿದ್ದು, ಇದನ್ನು ವಿರೋಧಿಸಿ ಇಂದು ಬೆಳಗಿನಿಂದ ಸಂಜೆಯವರೆಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಂತ್ರಿಗಳಾದ ಕೆ ಎಚ್ ಮುನಿಯಪ್ಪ, ರಾಮಲಿಂಗಾರೆಡ್ಡಿ, ಬೋಸರಾಜ್, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿ ರಾಹುಲ್ ಗಾಂಧಿಯವರಿಗೆ ಬೆಂಬಲ ವ್ಯಕ್ತಪಡಿಸಿದರು.












Click it and Unblock the Notifications