ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಬಂಪರ್ ಕೊಡುಗೆ: ಹಾಲಿನದ ದರ ಏರಿಕೆಗೆ ಜೆಡಿಎಸ್ ವ್ಯಂಗ್ಯ
ಬೆಂಗಳೂರು, ಜೂನ್ 25: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಪ್ರತಿ ಹಾಲಿನ ಲೀಟರ್ಗೆ 2 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದ್ದು, 42 ರೂಪಾಯಿ ಇದ್ದ ಹಾಲಿನ ದರ ಇನ್ಮುಂದೆ 44 ರೂಪಾಯಿ ಆಗಲಿದೆ.
ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಜೆಡಿಎಸ್ ಕಿಡಿಕಾರಿದೆ. ತುರ್ತು ಪರಿಸ್ಥಿತಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಬಂಪರ್ ಕೊಡುಗೆ ಕೊಟ್ಟಿದೆ. ಈ ದರ ಏರಿಕೆ ಲಾಭ ಹಾಲು ಉತ್ಪಾದಕರಿಗೆ ಸಿಗಲಿದೆಯೋ ಅಥವಾ ಕೆಎಂಎಫ್ ಜೋಳಿಗೆ ಹೋಗಲಿದೆಯೋ? ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎಂದು ಕಿಡಿಕಾರಿದೆ.

ಹಾಲಿನ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ಕೂಡ ವಾಗ್ದಾಳಿ ನಡೆಸಿದ್ದು, ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕಾಂಗ್ರೆಸ್ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡದೆ ಭಂಡತನ ತೋರಿದ ಕಾಂಗ್ರೆಸ್ ಸರ್ಕಾರ, ಇದೀಗ ಏಕಾಏಕಿ ಹಾಲಿನ ದರವನ್ನು ಪ್ರತಿ ಲೀ.ಗೆ ₹2.10 ಏರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಹಾಲು ಉತ್ಪಾದಕರಿಗೆ ₹1087 ಕೋಟಿ ಸಬ್ಸಿಡಿ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿರುವ ನೀವು, ಈಗ ಗ್ರಾಹಕರಿಗೆ ಬೆಲೆಯೇರಿಕೆ ಶಿಕ್ಷೆ ನೀಡಿರುವುದು ಯಾವ ಪುರುಷಾರ್ಥಕ್ಕೆ. ನಿಮ್ಮದು ಕೇವಲ ರೈತ ವಿರೋಧಿ ಸರ್ಕಾರ ಮಾತ್ರವಲ್ಲ, ನಿಮ್ಮದು ಜನ ವಿರೋಧಿ ಸರ್ಕಾರವೂ ಹೌದು. ಬೆಲೆಯೇರಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನೀವು ಆಳಲು ಯೋಗ್ಯರಲ್ಲ ಎಂಬುದಂತೂ ಸಾಬೀತಾಗಿದೆ. ಜನ ತಾಳ್ಮೆ ಕಳೆದುಕೊಳ್ಳುವ ಮೊದಲು ಕುರ್ಚಿ ಬಿಟ್ಟು ತೊಲಗಿ ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದೆ- ಬಿ.ವೈ ವಿಜಯೇಂದ್ರ
ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕಾಂಗ್ರೆಸ್ ಸರ್ಕಾರ ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ. ಇತ್ತ ಬಡವರಿಗೂ ಉಪಕಾರಿಯಾಗಲ್ಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಿಸಲಿಲ್ಲ, ಇದೀಗ ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂ 10 ಪೈಸೆ ಹೆಚ್ಚಳ ಮಾಡಲಾಗಿದೆ. ಈ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications