ಸರ್ಕಾರಿ ನೌಕರರಿಗೆ ಕಾಂಗ್ರೆಸ್‌ನಿಂದ ಆತ್ಮಹತ್ಯೆ ಗ್ಯಾರಂಟಿ: ಬಿಜೆಪಿ ಹೀಗಂದಿದ್ದೇಕೆ?
ವರ್ಗಾವಣೆ ಕಿರುಕುಳಕ್ಕೆ ಬೇಸತ್ತು ಸಿಎಂ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲೇ ಮಹಿಳಾ ಅಧಿಕಾರಿ ಸರ್ಕಾರಿ ಕಚೇರಿಯೊಳಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕಿರುಕುಳದ ಹಿಂದೆ ವರ್ಗಾವಣೆ ಕಿಂಗ್ ಪಿನ್ ವರುಣಾ ಉಸ್ತುವಾರಿ ಯತೀಂದ್ರ ಸಿದ್ದರಾಮಯ್ಯನವರ ಕೈವಾಡ ಶಂಕೆ ಮೂಡುತ್ತಿದೆ. ಸಿಎಂ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಗೆ ಇಷ್ಟು ಕಿರುಕುಳ ಇರುವಾಗ ಉಳಿದ ಕಡೆ ಏನು ಕಥೆ? ಎಂದು ಬಿಜೆಪಿ ಕಳವಳ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಆತ್ಮಹತ್ಯೆ ಗ್ಯಾರಂಟಿ ಜಾರಿಗೊಳಿಸಿದೆ. ಸಿಎಂ ತವರು ಕ್ಷೇತ್ರದಲ್ಲೇ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಆಘಾತಕಾರಿಯಾಗಿದೆ. ಭ್ರಷ್ಟ ಸರ್ಕಾರದ ದುರಾಡಳಿತದಿಂದಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವರ್ಗಾವಣೆ ದಂಧೆಯ ಕಿಂಗ್ ಪಿನ್ ಯಾರು ಎಂಬುದು ಬಯಲಾಗಲಿ ಎಂದು ಆಗ್ರಹಿಸಿದೆ.

ವೀಲ್ ಚೇರ್ ಇಲ್ಲದೆ, ರೋಗಿಗಳನ್ನು ತಮ್ಮವರೇ ಭುಜದ ಮೇಲೆ ಹೊತ್ತೊಯ್ಯುತ್ತಿರುವ ಅಮಾನವೀಯ ದೃಶ್ಯವಿದು. ಸರ್ಕಾರಿ ಆಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗದ ಹಾಗೂ ರೋಗಿಗಳಿಗೆ ಪ್ರಾಥಮಿಕ ಅಗತ್ಯವಾದ ವೀಲ್ ಚೇರ್ ಕೂಡ ಒದಗಿಸಲಾಗದ ಕಾಂಗ್ರೆಸ್ ಸರ್ಕಾರ ಯಾವ ಮುಖ ಇಟ್ಟುಕೊಂಡು ಜನಪರ ಸರ್ಕಾರ ಎಂದು ಹೇಳಿಕೊಳ್ಳುತ್ತೀರಿ? ಬಡವರ ಪಾಲಿಗೆ ಆಸ್ಪತ್ರೆಗಳು ಅಕ್ಷರಶಃ ನರಕದ ದಾರಿಯಾಗಿವೆ. ಈ ದುಃಸ್ಥಿತಿಗೆ ನೇರ ಹೊಣೆ ಯಾರು? ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ಉತ್ತರಿಸಿ ಎಂದು ಒತ್ತಾಯಿಸಿದೆ.
ಕರ್ನಾಟಕವು ಕಾಂಗ್ರೆಸ್ ಸರ್ಕಾರದಡಿ ಗೂಂಡಾ ರಾಜ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಂಬ ಪದವೇ ಮಾಯವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಕುರ್ಚಿಯ ಮೇಲಿರುವ ಒಲವನ್ನು ರಾಜ್ಯದ ಅಭಿವೃದ್ಧಿಯ ಮೇಲೆ ತೋರಿಸಿದ್ದರೆ ಜನ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದರು ಎಂದು ಹೇಳಿದೆ.
ಬೆಂಗಳೂರು ಈಗ ಜಾಗತಿಕ ಭ್ರಷ್ಟಾಚಾರದ ಕೇಂದ್ರ
ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರವಾಗಿದ್ದ ಬೆಂಗಳೂರು, ಈಗ ಕಾಂಗ್ರೆಸ್‌ನ ದುರಾಡಳಿತದ ಪರಿಣಾಮವಾಗಿ ಜಾಗತಿಕ ಭ್ರಷ್ಟಾಚಾರದ ಕೇಂದ್ರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದುವರೆಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಬೆಂಗಳೂರು ಹಿನ್ನಡೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಬಡವರಿಗೆ, ರೈತರಿಗೆ, ಮಹಿಳೆಯರಿಗೆ, ಯುವಜನತೆಗೆ ನ್ಯಾಯ ಒದಗಿಸಲು ಸಾಧ್ಯವಾಗಲಿಲ್ಲ. ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಬೆಲೆ ಏರಿಕೆಯೊಂದೇ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications