ಹಿಂದೂ ಮಹಿಳೆಯರ ವಿಡಿಯೋ ಮಾಡಿ ಸಿಕ್ಕಿಬಿದ್ದ ಬಿಜೆಪಿ ರಕ್ಷಣಾ ಪಡೆಯ ಯುವಕ: ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಆಗಸ್ಟ್ 05: ಬಾತ್‌ರೂಮ್‌ನಲ್ಲಿದ್ದ ನೆರೆಮನೆ ಮಹಿಳೆಯೊಬ್ಬರ ವಿಡಿಯೊವನ್ನು ಫೋನ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದ ಯುವಕನನ್ನು ಮಂಗಳೂರಿನ ಮೂಲ್ಕಿಯಲ್ಲಿ ಬಂಧಿಸಲಾಗಿದೆ. ಮಂಗಳೂರಿನಿಂದ ಸುಮಾರು 24 ಕಿಲೋಮೀಟರ್ ದೂರದಲ್ಲಿರುವ ಮೂಲ್ಕಿಯಲ್ಲಿ ಆಗಸ್ಟ್ 2 ಮತ್ತು 3 ರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ.
ಮಹಿಳೆಯೊಬ್ಬರು ವಾಶ್ ರೂಂನಲ್ಲಿದ್ದಾಗ ಸುಮಂತ್ ಪೂಜಾರಿ ಎಂಬಾತ ವಿಡಿಯೊ ರೆಕಾರ್ಡ್ ಮಾಡಿದ್ದಾನೆ ಎಂದು ದೂರುದಾರ ಪ್ರಜ್ವಲ್ ಆರೋಪಿಸಿದ್ದಾರೆ. 21 ವರ್ಷದ ಸುಮಂತ್ ಪೂಜಾರಿ ತನ್ನ ತಾಯಿ ಮತ್ತು ಸಹೋದರಿಯ ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ ಪ್ರಜ್ವಲ್ ಪೋಲಿಸರಿಗೆ ದೂರು ನೀಡಿದ್ದಾರೆ.

ಮುಲ್ಕಿ ಪೊಲೀಸರು ಶುಕ್ರವಾರ ಆರೋಪಿಯನ್ನು ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಸಿ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ 66 ಇ (ಗೌಪ್ಯತೆಯ ಉಲ್ಲಂಘನೆಗಾಗಿ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಂಕಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
'ನಾವು 18 ಸೆಕೆಂಡುಗಳ ಒಂದು ವಿಡಿಯೊವನ್ನು ಪಡೆದಿದ್ದೇವೆ. ಅದರಲ್ಲಿ ಹೆಚ್ಚೇನೂ ಇರಲಿಲ್ಲ. ಆ ವಿಡಿಯೊದಲ್ಲಿ ಪ್ರಜ್ವಲ್ ವಾಶ್ ರೂಂಗೆ ಹೋಗುವುದು ಕಾಣುತ್ತಿದೆ. ಶಂಕಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ಜೈನ್ ಹೇಳಿದ್ದಾರೆ.

ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಬಿಜೆಪಿ ರಕ್ಷಣಾ ಪಡೆಯವನೊಬ್ಬ ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿ ಸಿಕ್ಕಿಬಿದ್ದಿದ್ದಾನೆ' ಎಂದು ಆರೋಪಿಸಿದೆ.
ಈತ ವಿಡಿಯೋ ಮಾಡಿ ಬಿಜೆಪಿ ಕಚೇರಿಗೆ ಕಳಿಸುತ್ತಿದ್ದನೇ? ಅಥವಾ ಸಿಟಿ ರವಿ, ಸಂಸದ ಪ್ರತಾಪ್ ಸಿಂಹಗೆ ಕಳಿಸುತ್ತಿದ್ದನೇ? ಇವನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ? ಈತನ ಕೃತ್ಯದ ಹಿಂದೆ ಯಾವ ಷಡ್ಯಂತ್ರವಿದೆ? ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಎಲ್ಲಾ ಪ್ರೈವೇಟ್ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಸಂಘಪಾರಿವಾರದಿಂದ ವಿಡಿಯೋ ಚಿತ್ರೀಕರಣದ ತರಬೇತಿ ಪಡೆದವನೊಬ್ಬ ಬಾತ್ ರೂಮಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಸಿಕ್ಕಿ ಬಿದ್ದಿರುವ ಸುದ್ದಿ ಇನ್ನೂ ಬಿಜೆಪಿ ಕಚೇರಿಯನ್ನು ತಲುಪಿಲ್ಲವೇ? ಬಿಜೆಪಿ ಹೋರಾಟ, ಪ್ರತಿಭಟನೆಗಳನ್ನು ಯಾವಾಗ ಹಮ್ಮಿಕೊಳ್ಳುತ್ತದೆ? ಈತನಿಂದ ಸಂತ್ರಸ್ತಳಾದ ಹಿಂದೂ ಹೆಣ್ಣುಮಗಳಿಗೆ ಶೋಭಾ ಕರಂದ್ಲಾಜೆ ನ್ಯಾಯ ಕೇಳುವುದು ಯಾವಾಗ? ಈ ಪ್ರಕರಣದಲ್ಲಿ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡುವುದಿಲ್ಲವೇ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.












Click it and Unblock the Notifications