Bird Flu: ಹೀಗೆ ಮಾಡಿದ್ರೆ ಹಕ್ಕಿ ಜ್ವರ ಬರಲ್ಲ: ಮಹತ್ವದ ಟಿಪ್ಸ್ ಕೊಟ್ಟ ಆರೋಗ್ಯ ಸಚಿವ
ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹಕ್ಕಿ ಜ್ವರ (Bird Flu) ತಾಂಡವಾಡುತ್ತಿದ್ದು, ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ. ಹಕ್ಕಿ ಜ್ವರ ತಲುಗಿದ ಕಾರಣ ಲಕ್ಷಾಂತರ ಕೋಳಿಗಳ ಮಾರಣಹೋಮ ನಡೆಯುತ್ತಿದೆ. ಇದರಿಂದ ಚಿಕನ್ ಹಾಗೂ ಕೋಳಿ ಮೊಟ್ಟೆ ಸೇವನೆಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಇನ್ನು ರಾಜ್ಯದಲ್ಲೂ ಹಕ್ಕಿ ಜ್ವರ ಪ್ರರಣಗಳು ಹೆಚ್ಚಾಗಿರುವ ಹಿನ್ನೆಲೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಕೋಳಿಗಳ ಸರಬರಾಜು ಹೆಚ್ಚಾಗಿತ್ತು. ಈ ಹಿನ್ನೆಲೆ ಅಲ್ಲಿ ಹಕ್ಕಿ ಜ್ವರ ಹೆಚ್ಚಾದ ಕಾರಣ ಅಲ್ಲಿಂದ ಕೋಳಿ ಸಾಗಾಟ ಬಂದ್ ಮಾಡಲಾಗಿದೆ. ಆದರೂ ಈ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿರುವುದರಿಂದ ಜನ ಚಿಕನ್ ಸೇವನೆಯಿಂದ ದೂರ ಉಳಿದಿದ್ದಾರೆ. ಚಿಕನ್ ಬೆಲೆ ಕೂಡ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಹಕ್ಕಿ ಜ್ವರದಿಂದ ಪಾರಾಗುವುದು ಹೇಗೆ? ಎಂದು ಆರೋಗ್ಯ ಸಚಿವರು ಕೆಲವು ಟಿಪ್ಸ್ ನೀಡಿದ್ದಾರೆ.

ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದೆ. ಹಕ್ಕಿಜ್ವರ ಸಾಂಕ್ರಾಮಿಕ ರೋಗವಾದರೂ, ಅದು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ. ಹಾಗಾಗಿ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಆದರೂ ಮೊಟ್ಟೆ ಮತ್ತು ಮಾಂಸವನ್ನು ಸೇವಿಸುವಾಗ ಕೆಲ ಎಚ್ಚರಿಕೆಗಳನ್ನು ಪಾಲಿಸಬೇಕು. ಮೊಟ್ಟೆ ಮತ್ತು ಮಾಂಸವನ್ನು 70 ಡಿಗ್ರಿ ಉಷ್ಣಾಂಶದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬೇಯಿಸಿ ಸೇವಿಸಬೇಕು. ಸೋಂಕು ಪೀಡಿತ ಕೋಳಿ ಫಾರಂ, ಮೃತ ಹಕ್ಕಿ ಅಥವಾ ಕೋಳಿಗಳ ಸಮೀಪಕ್ಕೆ ಹೋಗದೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬಳ್ಳಾರಿ, ಚಿಕ್ಕಬಳ್ಳಾಪುರ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪತ್ತೆಯಾದ ಹಿನ್ನೆಲೆ ಆಂಧ್ರಪ್ರದೇಶದಿಂದ ಬರುವ ಕೋಳಿ ಸಾಗಾಟ ವಾಹನಗಳನ್ನು ತಡೆಹಿಡಿಯಲಾಗುತ್ತಿದೆ. ಆಂಧ್ರಪ್ರದೇಶದ ಅನಂತಪುರ, ಗುಂತಕಲ್ ಭಾಗದಿಂದ ಕೋಳಿಗಳು ಪೂರೈಕೆಯಾಗುತ್ತಿರುವ ಹಿನ್ನೆಲೆ ಜಿಲ್ಲಾಡಳಿತಗಳು ಚೆಕ್‌ಪೋಸ್ಟ್ ನಿರ್ಮಿಸಿ ಕೋಳಿಗಳ ಮೇಲೆ ನಿರ್ಬಂಧ ಹೇರಿವೆ.

ಹಕ್ಕಿ ಜ್ವರದ ಲಕ್ಷಣಗಳೇನು? : ಹಕ್ಕಿ ಜ್ವರ ಪಕ್ಷಿಗಳಿಗೆ ಮಾತ್ರವಲ್ಲದೆ ಮನುಷ್ಯರಿಗೂ ಹರಡುತ್ತದೆ. ತೀವ್ರ ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ, ಮೂಗಿನಲ್ಲಿ ಸೋರುವಿಕೆ, ತಲೆನೋವು, ಸ್ನಾಯುಗಳ ನೋವು, ಗಂಟಲಿನ ಊತ ಇದರ ಲಕ್ಷಣಗಳಾಗಿವೆ. ವಾಕರಿಕೆ ಬರುವುದು ವಾಂತಿ, ಬೇಧಿ ಕೂಡ ಆಗುತ್ತದೆ. ಈ ಸೋಂಕು ತಗುಲಿದ ಎರಡರಿಂ ಐದು ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಅಗತ್ಯ ಚಿಕಿತ್ಸೆ ಪಡೆದುಕೊಂಡರೆ ಆಪತ್ತಿನಿಂದ ಪಾರಾಗಬಹುದು. ಯಾರಿಗಾದರೂ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರ ಬಳಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದೆ.
ಎಚ್5ಎನ್1 (H5N1) ವೈರಸ್ ಅನ್ನೇ ಹಕ್ಕಿ ಜ್ವರ ಎಂದೂ ಕರೆಯುತ್ತಾರೆ. ಈ ವೈರಸ್ ಮೊದಲಿಗೆ 1996ರಲ್ಲಿ ಚೀನಾದಲ್ಲಿ ಪತ್ತೆಯಾಗಿತ್ತು. ಬಳಿಕ ಬೇರೆ ಬೇರೆ ದೇಶಗಳಲ್ಲಿಯೂ ಹರಡಿತ್ತು. ಈ ಹಕ್ಕಿ ಜ್ವರವು ಸೋಂಕಿತ ಪಕ್ಷಿಗಳಿಗೆ ನೇರ ಸಂಪರ್ಕದ ಮೂಲಕ ಹರಡುತ್ತಿದ್ದು, ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಹರಡಿರುವ ವರದಿಯಾಗಿದೆ. ಈ ಹಿನ್ನೆಲೆ ಅಲ್ಲಿ ಹಲವು ಕೋಳಿ ಫಾರಂಗಳನ್ನು ಮುಚ್ಚಿಸಲಾಗಿದ್ದು, ಲಕ್ಷಾಂತರ ಕೋಳಿಗಳ ಮಾರಣಹೋಮ ನಡೆದಿದೆ.












Click it and Unblock the Notifications