Bidadi Land Acquisition: ಬಿಡದಿ ಟೌನ್‌ಶಿಪ್ ನಿರ್ಮಾಣ ದೇವನಹಳ್ಳಿ ಮಾದರಿ ಅನುಸರಿಸಲು ಡಿಮ್ಯಾಂಡ್
Bidadi Land Acquisition: ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿ, ಬಿಡಿದಿಯಲ್ಲಿ ಟೌನ್‌ಶಿಪ್ ನಿರ್ಮಾಣ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ರೀತಿ ಇರುವಾಗಲೇ ದೇವನಹಳ್ಳಿಯಲ್ಲಿ ಭೂಸ್ವಾಧೀನಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ ಭೂಸ್ವಾಧೀನವನ್ನು ಕೈಬಿಡಲಾಗಿತ್ತು. ಇದೀಗ ಬಿಡದಿಯಲ್ಲೂ ಇದೇ ಮಾದರಿಯನ್ನು ಅನುಸರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ಈ ಹಿಂದೆ ದೇವನಹಳ್ಳಿಯ ರೈತರು ಭೂಸ್ವಾಧೀನದ ವಿರುದ್ಧ ಹೋರಾಟ ಮಾಡಿದಾಗ ಸರ್ಕಾರ ಭೂಸ್ವಾಧೀನವನ್ನು ಕೈ ಬಿಟ್ಟಿತ್ತು. ಎರಡನೆಯದಾಗಿ, ಡಿನೋಟಿಫಿಕೇಷನ್ ಮಾಡಿದರೆ ಜೈಲಿಗೆ ಹೋಗುತ್ತಾರೆ ಎಂದು ತಪ್ಪು ಮಾಹಿತಿಯನ್ನು ನೀವು ಬಿತ್ತರಿಸಬೇಡಿ. ಪರಿಸರ ನಾಶ, ರೈತರಿಗೆ ಸಂಕಷ್ಟವಾಗುವ ಯೋಜನೆಗಳನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಭೂ ಸ್ವಾಧೀನವನ್ನು ಕೈಬಿಟ್ಟು, Denotify ಮಾಡಬಹುದು. ಡಿನೋಟಿಫಿಕೇಷನ್ ಮಾಡುವುದರಿಂದ ಖಾಸಗಿ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ, ಕೈಗಾರಿಕೆಗಳಿಗೆ, ರಿಯಲ್ ಎಸ್ಟೇಟ್ ಮಾಫಿಯಾ ಅನುಕೂಲವಾಗುವ ಸಂದರ್ಭದಲ್ಲಿ ಮಾತ್ರ ಡಿನೋಟಿಫಿಕೇಷನ್ ಕಾನೂನುಬಾಹಿರ (illegal) ಆಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ನಿಮ್ಮ ತರ್ಕಾನುಸಾರ ಡಿನೋಟಿಫಿಕೇಷನ್ ಮಾಡುವುದು ತಪ್ಪಾಗಿದ್ದರೆ ದೇವನಹಳ್ಳಿ ರೈತರ ಭೂ ಸ್ವಾಧೀನವನ್ನು ಹಿಂದಿನ ಮುಖ್ಯ ಮಂತ್ರಿ ಕೈಬಿಟ್ಟಾಗ ತಾವು ಏಕೆ ಮಾತನಾಡಲಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಹೇಳಿದ್ದಾರೆ.
ಬಿಡದಿಯ ಫಲವತ್ತಾದ ಜಮೀನಿನಲ್ಲಿ ವಿವಿಧ ಬಗೆ ಬೆಳೆಗಳನ್ನು ಬೆಳೆಯಬಹುದು. (Multicropping). ಅಲ್ಲದೆ, ಇಲ್ಲಿಂದ ನಿತ್ಯ ಬೆಂಗಳೂರಿಗೆ ಲಕ್ಷಗಟ್ಟಲೆ ಹಾಲು ಸರಬರಾಜು ಆಗುತ್ತೆ. ಸಪೋಟ, ಹಲಸು, ಪೇರಳೆ, ರಾಗಿ, ಬಾಳೆ ಬೆಳೆದು ರೈತರು ಸಮೃದ್ಧರಾಗಿದ್ದರೆ. ರೇಷ್ಮೆ ಕೃಷಿ ರೈತರ ಆದಾಯವನ್ನು ಹೆಚ್ಚಿಸಿದೆ. ರೈತರು ಆರ್ಥಿಕವಾಗಿ ಸಧೃಡರಾಗಿದ್ದರೆ. ಭೂತಾಯಿ ಬಿಡದಿಯ ಮಣ್ಣಿನ ಮಕ್ಕಳನ್ನು ಹರಸಿದ್ದಾಳೆ. ಕೃಷಿ ಆದಾಯದಿಂದ ಮಕ್ಕಳ ವಿದ್ಯಾಭ್ಯಾಸ ಆಗಿದೆ. ತಾಲೂಕಿನ ಆರ್ಥಿಕತೆ ಕೃಷಿಯ ಮೇಲೆ ಅವಲಂಬಿತವಾಗಿದೆ. ಮುಖ್ಯ ಮಂತ್ರಿಗಳು ಮೊಸಳೆ ಕಣ್ಣೀರನ್ನು ಹಾಕುವುದನ್ನು ಬಿಟ್ಟು ವಾಸ್ತವಿಕವಾಗಿ ಮಾತನಾಡಬೇಕೆ ಹೊರತು ಮಾಧ್ಯಮಗಳ ಮುಂದೆ ಸುಳ್ಳನ್ನು ಹೇಳಬಾರದು ಎಂದೂ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಜೈಲಿಗೆ ಹೋಗುವುದಿಲ್ಲ ಎಂದಿದ್ದ ಡಿ.ಕೆ ಶಿವಕುಮಾರ್
ಇನ್ನು ಬಿಡದಿಯಲ್ಲಿ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಈಚೆಗೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ನಾನು ಆ ಜಾಗವನ್ನೆಲ್ಲವೂ ಬಿಟ್ಟು ಅಥವಾ ನೋಟಿಫಿಕೇಷನ್ ಮಾಡಿ ಜೈಲಿಗೆ ಹೋಗುವುದಕ್ಕೆ ಸಿದ್ಧನಿಲ್ಲ. ಅಲ್ಲದೆ ಈ ಭಾಗದಲ್ಲಿ ರೈತರಿಗೆ ನಾವು ಭಾರೀ ದೊಡ್ಡ ಮಟ್ಟದಲ್ಲಿ ಪರಿಹಾರ ಮೊತ್ತವನ್ನು ಕೊಡುತ್ತಿದ್ದೇವೆ ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಚೆಗೆ ಹೇಳಿದ್ದರು. ಅಲ್ಲದೆ ಭೂಮಿ ಕೊಡುವುದಕ್ಕೆ ಈಗಾಗಲೇ ಈ ಭಾಗದ ಶೇ 80ರಷ್ಟು ರೈತರು ಒಪ್ಪಿಗೆ ಸೂಚಿಸಿದ್ದಾರೆ ಎಂದೂ ಡಿ.ಕೆ ಶಿವಕುಮಾರ್ ಅವರು ಈಚೆಗೆ ಹೇಳಿದ್ದರು.














Click it and Unblock the Notifications