ಬೆಂಗಳೂರು-ರಾಮನಗರ ನಡುವೆ 'ಡೆಮು' ರೈಲು ಸಂಚಾರ
ಬೆಂಗಳೂರು, ಜು. 09: ನೈರುತ್ಯ ರೈಲ್ವೆ ರಾಮನಗರ ಮತ್ತು ಬೆಂಗಳೂರು ನಡುವೆ ಡೀಸೆಲ್ ಚಾಲಿತ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಆರಂಭಿಸಿದೆ. ಸಬ್‌ಅರ್ಬನ್ ಮಾದರಿಯ ಬಹುನಿರೀಕ್ಷಿತ ಡೆಮು (ಡೀಸೆಲ್ ಚಾಲಿತ) ಸಂಚಾರ ಬುಧವಾರದಿಂದ ಆರಂಭವಾಗಿದೆ.
ಸದಾನಂದ ಗೌಡರು ಮಂಡಿಸಿದ್ದ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿದ್ದ "ಎಮು' (ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್) ರೈಲಿಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೆ, ಕಾರ್ಯಾಚರಣೆಗೆ ಇನ್ನು ಕೆಲ ಸುರಕ್ಷಿತ ಕ್ರಮ ತೆಗೆದುಕೊಳ್ಳಬೇಕಿದೆ. ಈಗ ಡೆಮು ಸೇವೆಯನ್ನು ಆರಂಭ ಮಾಡಲಾಗಿದ್ದು ಮುಂದೆ ಅಭಿವೃದ್ಧಿ ಪಡಿಸಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.[ವಿಶ್ವದ ಅತಿ ದೊಡ್ಡ ಸಂಸ್ಥೆಗಳ ಪೈಕಿ ಭಾರತದ ಆರ್ಮಿ, ರೈಲ್ವೆ]

ವೇಳಾಪಟ್ಟಿ: ಪ್ರತಿದಿನ ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಡುವ ಈ ಡೆಮು ರೈಲು 5.40ಕ್ಕೆ ರಾಮನಗರ ತಲುಪಲಿದೆ. ಅದೇ ರೀತಿ, ಸಂಜೆ 6.35ಕ್ಕೆ ರಾಮನಗರದಿಂದ ಹೊರಟು 7.50ಕ್ಕೆ ಬೆಂಗಳೂರಿಗೆ ಬರಲಿದೆ.
ಸಾಮರ್ಥ್ಯ: ದ್ವಿಮುಖ ಸಂಚಾರ (ಎರಡು ಇಂಜಿನ್‌ಗಳು) ಹೊಂದಿರುವ ರೈಲು ಆರು ಬೋಗಿಗಳನ್ನು ಹೊಂದಿದ್ದು 110 ಜನ ಕುಳಿತುಕೊಳ್ಳಬಹುದು. ಸುಮಾರು 250 ಮಂದಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.
ಪ್ರತಿನಿತ್ಯ ಬೆಂಗಳೂರಿಗೆ ಆಗಮಿಸುವವರು ಮತ್ತು ತೆರಳುವವರು ಈ ವೇಳೆಯಲ್ಲಿ ಎಕ್ಸ್ ಪ್ರೆಸ್ ರೈಲಿಗೆ ಕಾಯಬೇಕಾಗಿತ್ತು. ಆದರೆ ಈ ರೈಲು ವ್ಯವಸ್ಥೆ ಎಲ್ಲರಿಗೂ ನೆರವಾಗಿಲಿದೆ. ಆದರೆ, ಇದು ಕೇವಲ ತಾತ್ಕಾಲಿಕ ಸೇವೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications