ಬಿಜೆಪಿ ಮುಖಂಡನಿಗೆ ಚಾಕು ಇರಿತ; ಹಲ್ಲೆ ಘಟನೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದೇನು?
ಬೆಳಗಾವಿ: ಪೃಥ್ವಿ ಸಿಂಗ್ ಎನ್ನುವವರ ಮೇಲಿನ ಹಲ್ಲೆ ಘಟನೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ದುರುದ್ದೇಶಪೂರ್ವಕವಾಗಿ ಆತ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾನೆ. ಒಂದು ದಾಖಲೆ ಸಲುವಾಗಿ ಅವರ ಮನೆಗೆ ನಮ್ಮ ಕಡೆಯವರು ಹೋಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಮ್ಮ ಕಡೆಯವರು ಆತನೊಂದಿಗೆ ಮಾತನಾಡುವಾಗ ಆತ ಕೇಸರಿ ಬಣ್ಣದ ಟೀ ಶರ್ಟ್ ಹಾಕಿದ್ದು ಸೆರೆಯಾಗಿದೆ.

ರಕ್ತ ಅಂಟಿಕೊಂಡಿದ್ದ ಬಿಳಿ ಬಣ್ಣದ ಅಂಗಿಯನ್ನು ಧರಿಸಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈತ ದುರದ್ದೇಶಪೂರ್ವವಾಗಿ ಆರೋಪ ಮಾಡುತ್ತಿರುವುದು ಸ್ಪಷ್ಟವಾಗಿದೆ. ಪೊಲೀಸರು ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಿ ಎಂದು ಅವರು ಹೇಳಿದ್ದಾರೆ.
ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ದಲಿತ ಮುಖಂಡ, ಬಿಜೆಪಿ ಎಸ್‍ಸಿ ಮೋರ್ಚಾದ ಮುಖಂಡ ಪೃಥ್ವಿ ಸಿಂಗ್ ಅವರ ಮನೆಯ ಬಳಿ ಹಲ್ಲೆ ನಡೆದಿದೆ. ಈ ಸಂಬಂಧ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ, ಇತರ ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಇವತ್ತು ರಾತ್ರಿಯೇ ಅವರನ್ನು ಬಂಧಿಸಿ ಎಂದು ಒತ್ತಾಯಿಸಿದರು.
ಇಲ್ಲಿನ ಪೊಲೀಸ್ ವ್ಯವಸ್ಥೆ ಬಗ್ಗೆ ನಮಗೆ ವಿಶ್ವಾಸ ಇಲ್ಲ ಎಂದು ಪೃಥ್ವಿ ಸಿಂಗ್ ಹೇಳಿದ್ದಾರೆ. ಮನೆಯವರಿಗೆ ರಕ್ಷಣೆ ಕೊಡಿಸಿ ಎಂದು ಕೋರಿದ್ದಾರೆ. ಅಧಿಕಾರದ ದರ್ಪದಿಂದ ಸಚಿವರು, ಅವರ ಸಹೋದರ ನಡೆದುಕೊಂಡದ್ದನ್ನು ಬೆಳಗಾವಿಯ ಜನರು ನೋಡಿದ್ದಾರೆ ಎಂದರು.
ತಕ್ಷಣ ಎಫ್‍ಐಆರ್ ಮಾಡಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಈ ಘಟನೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು. ಎಲ್ಲ ದುಷ್ಟರನ್ನು ಬಂಧಿಸಬೇಕು ಎಂದು ತಿಳಿಸಿದರು. ಪೊಲೀಸರ ಕುರಿತು ನಮಗೆ ವಿಶ್ವಾಸ ಇಲ್ಲ ಎಂದು ಪುನರುಚ್ಚರಿಸಿದರು.
ಯಾವ ಕಾರಣಕ್ಕಾಗಿ ಹೀಗಾಗಿದೆ ಎಂಬ ಪ್ರಶ್ನೆ ಇದಲ್ಲ. ಆಡಳಿತ ಪಕ್ಷದ ವಿಧಾನಪರಿಷತ್ ಸದಸ್ಯ, ಹಾಲಿ ಸಚಿವರ ಸಹೋದರನಿಂದ ಮಾರಣಾಂತಿಕ ಹಲ್ಲೆ ನಡೆದರೆ ಹೇಗೆ ಎಂದು ಅವರು ಪ್ರಶ್ನಿಸಿದರು. ಗುಲ್ಬರ್ಗದಲ್ಲೂ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ ಹಲ್ಲೆ ನಡೆದಿತ್ತು. ಇಂಥ ಘಟನೆ ಇಲ್ಲಿ ಮರುಕಳಿಸಿದೆ ಎಂದು ಆಕ್ಷೇಪಿಸಿದರು.
ಎಂಎಲ್‍ಸಿ ಮತ್ತು ಅವರ ಸಹಚರರನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದರು. ಇನ್ನೂ ಹುಡುಗಾಟ ಮಾಡುವ ವಿಚಾರ ಇದಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಚೂರಿ ಇರಿತ ಮಾಡಿದವರನ್ನು ಬಂಧಿಸಿ ಎಂದು ಎಚ್ಚರಿಸಿದರು. ಆಡಳಿತ ಪಕ್ಷದ ಸದಸ್ಯರ ನಡವಳಿಕೆ ಈ ಮಟ್ಟಕ್ಕೆ ಹೋದರೆ ಹೇಗೆ ಎಂದು ಕೇಳಿದರು. ಇಲ್ಲಿ ಅಧಿವೇಶನ ನಡೆದಿದೆ. ಅದೇ ಸಂದರ್ಭದಲ್ಲಿ ಜವಾಬ್ದಾರಿಯುತ ಸಚಿವರು ಈ ರೀತಿ ಹೇಳಿಕೆ ಕೊಡುವುದು ಸರಿಯೇ ಎಂದು ಪ್ರಶ್ನಿಸಿದರು.












Click it and Unblock the Notifications