Gruha Lakshmi: ಪ್ಲೇ ಸ್ಟೋರ್ನಲ್ಲಿ ಗೃಹಲಕ್ಷ್ಮಿ ನಕಲಿ ಆ್ಯಪ್: ಇರಲಿ ಎಚ್ಚರಿಕೆ, ಯಾಮಾರಿದ್ರೆ ಬ್ಯಾಂಕ್ ಖಾತೆಗೆ ಕನ್ನ
ಕಾಂಗ್ರೆಸ್‌ನ ಚುನಾವಣಾ ಘೋಷಣೆಯಲ್ಲಿ ಅತಿ ಮಹತ್ವದ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಮನೆಯ ಯಜಮಾನಿ ಖಾತೆಗೆ ಪ್ರತಿತಿಂಗಳು 2000 ಹಣ ಹಾಕುವ ಈ ಯೋಜನೆಗಾಗಿ ಅರ್ಜಿ ಸ್ವೀಕರಿಸಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲು ಮೊಬೈಲ್ ಆ್ಯಪ್ ಕೂಡ ಸಿದ್ಧಪಡಿಸಿದೆ, ಜೂನ್ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಆ್ಯಪ್‌ನ ಪ್ರಾತ್ಯಕ್ಷಿಕೆ ನೀಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ ನಂತರ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗುತ್ತದೆ. ಆದಷ್ಟು ಬೇಗನೆ ಅರ್ಜಿ ಸ್ವೀಕಾರ ಮಾಡಲು ಶುರು ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಸರ್ಕಾರದ ಅಧಿಕೃತ ಆ್ಯಪ್ ಬಿಡುಗಡೆಗೂ ಮುನ್ನವೇ ಫೇಕ್ ಆ್ಯಪ್‌ಗಳ ಹಾವಳಿ ಶುರುವಾಗಿದೆ. ಈಗಾಲೇ ಮೊಬೈಲ್ ಪ್ಲೇಸ್ಟೋರ್ ನಲ್ಲಿ ಗೃಹಲಕ್ಷ್ಮಿ ಹೆಸರಿನಲ್ಲಿ ಹಲವು ನಕಲಿ ಆ್ಯಪ್ ಲಭ್ಯವಿದ್ದು, ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಕಾಯುತ್ತಿವೆ.
ಡೌನ್‌ಲೋಡ್ ಮಾಡಿದರೆ ನಿಮ್ಮ ವೈಯಕ್ತಿಕ ಮಾಹಿತಿಗೆ ಕನ್ನ
ಈಗಾಗಲೇ ಪ್ಲೇಸ್ಟೋರ್ ನಲ್ಲಿ ಒನ್ ಇಂಡಿಯಾ ಗಮನಿಸಿದಂತೆ ಕನಿಷ್ಠ 7 ನಕಲಿ ಆ್ಯಪ್‌ಗಳು ಕಾಣಿಸಿಕೊಂಡಿವೆ. ಈ ಯಾವುದೇ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ನಿಮ್ಮ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುವ ಅಪಾಯ ಇದೆ. ಇನ್ನು ಈ ನಕಲಿ ಅಪ್ಲಿಕೇಶನ್ ತೆರೆದು ನಿಮ್ಮ ಆಧಾರ್, ಮೊಬೈಲ್, ಬ್ಯಾಂಕ್ ಖಾತೆ ವಿವರ ನಮೂದಿಸಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಎಗರಿಸುವ ಅಪಾಯ ಹೆಚ್ಚಾಗಿದೆ.
ಕೆಲವು ನಕಲಿ ಆ್ಯಪ್‌ಗಳು ಗೃಹಲಕ್ಷ್ಮಿ ಯೋಜನೆ ಎಂದು ಕನ್ನಡದಲ್ಲಿ ಕೂಡ ಹಾಕಿಕೊಂಡಿವೆ. ಯಾವುದೇ ಕಾರಣಕ್ಕೂ ಈ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವುದಾಗಲಿ, ಅವುಗಳನ್ನು ತೆರೆಯುವುದಾಗಲಿ ಮಾಡಬೇಡಿ.
ಸರ್ಕಾರದಿಂದ ಬರಲಿದೆ ಅಧಿಕೃತ ಮಾಹಿತಿ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕರಿಸಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅರ್ಜಿ ಸ್ವೀಕರಿಸುವ ದಿನಾಂಕ, ಆಪ್, ವೆಬ್‌ಸೈಟ್ ಬಗ್ಗೆ ಸರ್ಕಾರವೇ ಎಲ್ಲಾ ಮಾಹಿತಿಯನ್ನು ನೀಡಲಿದೆ. ಅಲ್ಲದೆ ಏನೆಲ್ಲಾ ದಾಖಲೆಗಳು ಬೇಕು ಎನ್ನುವುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಲಿದೆ. ಸರ್ಕಾರದಿಂದ ಅಧಿಕೃತವಾಗಿ ಆದೇಶ ಬರುವವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂಗಳಲ್ಲಿ ಬರುವ ಯಾವುದೇ ನಕಲಿ ಲಿಂಕ್, ಆಪ್‌ಗಳನ್ನು ನಂಬಬೇಡಿ.
ಮೊಬೈಲ್ ಆ್ಯಪ್ ಮಾತ್ರವಲ್ಲದೆ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೂಡ ಅರ್ಜಿ ಸ್ವೀಕರಿಸಲಾಗುತ್ತದೆ. ಸದ್ಯಕ್ಕೆ ಅರ್ಜಿ ಸ್ವೀಕರಿಸುವ ದಿನಾಂಕದ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ, ಅತಿ ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.












Click it and Unblock the Notifications