Yatnal: ಸಿಎಂ ಕಾನೂನು ಸಲಹೆಗಾರ ಸ್ಥಾನಕ್ಕೆ ಪೊನ್ನಣ್ಣ ರಾಜೀನಾಮೆ ಕೊಡಬೇಕು
ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವು ರಾಜಕೀಯವಾಗಿ ಕಿಚ್ಚು ಹೊತ್ತಿಸಿದೆ. ವಿನಯ್ ಡೆತ್ನೋಟ್ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ, ಸಿಎಂ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಮಂಥರ್ ಗೌಡ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಪೊನ್ನಣ್ಣ ಅವರು ಕೂಡಲೇ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ತಮ್ಮ ಸ್ಥಾನ ದುರಪಯೋಗಪಡಿಸಿಕೊಂಡು ಅಮಾಯಕ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರನ್ನು ಬಿಟ್ಟಿರುವ ಶಾಸಕ ಪೊನ್ನಣ್ಣ, ತಮ್ಮ ಪ್ರಭಾವ ಬಳಸಿ ತನಿಖೆಯನ್ನು ದಿಕ್ಕನ್ನು ಬದಲಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಹಾಗಾಗಿ ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳೇ ಅವರನ್ನು ವಜಾ ಮಾಡಿ ನೈತಿಕ ಮೇಲ್ಪಂಕ್ತಿ ಹಾಕಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್‌ನ ಕೆಲ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಉಪಯೋಗಿಸಿ ಬೆದರಿಕೆಯೊಡ್ಡಿದ್ದ ಕಾರಣದಿಂದ ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆಗೆ ಶರಣಾಗಿರುವುದು ಅತ್ಯಂತ ದುರದೃಷ್ಟಕರ ಎಂದು ಸಂತಾಪ ಸೂಚಿಸಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಬಿಜೆಪಿ ಕರ್ನಾಟಕ ಘಟಕವು ವಿನಯ್ ಅವರಿಗೆ ಯಾವುದೇ ಕಾನೂನು ನೆರವು ನೀಡದೆ ಈಗ ಟ್ವಿಟರ್‌ನಲ್ಲಿ ಆರ್ಭಟಿಸುತ್ತಿರುವುದು ಇವರ ಆದ್ಯತೆಗಳನ್ನು ತೋರಿಸುತ್ತದೆ ಎಂದು ಬಿಜೆಪಿ ವಿರುದ್ಧವೂ ಗುಡುಗಿದ್ದಾರೆ.
ಆಡಳಿತಾರೂಢ ಪಕ್ಷದ ಇಬ್ಬರು ಹಾಲಿ ಶಾಸಕರ ಪಾತ್ರವಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಿಂದುತ್ವವಾದಿಗಳನ್ನು ಹಾಗೂ ಬಲಪಂಕ್ತೀಯರನ್ನು ಗುರಿಯಾಗಿಸಿಕೊಂಡು, ಅವರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅವರ ಕುಟುಂಬವನ್ನು, ಸ್ನೇಹಿತರನ್ನು ಬೆದರಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಕುಟಿಲ ರಾಜಕಾರಣವನ್ನು ತೋರಿಸುತ್ತದೆ ಎಂದು ದೂರಿದ್ದಾರೆ.

ಹಿಂದುತ್ವದ ಪರ ಮಾತನಾಡಿದವರನ್ನು ಮೂಲೆಗುಂಪು ಮಾಡಿ, ಅವರನ್ನು ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿ, ಆತ್ಮಹತ್ಯೆಗೆ ಪ್ರಚೋದನೆ ನೀಡುವವರನ್ನು ಸುಮ್ಮನೆ ಬಿಡಬಾರದು. ವಿನಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಾಗೆಯೇ ಅವರ ಆತ್ಮಹತ್ಯೆಗೆ ಕಾರಣರಾದವರನ್ನು ಕೂಡಲೇ ಪೊಲೀಸರು ಬಂಧಿಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಿ. ಈಗಲಾದರೂ ಬಿಜೆಪಿ ನಾಯಕರು ಅಡ್ಜಸ್ಟ್ಮೆಂಟ್ ಮಾಡಿಕೊಳ್ಳದೆ, ವಿನಯ್ ಆತ್ಮಕ್ಕೆ ಶಾಂತಿ ಸಿಗುವುದಕ್ಕಾಗಿ ಹೋರಾಟ ಮಾಡಲಿ. ಈ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದು ಯತ್ನಾಳ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರ ಕಿರುಕುಳಕ್ಕೆ ಬಲಿಯಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಡೆತ್‍ನೋಟಿನಲ್ಲಿ ಇರುವ ಎಲ್ಲರ ಹೆಸರನ್ನೂ ಎಫ್ಐಆರ್‌ನಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಕಾಂಗ್ರೆಸ್ ನಾಯಕರು, ಶಾಸಕರ ಅಧಿಕಾರದ ಅಟ್ಟಹಾಸ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಿಜೆಪಿ ಕಾರ್ಯಕರ್ತರನ್ನು ಸದೆಬಡಿಯುವ ಕೆಲಸ ಕಾಂಗ್ರೆಸ್ ನಾಯಕರಿಂದ ನಡೆಯುತ್ತಿದೆ. ವಿನಯ್ ಸೋಮಯ್ಯ ತಮ್ಮ ಡೆತ್ನೋಟ್‌ನಲ್ಲಿ ಯಾರೆಲ್ಲ ಹೆಸರುಗಳನ್ನು ಬರೆದಿದ್ದಾರೋ ಅವರೆಲ್ಲರ ಬಂಧನವಾಗಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರ ಕಿರುಕುಳದಿಂದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಕಾರಣವಿಲ್ಲದೆ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಸರ್ಕಾರ ಸುಳ್ಳು ಎಫ್‌ಐಆರ್ ದಾಖಲಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.












Click it and Unblock the Notifications