ಬಿಜೆಪಿಗೆ ಅನಿವಾರ್ಯ ಬಿಎಸ್‌ವೈ ಕುಟುಂಬ, ರೆಬೆಲ್ ಪಡೆ ಛಿದ್ರ ಛಿದ್ರ! Basanagouda Patil Yatnal
ಬಿಜೆಪಿ ಪಕ್ಷದಲ್ಲಿ ಇವತ್ತು ಮಿಂಚಿನ ಸಂಚಲನ ಸೃಷ್ಟಿಯಾಗಿದ್ದು, ಬಿ.ವೈ. ವಿಜಯೇಂದ್ರರ ವಿರುದ್ಧ ಮಾತನಾಡುತ್ತಿದ್ದ ವಿರೋಧಿ ಪಡೆಯ ಬಾಯಿ ಸೈಲೆಂಟ್ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತ್ರವಲ್ಲ, ಬಿ.ಎಸ್. ಯಡಿಯೂರಪ್ಪ ಪ್ರಾಬಲ್ಯ ಕೂಡ ಮತ್ತೊಮ್ಮೆ ಸಾಬೀತಾಗಿದೆ. ಬಿ.ವೈ. ವಿಜಯೇಂದ್ರಗೆ ಗೇಟ್ ಪಾಸ್ ಕೊಡಿಸುತ್ತೇವೆ ಅಂತಾ ಓಡಾಡುತ್ತಿದ್ದವರ ಬಾಲ ಕಟ್ ಆಗಿದೆ. ಹಾಗಾದ್ರೆ ಬಿಜೆಪಿಗೆ ಅನಿವಾರ್ಯವಾಯ್ತಾ ಬಿಎಸ್‌ವೈ ಕುಟುಂಬ?
ಮಾಜಿ ಸಿಎಂ ಯಡಿಯೂರಪ್ಪ & ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ರೊಚ್ಚಿಗೆದ್ದು ಮಾತನಾಡುತ್ತಿದ್ದ ಘಟನೆಗಳು ನಡೆದಿದ್ದವು. ಅಲ್ಲದೆ, ಈ ರೀತಿ ಬೆಳವಣಿಗೆ ಕರ್ನಾಟಕ ಬಿಜೆಪಿಗೆ ಬರಸಿಡಿಲು ಬಡಿಸಿತ್ತು. ಖುದ್ದು ಬಿ.ವೈ. ವಿಜಯೇಂದ್ರ ಬಹಿರಂಗವಾಗಿ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೊಚ್ಚಿಗೆದ್ದು ಹೇಳಿಕೆ ನೀಡಿದ್ದರು. ಇಷ್ಟಾದರೂ ಬಿ.ವೈ. ವಿಜಯೇಂದ್ರಗೆ ಗೇಟ್ ಪಾಸ್ ಕೊಡುಸುತ್ತೇವೆ, ಅಂತಾ ಸ್ವಂತ ಪಕ್ಷದ ವಿರುದ್ಧವೇ ಹೋರಾಟ ಶುರು ಮಾಡಿದ್ದರು ಬಸನಗೌಡ ಪಾಟೀಲ್ ಯತ್ನಾಳ್. ಅದರೆ ಎಲ್ಲಾ ಬೆಳವಣಿಗೆಗೆ ಭೀಕರ ಆಘಾತವನ್ನೇ ನೀಡಿದೆ ಬಿಜೆಪಿ ಹೈಕಮಾಂಡ್.

ಬಿಜೆಪಿಗೆ ಅನಿವಾರ್ಯ ಬಿಎಸ್‌ವೈ ಕುಟುಂಬ?
ಹೌದು, ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಆಗುವ ಮೂಲಕ ಹೊಸ ಸಂಚಲನ ಸೃಷ್ಟಿಯಾಗಿದೆ. ಹಾಗೇ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬ ಅದೆಷ್ಟು ಪ್ರಬಲವಾಗಿದೆ? ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಬಿಜೆಪಿ ಹೈಕಮಾಂಡ್ ನಾಯಕರಿಂದ ಕೂಡ ಸ್ಪಷ್ಟ ಸಂದೇಶ ಒಂದು ರವಾನೆ ಆಗಿದ್ದು, ಯಡಿಯೂರಪ್ಪ ಅವರ ಪುತ್ರನಿಗೆ ಪರೋಕ್ಷವಾಗಿ ಮತ್ತೆ ಮಣೆ ಹಾಕಿದ್ದಾರೆ. ಅಲ್ಲದೆ, ಯಾರೂ ಇನ್ನುಮುಂದೆ ಬಿ.ವೈ. ವಿಜಯೇಂದ್ರ ವಿರುದ್ಧ ಮಾತನಾಡದಂತೆ ಬಹಿರಂಗ ಎಚ್ಚರಿಕೆ ಕೂಡ ರವಾನೆ ಆಗಿದೆ.
2023ರ ವಿಧಾನಸಭೆ ಸೋಲಿನ ಪಾಠ?
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಬಿಜೆಪಿ ನಾಯಕರು ಬಂಡಾಯ ಏಳುವುದು ಇದೇ ಮೊದಲೇನಲ್ಲ, ಈ ಹಿಂದೆ ಕೂಡ ಹಲವು ಬಾರಿ ಇದೇ ರೀತಿಯ ಬಂಡಾಯಗಳು ತಲ್ಲಣವನ್ನೇ ಎಬ್ಬಿಸಿದ್ದವು. 2019ರಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಲವೇ ವರ್ಷದಲ್ಲಿ ಕೆಳಗೆ ಇಳಿಸಲಾಗಿತ್ತು. ಅಲ್ಲದೆ, ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಅವರನ್ನ ಕೂರಿಸಲಾಗಿತ್ತು. ಈ ಮೂಲಕ ಬಿಎಸ್‌ವೈ ವಿರೋಧಿ ಬಣ ಗೆದ್ದು ಬೀಗಿತ್ತು. ಆದರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸೋಲು ಈ ಎಲ್ಲಾ ಕ್ರಮಗಳಿಗೆ ಉತ್ತರ ನೀಡಿತ್ತು.
ಭವಿಷ್ಯದಲ್ಲಿ ಮತ್ತೆ ಹಿಂಗೆ ಆಗಲ್ವಾ?
ಹೀಗೆ 2023ರ ವಿಧಾನಸಭೆ ಚುನಾವಣೆ ಸೋಲಿನ ಪಾಠವೇ ಇದೀಗ ಬಿ.ವೈ. ವಿಜಯೇಂದ್ರಗೆ ಮತ್ತೆ ಮಣೆ ಹಾಕಲು ಕಾರಣ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಪದೇ ಪದೇ ಯತ್ನಾಳ್ ಕೂಡ ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಿದ್ದ ಆರೋಪ ಇತ್ತು. ಬಿಜೆಪಿ ಹೈಕಮಾಂಡ್ ಈ ಎಲ್ಲಾ ಬೆಳವಣಿಗೆ ನೋಡಿ ಇದೀಗ ಖಡಕ್ ಕ್ರಮವನ್ನೇ ಕೈಗೊಂಡಿದೆ. ಹಾಗೇ ಮುಂದಿನ ದಿನಗಳಲ್ಲಿ ಮತ್ತೆ ಯಾರೂ ಈ ರೀತಿಯ ವರ್ತನೆ ತೋರಿಸದಂತೆ ಸಂದೇಶ ಕೊಟ್ಟಿದೆ.












Click it and Unblock the Notifications