ಫಟಾಫಟ್ ಮ್ಯಾನ್ ಹೋಲ್ ಬಂತು; ರಗಳೆ ತಪ್ಪಿತು
ಬೆಂಗಳೂರು, ಸೆಪ್ಟೆಂಬರ್ 13: ಇತ್ತಿತ್ಲಾಗೆ ಬಿಡಿ ಎಲ್ಲವೂ ರೆಡಿಮೇಡ್ ಆಗಿ ದಿಢೀರನೆ ಫಟಾಫಟ್ ಆಗಿ ಬಹುತೇಕ ಎಲ್ಲವೂ ಕೈಗೆಟುಕುತ್ತಿದೆ.
ಅದಕ್ಕೂ ಮುನ್ನ ನೀವು ಅನುಭವಿಸಿರಬಹುದಾದ ಒಂದು ಸಮಸ್ಯೆಯನ್ನು ಇಲ್ಲಿ ಹೇಳಬೇಕಾಗಿದೆ. ಈ ಮ್ಯಾನ್ ಹೋಲ್ ಗಳ ಬಗ್ಗೆ ಕೇಳಿದ್ದೀರಿ, ನೋಡಿದ್ದೀರಿ. ಅದು ಸಮಸ್ಯೆಯ ಕೂಪವೂ ಆಗುತ್ತದೆ. ಮೃತ್ಯುಕೂಪವೂ ಆಗುತ್ತದೆ ಎಂಬುದು ತಿಳಿದಿದೆ. ಈ ಮ್ಯಾನ್ ಹೋಲ್ ಕೆಟ್ಟು ನಿಂತರೆ ಅದು ನರಕಸದೃಶವೆ ಸರಿ. ಸುಮುತ್ತಲ ಜನ ಭಾರತಿ ಪಡಿಪಾಲು ಪಡಬೇಕಾಗುತ್ತದೆ.
ಆಯ್ತು ಸಮಸ್ಯೆ ನಿವಾರಿಸ್ತೀವಿ. ಮ್ಯಾನ್ ಹೋಲ್ ಸರಿಪಡಿಸ್ತೀವಿ ಎಂದು ಸಂಬಂಧಪಟ್ಟ ಮುನ್ಸಿಪಾಲಿಟಿಯವರು ಬಂದರೋ ಬಿಡಿ ಅದೂ ರಗಳೆಯೇ... ಅದು ಕನಿಷ್ಠ ಒಂದು ವಾರದ ಪ್ರೋಗ್ರಾಮ್. ಹೊಸ ಮ್ಯಾನ್ ಹೋಲ್ ನಿರ್ಮಿಸಲು ಸಿಬ್ಬಂದಿಯೂ ಹರಸಾಹಸ ಪಡುತ್ತಾರೆ. ರಸ್ತೆಯಲ್ಲಿ ಸುಗಮ ಸಂಚಾರಕ್ಕೂ ಧಕ್ಕೆ.
ಆದರೆ ಇನ್ಮುಂದೆ ಇಂತಹ ರಗಳೆ ಉದ್ಭವಿಸುವುದಿಲ್ಲ. ಏಕೆಂದರೆ ಫಟಾಫಟ್ ಮೇಲ್ಸೇತುವೆ/ ಕೆಳಸೇತುವೆಗಳ ನಿರ್ಮಾಣದಂತೆ ದಿಢೀರನೆ ಮ್ಯಾನ್ ಹೋಲ್ ಅಳವಡಿಸಬಹುದಾಗಿದೆ. ಇದಕ್ಕಾಗಿ ರೆಡಿಮೇಡ್ ಮ್ಯಾನ್ ಹೋಲ್ ಗಳು ಬೆಂಗಳೂರಿಗೆ ಬಂದಾಗಿದೆ. ಎಲ್ಲೂ ತಯಾರಾದ ಪ್ಲಾಸ್ಟಿಕ್ ಮ್ಯಾನ್ ಹೋಲ್ ಈ ಸಮಸ್ಯೆಗೆ ಪರಿಹಾರಾರ್ಥಾವಾಗಿ ಕಾಣಿಸಿಕೊಂಡಿದೆ.

Plastic Manholeನಲ್ಲಿ ಅಸಲಿಗೆ ರಿಪೇರಿ ಎಂಬ ಮಾತು ದೂರವೇ ಉಳಿಯುತ್ತದೆ. ಏಕೆಂದರೆ ಪ್ಲಾಸ್ಟಿಕ್ ಮ್ಯಾನ್ ಹೋಲ್ ಗಟ್ಟಿಮುಟ್ಟಿನ ದೀರ್ಘಬಾಳಿಕೆಯದ್ದಾಗಿರುತ್ತವೆ. ಜತೆಗೆ ಅವುಗಳನ್ನು ಮ್ಯಾನ್ ಹೋಲ್ ಸ್ಥಳದಲ್ಲೇ ಗಾರೆ/ಇಟ್ಟಿಗೆ/ಸಿಮೆಂಟ್ ಹರಡಿಕೊಂಡು ನಿರ್ಮಿಸುವ ಗೊಡವೆಯೂ ಇಲ್ಲ. ಇದು ಹೆಚ್ಚು ವೆಚ್ಚದಾಯಕವೂ ಅಲ್ಲ. 30-40 ಸಾವಿರದಲ್ಲಿ ಸುಭದ್ರ ಪ್ಲಾಸ್ಟಿಕ್ ಮ್ಯಾನ್ ಹೋಲ್ ಅಳವಡಿಸಬಹುದು.
ಶೇಷಾದ್ರಿಪುರಂ ಕಾನೂನು ಕಾಲೇಜು ಮುಂಭಾಗದಲ್ಲಿ ಮೊನ್ನೆ ಇಂತಹ ಒಂದು Plastic Manhole ಅನ್ನು ಯಶಸ್ವಿಯಾಗಿ ಅಳವಡಿಸಲಾಗಿದೆ. ಬೆಂಗಳೂರು ಜಲಮಂಡಳಿ (BWSSB) ಪ್ರಾಯೋಗಿಕವಾಗಿ ಇದನ್ನು ಅಳವಡಿಸಿದೆ.
ಸದ್ಯದಲ್ಲೇ ಊರ್ವಶಿ ಟಾಕೀಸ್, ಜಯಮಹಲ್ ರಸ್ತೆ, ಮೈಸೂರು ರಸ್ತೆ, ಬಿಎಚ್ಇಎಲ್ ಬಳಿಯೂ ಪ್ಲಾಸ್ಟಿಕ್ ಮ್ಯಾನ್ ಹೋಲ್ ಗಳನ್ನು ಹಾಕಲಾಗುವುದು. ಮುಂದೆ ಇಡೀ ರಾಜಧಾನಿಯಲ್ಲಿ ಪ್ಲಾಸ್ಟಿಕ್ ಮ್ಯಾನ್ ಹೋಲ್ ಗಳನ್ನೇ ಅಳವಡಿಸುವ ಇರಾದೆಯೂ BWSSBಗೆ ಇದೆ. ಶುಭಸ್ಯ ಶೀಘ್ರಂ!












Click it and Unblock the Notifications